ಮೈಸೂರಲ್ಲಿ ಸುಗಮವಾಗಿ ನಡೆದ ಸಿಇಟಿ
ಮೈಸೂರು

ಮೈಸೂರಲ್ಲಿ ಸುಗಮವಾಗಿ ನಡೆದ ಸಿಇಟಿ

April 30, 2019

ಮೈಸೂರು: ಇಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್‍ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೈಸೂರಿನ 21 ಕೇಂದ್ರಗಳಲ್ಲಿ ಸೋಮವಾರ ಸುಗಮವಾಗಿ ನಡೆಯಿತು. ಮೈಸೂರಿನ 21 ಕೇಂದ್ರಗಳಲ್ಲಿ ಒಟ್ಟು 10,463 ಮಂದಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ವಿಷಯಗಳಿಗೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಇಂದು ನಡೆದ ಪರೀಕ್ಷೆಯಲ್ಲಿ ಶೇ.10ರಿಂದ 20ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಹೇಳಲಾಗಿದೆ. ನಾಳೆ (ಏ.30) ಬೆಳಿಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ, ಪರೀಕ್ಷಾ ಕೇಂದ್ರಗಳಿಗೆ ಆಯಾಯ ಕಾಲೇಜು ಪ್ರಾಂಶುಪಾಲರನ್ನು ಉಪ ಮುಖ್ಯ ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಒಬ್ಬರು ವೀಕ್ಷಕರು ಹಾಗೂ ಇಬ್ಬರು ಸಿಟ್ಟಿಂಗ್ ಸ್ಕ್ವಾಡ್ ವ್ಯವಸ್ಥೆ ಮಾಡಿದ್ದು, ಪ್ರಶ್ನೆ ಪತ್ರಿಕೆಗಳ ಬಗ್ಗೆ ನಿಗಾ ವಹಿಸಲು ಒಬ್ಬರು ಕÀಸ್ಟೋಡಿಯನ್ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರವೊಂದಕ್ಕೆ 400ರಿಂದ 700ರವರೆಗೆ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾ ಗಿದೆ. ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಪತ್ರಿಕೆಗಳನ್ನು ಕೇಂದ್ರಗಳಿಗೆ ಕಳುಹಿಸಲು ಖಜಾನೆಯಿಂದ 4 ಮಾರ್ಗಗಳ ವ್ಯವಸ್ಥೆ ಮಾಡಿದ್ದು, ಇದರ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಮೇ 1ರಂದು ಉತ್ತರ ಪತ್ರಿಕೆಗಳನ್ನು ಬೆಂಗಳೂರಿಗೆ ರವಾನಿಸಲಾಗುವುದು ಎಂದು ವಿವರಿಸಿದರು.

7 ಬೆಲ್ ವ್ಯವಸ್ಥೆ: ರಾಜ್ಯದಲ್ಲಿ 431 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಪರೀಕ್ಷೆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಮಯದ ಬಗ್ಗೆ ಸೂಚಿಸಲು 7 ಬೆಲ್ ಹೊಡೆಯುವ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿ ತೋರಿಸಿ ಕೊಠಡಿ ಪ್ರವೇಶಿಸಲು 10.20ಕ್ಕೆ ಮೊದಲ ಬೆಲ್ ಆಗಲಿದೆ. 10.30ಕ್ಕೆ ಆಗುವ ಎರಡನೇ ಬೆಲ್‍ನ ಬಳಿಕ ಪ್ರಶ್ನೆ ಪತ್ರಿಕೆ ವಿತರಿಸಲಾಗುತ್ತದೆ. 10.40ರ ಮೂರನೇ ಬೆಲ್ ಬಾರಿಸಿದ ಬಳಿಕ ಓಎಂಆರ್ ಶೀಟ್‍ನಲ್ಲಿ ಉತ್ತರ ಬರೆಯಲು ಆರಂಭಿಸಬಹುದು. ನಾಲ್ಕನೇ ಬೆಲ್ 11.10ಕ್ಕೆ ಆಗಲಿದ್ದು, ಇದು ಪರೀಕ್ಷೆ ಆರಂಭವಾಗಿ ಅರ್ಧ ತಾಸು ಕಳೆದಿದೆ ಎಂಬುದರ ಸೂಚಕವಾಗಿದೆ.

11.30ಕ್ಕೆ ಆಗುವ ಐದನೇ ಬೆಲ್ ಪರೀಕ್ಷೆಯ ಅವಧಿ 20 ನಿಮಿಷ ಮಾತ್ರ ಉಳಿದಿದೆ ಎಂಬುದರ ಎಚ್ಚರಿಕೆ ಗಂಟೆಯಾಗಿದೆ. 11.45ಕ್ಕೆ ಬಾರಿಸುವ ಆರನೇ ಬೆಲ್ ಪರೀಕ್ಷಾ ಅವಧಿ ಪೂರ್ಣಗೊಳ್ಳಲು ಇನ್ನು ಐದು ನಿಮಿಷ ಬಾಕಿ ಇದೆ ಎಂಬುದನ್ನು ಸೂಚಿಸಲಿದೆ. 11.50ಕ್ಕೆ ಪರೀಕ್ಷೆ ಅವಧಿ ಪೂರ್ಣಗೊಂಡಿದೆ ಎಂಬುದರ ಸೂಚಕವಾಗಿ ಕೊನೆಯ ಹಾಗೂ ಏಳನೇ ಬೆಲ್ ಬಾರಿಸಲಿದೆ.

Translate »