ಹಿಂದುಳಿದ ವರ್ಗಕ್ಕೆ ಮೀಸಲಾತಿಗೆ ಶತಮಾನ: ಮೈಸೂರಲ್ಲಿ ಸಂಭ್ರಮ
ಮೈಸೂರು

ಹಿಂದುಳಿದ ವರ್ಗಕ್ಕೆ ಮೀಸಲಾತಿಗೆ ಶತಮಾನ: ಮೈಸೂರಲ್ಲಿ ಸಂಭ್ರಮ

August 24, 2018

ಮೈಸೂರು: ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಅಂದಿನ ಮೈಸೂರು ಸಂಸ್ಥಾನವು ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶೇ.96ರಷ್ಟು ಮೀಸಲಾತಿ ಕಲ್ಪಿಸಿ ಇಂದಿಗೆ ಶತಮಾನದ ಸಂಭ್ರಮ.

ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದೇಶದಂತೆ ಮಿಲ್ಲರ್ ಆಯೋಗ ರಚನೆಯಾಗಿ ಹಿಂದುಳಿದ ವರ್ಗಗಳು ಹಾಗೂ ದಲಿತರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆಯುವಂತಾಯಿತು. ಇಂತಹ ಮಹತ್ವದ ಮೀಸಲಾತಿ ವ್ಯವಸ್ಥೆಗೆ ಇಂದು ಶತಮಾನ ತುಂಬಿದ್ದು, ಇದನ್ನು `ಆಗಸ್ಟ್ ಕ್ರಾಂತಿ’ ಎಂದು ಮೈಸೂರು ನಗರದಲ್ಲಿ ಗುರುವಾರ ಸ್ಮರಣೆ ಮಾಡಲಾಯಿತು.

ಸಮಾಜವಾದಿ ಪಕ್ಷದ ಮೈಸೂರು ನಗರ ಮತ್ತು ಜಿಲ್ಲಾ ಘಟಕದ ವತಿಯಿಂದ ಕೆಆರ್ ವೃತ್ತದಲ್ಲಿರುವ ಮಹರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ `ಆಗಸ್ಟ್ ಕ್ರಾಂತಿ’ ಘೋಷಣೆ ಮೂಲಕ ಸಂಭ್ರಮಿಸಲಾಯಿತು.
ಮತ್ತೊಂದು `ಆಗಸ್ಟ್ ಕ್ರಾಂತಿ’ಗೆ ಕರೆ: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನವು ಆ.31ರಂದು ನಡೆಯಲಿದ್ದು, ಮತದಾರರು ಅಭ್ಯರ್ಥಿಗಳ ಹಣ ನೋಡಿ ಮತದಾನ ಮಾಡದೇ ಗುಣ ನೋಡಿ ಮತದಾನ ಮಾಡುವ ಮೂಲಕ ಹಣವಿದ್ದರೆ ಚುನಾವಣೆ ಎಂಬ ಸಿದ್ಧಸೂತ್ರವನ್ನು ಕೊನೆಗಾಣಿಸಿ ಮತ್ತೊಂದು ಆಗಸ್ಟ್ ಕ್ರಾಂತಿಗೆ ನಗರದ ಜನತೆ ನಾಂದಿ ಹಾಡಬೇಕು ಎಂದು ಸಮಾಜವಾದಿ ಪಕ್ಷದ ಕೋರಿದೆ.

ನಿವೃತ್ತ ಪ್ರಾಧ್ಯಾಪಕ ಪ್ರೊ.ನಂಜರಾಜ ಅರಸ್, ಸಾಹಿತಿ ಬನ್ನೂರು ಕೆ.ರಾಜು, ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಕೆ.ಗೌಡ, ನಗರಾಧ್ಯಕ್ಷ ರವೀಂದ್ರಕುಮಾರ್, ಮುಖಂಡರಾದ ಹುಣಸೂರು ಸತ್ಯಪ್ಪ, ವರದರಾಜು, ರಾಕೇಶ್‍ರಾವ್ ಮತ್ತಿತರರು ಪಾಲ್ಗೊಂಡಿದ್ದರು.

Translate »