ಕಡೇ ಶ್ರಾವಣ ಶನಿವಾರ: ಮಂಡ್ಯ ಜಿಲ್ಲಾದ್ಯಂತ ವಿಶೇಷ ಪೂಜೆ
ಮಂಡ್ಯ

ಕಡೇ ಶ್ರಾವಣ ಶನಿವಾರ: ಮಂಡ್ಯ ಜಿಲ್ಲಾದ್ಯಂತ ವಿಶೇಷ ಪೂಜೆ

September 9, 2018

ಮಂಡ್ಯ:  ಕಡೇ ಶ್ರಾವಣ ಶನಿವಾರದ ಪ್ರಯುಕ್ತ ಜಿಲ್ಲಾದ್ಯಂತ ಶನಿ ದೇವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮಂಡ್ಯ, ಮದ್ದೂರು, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ವಿವಿಧೆಡೆ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಭಕ್ತಿಭಾವ ಮೆರೆದ ಬಗ್ಗೆ ವರದಿಯಾಗಿದೆ.

ಮಂಡ್ಯ: ಮಂಡ್ಯದ ಬನ್ನೂರು ರಸ್ತೆಯ ಶನೇಶ್ವರ, ಹೊಸಹಳ್ಳಿಯ ಶನೇಶ್ವರ ಸ್ವಾಮಿ, ಪೇಟೆ ಬೀದಿಯ ಲಕ್ಷ್ಮೀನರಸಿಂಹ, ಕಾಳಿಕಾಂಬ, ಮಂಡ್ಯ- ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಾಲಯ, ಸಾತನೂರಿನ ಕಂಬದ ನರಸಿಂಹಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತರಿಗಾಗಿ ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀರಾಮಚಂದ್ರ, ಚೆಲುವನಾರಾಯಣಸ್ವಾಮಿಗೆ ಅರ್ಚಕ ಲಕ್ಷ್ಮೀಶ್ ನೇತೃತ್ವದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ದೇವರಿಗೆ ವಿಶೇಷ ಹೂವಿ ನಾಲಂಕಾರ ಮಾಡಲಾಗಿತ್ತು. ಆರತಿ ಉಕ್ಕಡ ದಲ್ಲಿಯೂ ಅಹಲ್ಯಾದೇವಿ ದೇವಸ್ಥಾನ ದಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಮೇಲುಕೋಟೆ: ಶ್ರದ್ಧಾಭಕ್ತಿಯಿಂದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದ 50ಸಾವಿರಕ್ಕೂ ಹೆಚ್ಚು ಭಕ್ತರು ಮೇಲುಕೋಟೆಯಲ್ಲಿ ಕಡೆಯ ಶನಿವಾರದ ಸಂಭ್ರಮಕ್ಕೆ ಸಾಕ್ಷಿಯಾದರು. ಪಟ್ಟಣದಲ್ಲಿ ತುಂಬಿ ತುಳುಕಿದ ಭಕ್ತರ ದಂಡು ಗೋವಿಂದ ನಾಮ ಸ್ಮರಿಸುವುದರೊಂದಿಗೆ ಸಾಕ್ಷಾತ್ ಭೂ ವೈಕುಂಠವನ್ನೇ ಸೃಷ್ಟಿಸಿದರು. ಬಹುತೇಕ ಗ್ರಾಮೀಣ ಭಾಗದಿಂದ ಕುಟುಂಬ ಸಮೇತ ರಾಗಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಮಣೆಸೇವೆ, ಮುಡಿ ಹರಕೆ ಸಲ್ಲಿಸಿ ಕಲ್ಯಾಣಿ, ಮಂಟಪಗಳ ಬಳಿ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಲ್ಯಾಣಿಯಲ್ಲಿ ಸ್ನಾನ ಮಾಡಿದ ಭಕ್ತರು ದಾಸಯ್ಯರ ಆಶೀರ್ವಾದ ಪಡೆದು ನಾಮಧರಿಸಿ ಗುಂಪಾಗಿ ದೇವಾ ಲಯಗಳಿಗೆ ಬರುತ್ತಿದ್ದ ದೃಶ್ಯಗಳು ಭಕ್ತಿ ಭಾವ ಹೆಚ್ಚಿಸಿತ್ತು.

ಕೊನೆಯ ಶ್ರಾವಣ ಶನಿವಾರದ ಪ್ರಯುಕ್ತ ದೇವಾಲಯದಲ್ಲಿ ಪೂಜಾ ಕೈಂಕರ್ಯವನ್ನು ಬೆಳಿಗ್ಗೆ 5.30ಕ್ಕೆ ಆರಂಭಿಸಿ 7 ಗಂಟೆ ವೇಳೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಿಗ್ಗೆ 6 ಗಂಟೆಯಿಂದ ಸಂಜೆವರೆಗೂ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ಬೆಟ್ಟದೊಡೆಯ ಯೋಗ ನರಸಿಂಹಸ್ವಾಮಿ ಬೆಟ್ಟದ ದೇವಾಲಯ ದಲ್ಲಿ ಸಹ ಭಕ್ತರ ದಟ್ಟಣೆ ಹೆಚ್ಚಾಗಿ ಬೆಟ್ಟದ ತಳಭಾಗದ ಸತ್ಯನಾರಾಯಣಸ್ವಾಮಿ ದೇವಾಲಯದವರೂ ತಲುಪಿತ್ತು.

ಭಕ್ತರ ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಪೊಲೀಸರು ಆಸ್ಪತ್ರೆಯ ಮುಂಭಾ ಗದ ಮೈದಾನ ಮತ್ತು ಇತರ ಕಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡಿ ಸಂಚಾರ ದಟ್ಟಣೆ ಯನ್ನು ನಿಯಂತ್ರಿಸಿದ್ದರು. ಜಿಪಂ ಸಿಇಓ ಯಾಲಕ್ಕಿಗೌಡ, ಕೆಆರ್‍ಡಿಎಲ್ ನಿರ್ದೇ ಶಕ ಕೆಂಪೇಗೌಡ, ವಕೀಲ ಅರವಿಂದರಾಘ ವನ್, ಡಿವೈಎಸ್‍ಪಿ ಮಂಜುನಾಥ್, ರೈತ ಸಂಘದ ಮುಖಂಡ ವಿಜಯಕುಮಾರ್, ಮನ್ ಮುಲ್ ಉಪಾಧ್ಯಕ್ಷ ರವಿಕುಮಾರ್ ಸೇರಿದಂತೆ ಹಲವು ಗಣ್ಯರು ದೇವರ ದರ್ಶನ ಪಡೆದರು. ದೇವಾಲಯದ ಇಓ ನಂಜೇಗೌಡ, ಎಸ್‍ಐ ಮೋಹನ್, ಎಎಸ್‍ಐ ಮಲ್ಲಪ್ಪ ಮತ್ತು ಸಿಬ್ಬಂದಿ ಭಕ್ತರ ಸುಗಮ ದರ್ಶನಕ್ಕೆ ಶ್ರಮಿಸಿದರು.

ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಕಡಲೆಪುರಿ, ಪುಳಿಯೋಗರೆ, ಮಕ್ಕಳ ಆಟಿಕೆ ಸಾಮಗ್ರಿಗಳ ವ್ಯಾಪಾರಿ ಗಳು ಭರ್ಜರಿ ವ್ಯಾಪಾರ ಮಾಡಿದರು. ಮೇಲುಕೋಟೆ ಶನೀಶ್ವರಸ್ವಾಮಿ ದೇವಸ್ಥಾನ ಹಾಗೂ ವೀರಾಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚಿನಕುರಳಿ ಶಿವಕುಮಾರ್ ದಂಪತಿ ಸಮೇತ ಆಗಮಿಸಿ ದೇವರ ದರ್ಶನ ಪಡೆದು ಸಾವಿರ ಭಕ್ತರಿಗೆ ಪುಳಿಯೋಗರೆ ಮತ್ತು ಸಕ್ಕರೆ ಪೊಂಗಲ್ ಪ್ರಸಾದ ವಿತರಿಸಿದರು.

ಮದ್ದೂರು: ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಾಲಯ ದಲ್ಲಿಯೂ ವಿಶೇಷ ಪೂಜಾ ಕಾರ್ಯ ಗಳು ಜರುಗಿದವು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಆಂಜ ನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.

ಕೆ.ಆರ್.ಪೇಟೆ: ಕಡೇ ಶ್ರಾವಣ ಶನಿ ವಾರದ ಅಂಗವಾಗಿ ತಾಲೂಕಿನ ಬೂಕನಕೆರೆ ಹೋಬಳಿ ಬೆಟ್ಟದಹೊಸೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀಉದ್ಬವ ಬೋಳಾರೆ ರಂಗನಾಥಸ್ವಾಮಿ 4ನೇ ವರ್ಷದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಪಾಂಡವ ಪುರ ಎಸಿ ವಿ.ಆರ್.ಶೈಲಜಾ, ತಹಶೀಲ್ದಾರ್ ಎಂ.ಶಿವಮೂರ್ತಿ, ಟ್ರಸ್ಟಿನ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಪದಾಧಿಕಾರಿಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ಬೋಳಾರೆ ರಂಗನಾಥಸ್ವಾಮಿ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ 1.60 ಕೋಟಿ ರೂ. ಅನುದಾನವನ್ನು ವಿವಿಧ ಯೋಜನೆಯಡಿ ನೀಡಲಾಗಿದೆ. ಅನುದಾನ ವನ್ನು ದೇವಾಲಯ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಭಕ್ತಾದಿಗಳಿಗೆ ಒದಗಿಸಿಕೊಡುವ ಉದ್ದೇಶಕ್ಕಾಗಿ ನೀಡಲಾಗಿದೆ. ಅಲ್ಲದೇ ದಾನಿಗಳೂ ಸಹ ದೇಣಿಗೆ ನೀಡಿದ್ದಾರೆ. ಭಕ್ತಾದಿಗಳು ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿರುವುದು ಶ್ಲಾಘನೀಯ.

ಶ್ರೀ ಕ್ಷೇತ್ರದಲ್ಲಿ ಇನ್ನೂ ಆಗಬೇಕಾಗಿರುವ ಅಭಿವೃದ್ಧಿಗೆ ಕೆಲಸಗಳಿಗೆ ಶಾಸಕ ನಾರಾಯಣಗೌಡರ ಕ್ಷೇತ್ರಾಭಿವೃದ್ಧಿ ನಿಧಿ ಜೊತೆಗೆ ನನ್ನ ಕ್ಷೇತ್ರಾಭಿವೃದ್ಧಿ ನಿಧಿಯಿಂದಲೂ ಅಗತ್ಯ ಅನುದಾನ ನೀಡುವ ಭರವಸೆ ನೀಡಿದರು. ಜಿಪಂ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ ಮಾತನಾಡಿ, ತಮ್ಮ ಜಿಪಂ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಶೌಚಾಲಯ ವ್ಯವಸ್ಥೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

Translate »