ಕೇಂದ್ರಿಯ ಮಾದರಿ 176 ಪಬ್ಲಿಕ್ ಸ್ಕೂಲ್ ಆರಂಭ
ಮಂಡ್ಯ

ಕೇಂದ್ರಿಯ ಮಾದರಿ 176 ಪಬ್ಲಿಕ್ ಸ್ಕೂಲ್ ಆರಂಭ

September 9, 2018

ಚಿನಕುರಳಿ: ಕೇಂದ್ರಿಯ ವಿದ್ಯಾಲಯದ ಮಾದರಿ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿ 176 ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳನ್ನು ಆರಂಭಿಸುತ್ತಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ 5 ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳು 1ರಿಂದ 12 ತರಗತಿವರೆಗೆ ವ್ಯಾಸಂಗ ಮಾಡಲಿದ್ದಾರೆ. 176 ಶಾಲೆಗಳನ್ನು ಪ್ರತಿ ತಾಲೂಕಿಗೆ ಒಂದರಂತೆ ನೀಡುತ್ತಿದ್ದೇವೆ. ಪಾಂಡವಪುರ ತಾಲೂಕಿನಲ್ಲಿ ಚಿನಕುರಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜನ್ನೇ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ ಆಯ್ಕೆ ಮಾಡಲಾಗಿದೆ. ಸಾಧ್ಯವಾದರೆ ಮುಂದಿನ ವರ್ಷದಿಂದ ಎಲ್‍ಕೆಜಿ, ಯುಕೆಜಿ ಸಹ ಪ್ರಾರಂಭಿಸಲಾಗುವುದು ಎಂದರು.

ಈ ಹಿಂದೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಯಾಗಿದ್ದಾಗ ನಾನು ಚಿನಕುರಳಿ ಗ್ರಾಮಕ್ಕೆ ಹಿಂದುಳಿದ ವರ್ಗಗಳ ಹಾಸ್ಟೆಲ್ ಉದ್ಘಾಟನೆಗಾಗಿ ಬಂದಿದ್ದೆ. ಆದರೆ, ಪ್ರಸ್ತುತ ಶಿಕ್ಷಣ ಸಚಿವನಾಗಿ ಅದೇ ಚಿನಕುರಳಿ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಬಂದಿರುವುದು ನನಗೆ ಖುಷಿ ತಂದಿದೆ ಎಂದರು.

ಶಿಕ್ಷಕರು ಉಳಿದಿರುವ ಅಲ್ಪ ಸಮಯದಲ್ಲಿ ಮಕ್ಕಳ ಓದುವಿಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿ ಹೆಚ್ಚಿನ ಫಲಿತಾಂಶ ಬರುವಂತೆ ಕ್ರಮ ವಹಿಸಬೇಕು. ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಾಗೇ ಶಾಲೆ ಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿ ಪಾಠ ಪ್ರವಚನ ಚೆನ್ನಾಗಿ ನಡೆಯುತ್ತಿದೆಯೇ, ಮಕ್ಕಳಿಗೆ ಸರಿಯಾಗಿ ಬಿಸಿಯೂಟ ದೊರೆಯುತ್ತಿದೆಯೇ ಎನ್ನುವ ಬಗ್ಗೆ ಪರಿಶೀಲಿಸಬೇಕು. ಅಲ್ಲದೇ ಉತ್ತಮ ಕೆಲಸ ಮಾಡುವ ಶಿಕ್ಷಕರ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಶಿಕ್ಷಕರು ಮಕ್ಕಳ ಜೊತೆ ಬೆರೆತು ಅವರಿಗೆ ಓದುವಿನ ಕಡೆಗೆ ಆಸಕ್ತಿ ಬರುವಂತೆ ಮಾಡಿದರೇ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಿ ಬರಲಿದೆ ಎಂದರು.

ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಚಿನಕುರಳಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಧನ್ಯವಾದಗಳು. ಚಿನಕುರಳಿ ಗ್ರಾಮ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ನವೆಂಬರ್-ಡಿಸೆಂಬರ್‍ನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಶಾಂತಲ, ಅನುಸೂಯ, ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಉಪಾಧ್ಯಕ್ಷ ರವಿಕುಮಾರ್, ತಾಪಂ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಸಿ.ಎಸ್.ಗೋಪಾಲಗೌಡ, ಗೋವಿಂದಯ್ಯ, ಗೀತಾ, ಗ್ರಾಪಂ ಅಧ್ಯಕ್ಷೆ ಪ್ರೇಮಮ್ಮ, ಉಪಾಧ್ಯಕ್ಷ ನಾಗರಾಜು, ಉಪಾ ನಿರ್ದೇಶಕಿ ಗೀತಾ, ಪ್ರಾಂಶುಪಾಲೆ ಉಶಾರಾಣಿ, ಬಿಇಓ ಮಲ್ಲೇಶ್ವರಿ, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್ ಸೇರಿದಂತೆ ಹಲವರಿದ್ದರು.

Translate »