ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ಶೇ.64 ಮತದಾನ
ಮೈಸೂರು

ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ಶೇ.64 ಮತದಾನ

April 30, 2019

ನವದೆಹಲಿ: ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಬಹುತೇಕ ಶಾಂತಿ ಯುತವಾಗಿ ನಡೆದಿದೆ. ದೇಶದ 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇಕಡ 64ರಷ್ಟು ಮತದಾನ ದಾಖಲಾಗಿದೆ.

ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್, ಸುಭಾಷ್ ಭಾಮ್ರೆ, ಎಸ್‍ಎಸ್ ಅಹ್ಲುವಾಲಿಯಾ ಮತ್ತು ಬಿಜೆಪಿಯ ಬಾಬುಲ್ ಸುಪ್ರಿಯೊ ಹಾಗೂ ಕೇಂದ್ರ ಮಾಜಿ ಸಚಿವರಾದ ಕಾಂಗ್ರೆಸ್‍ನ ಸಲ್ಮಾನ್ ಖುರ್ಷಿದ್, ಅಧೀರ್ ರಂಜನ್ ಚೌಧರಿ, ಕನ್ನಯ್ಯ ತರಹದ ಘಟಾನುಘಟಿಗಳು ಕಣದಲ್ಲಿದ್ದಾರೆ. ಅಲ್ಲದೇ ಮುಂದಿನ ತಿಂಗಳು ಮೇ 23ರಂದು
ಚುನಾವಣಾ ಫಲಿತಾಂಶ ಅಧಿಕೃತವಾಗಿ ಹೊರಬೀಳಲಿದ್ದು, ಎಲ್ಲರೂ ಗೆಲುವಿನ ನಿರೀಕ್ಷೆಯಲ್ಲಿದ್ಧಾರೆ. ಎಂದಿನಂತೆಯೇ ಇಂದು ಕೂಡ ಬೆಳಿಗ್ಗೆ 7ರಿಂದಲೇ ಶುರುವಾದ ಮತದಾನ ಸಂಜೆ 6 ಗಂಟೆಗೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಸಿಎಂ ಮಮತಾ ಬ್ಯಾನರ್ಜಿ ತವರು ಪಶ್ಚಿಮ ಬಂಗಾಳದಲ್ಲಿ ಶೇಕಡ 77ರಷ್ಟು ಮತದಾನ ನಡೆದಿದೆ. ಮಧ್ಯಪ್ರದೇಶದಲ್ಲಿ ಶೇಕಡ 65, ರಾಜಸ್ಥಾನದಲ್ಲಿ 64.48, ಜಾರ್ಖಂಡ್‍ನಲ್ಲಿ ಶೇಕಡ 63 ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ.

ನಾಲ್ಕನೇ ಹಂತದಲ್ಲಿ ಒಟ್ಟು 900 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಘಟಾನುಘಟಿ ನಾಯಕರ ಹಣೆ ಬರಹ ಸದ್ಯ ಮತ ಪೆಟ್ಟಿಗೆಯಲ್ಲಿ ಅಡಗಿದೆ. ಬಿಗಿ ಪೆÇಲೀಸ್ ಬಂದೋಬಸ್ತ್ ನಡುವೇ 9 ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡಯದಂತೆ ಆಯೋಗ ಎಚ್ಚರವಹಿಸಿದೆ.

ಕಣದಲ್ಲಿದ್ದ ಘಟಾನುಘಟಿಗಳು: 4ನೇ ಹಂತದ ಚುನಾವಣೆಯಲ್ಲಿ ಬಿಜೆಪಿಯಿಂದ ಬಾಬುಲ್ ಸುಪ್ರಿಯೋ, ಗಿರಿರಾಜ್ ಸಿಂಗ್. ಉಪೇಂದ್ರ ಕುಶ್ವಾಹ, ಸಾಕ್ಷಿ ಮಹಾರಾಜ್ ಪೂನಂ ಮಹಾಜನ್ ಕಣದಲ್ಲಿದ್ದರೆ, ಕಾಂಗ್ರೆಸ್‍ನಿಂದ ಸಂಜಯ್ ನಿರುಪಮ್ ಮತ್ತು ಮಿಲಿಂದ್ ದೇವೋರಾ ಸೇರಿದಂತೆ ಹಲವು ನಾಯಕರು ಸ್ಪರ್ಧೆ ಮಾಡುವ ಮೂಲಕ ಅಗ್ನಿಪರೀಕ್ಷೆಗೆ ಮುಂದಾಗಿದ್ಧಾರೆ.

ಕುಟುಂಬ ರಾಜಕಾರಣ: ಇನ್ನೊಂದೆಡೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಪುತ್ರ ರಾಮಚಂದ್ರ ಪಾಸ್ವಾನ್, ಸುನೀಲ್ ದತ್ ಪುತ್ರಿ ಪ್ರಿಯಾ ದತ್, ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ಜಾರ್ಖಂಡ್‍ನ ಮಾಜಿ ಸಿಎಂ ಶಿಬು ಸೊರೇನ್ ಪುತ್ರಿ ಅಂಜನಿ ಸೊರೇನ್ ಕೂಡ ಸ್ಪರ್ಧೆಗಿಳಿದಿದ್ದು, ಕುಟುಂಬ ರಾಜಕಾರಣ ರಾರಾಜಿಸುತ್ತಿತ್ತು ಎನ್ನಲಾಗಿದೆ.

ಈ ಮಧ್ಯೆ ಜೆಎನ್‍ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಕೂಡ ಬಿಹಾರದ ಬೇಗುಸರೈ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಬಿಜೆಪಿ ಪೈರ್ ಬ್ರ್ಯಾಂಡ್ ಗಿರಿರಾಜ್ ಸಿಂಗ್ ವಿರುದ್ಧ ಕಣಕ್ಕಿಳಿದಿದ್ಧಾರೆ.

ದೀದಿ ನಾಡಲ್ಲಿ ಹಿಂಸಾಚಾರ: ಇನ್ನು ಪಶ್ಚಿಮ ಬಂಗಾಳದಲ್ಲಿ ಕೆಲವೆಡೆ ಹಿಂಸಾಚಾರ ನಡೆದಿದೆ. ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದನ್ನು ಹೊರತುಪಡಿಸಿದರೇ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ ಎಂದು ಆಯೋಗ ತಿಳಿಸಿದೆ.

ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಆಯೋಗ ಪ್ರಕರಣ ದಾಖಲಿಸಿದೆ.

ಇವಿಎಂ ದೋಷ: ಉತ್ತರ ಪ್ರದೇಶದ ಹಮೀರ್‍ಪುರದ 111ನೇ ಮತಗಟ್ಟೆಯಲ್ಲಿ ಇವಿಎಂ ದೋಷದಿಂದ ಮತದಾನ ಸ್ವಲ್ಪಕಾಲ ಸ್ಥಗಿತಗೊಂಡಿತು. ಬಳಿಕ ಚುನಾವಣಾ ಅಧಿಕಾರಿಗಳು ಆಗಮಿಸಿ ಸರಪಡಿಸಿದರು. ಇಂದು ಮತದಾನ ನಡೆದ 72 ಸೀಟುಗಳ ಪೈಕಿ 56 ಸ್ಥಾನಗಳನ್ನು 2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ಕೇವಲ 2, ಟಿಎಂಸಿ 6, ಬಿಜೆಡಿ 6 ಸೀಟುಗಳನ್ನು ಗೆದ್ದಿದ್ದವು ಎನ್ನಲಾಗಿದೆ. ನಾಲ್ಕನೇ ಹಂತದ ಚುನಾವಣೆಗಾಗಿ ಚುನಾವಣೆ ಆಯೋಗ ಒಟ್ಟು 1.40 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಿತ್ತು. ಈ ಮೂಲಕ ಸುಗಮ ಮತದಾನಕ್ಕೆ ವ್ಯಾಪಕ ವ್ಯವಸ್ಥೆ ಮಾಡಿಕೊಂಡಿತ್ತು.

Translate »