‘ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ವಿದ್ಯಾರ್ಥಿ ಸಮ್ಮೇಳನ ಸಂಶೋಧನೆಗಳು ಹೆಚ್ಚು ಆಹಾರ ಉತ್ಪಾದನೆಗೆ ಸಹಕಾರಿಯಾಗಬೇಕು
ಮೈಸೂರು

‘ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ವಿದ್ಯಾರ್ಥಿ ಸಮ್ಮೇಳನ ಸಂಶೋಧನೆಗಳು ಹೆಚ್ಚು ಆಹಾರ ಉತ್ಪಾದನೆಗೆ ಸಹಕಾರಿಯಾಗಬೇಕು

July 14, 2018

ಮೈಸೂರು:  ಜನಸಾಮಾನ್ಯರಿಗೆ ಅನುಕೂಲ ಆಗುವಂತಹ ಸಂಶೋಧನೆಗಳು ಹೆಚ್ಚಾದರೆ ಮಾತ್ರ ಸಂಶೋಧನೆಗಳಿಗೆ ಹೆಚ್ಚು ಮಹತ್ವ, ಅರ್ಥ ಸಿಗುತ್ತವೆ ಎಂದು ಮೈಸೂರಿನ ಸಿಎಸ್‍ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕ ಜೀತೇಂದ್ರ ಜೆ.ಜಾದವ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಸಿಎಫ್‌ಟಿಆರ್‌ಐ ಸಭಾಂಗಣದಲ್ಲಿ `ಜೀವಿ ವಿಜ್ಞಾನ ಸಂಶೋಧನೆಗಳ ಮುನ್ನಡೆ’ ಕುರಿತ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಇಂದು ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಅವುಗಳಿಗೆ ಕಾಡಿನಲ್ಲಿ ಆಹಾರದ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಸಂಶೋಧಕರು, ಕಾಡು ಪ್ರಾಣಿಗಳು ನಾಡಿಗೆ ಬರದೆ ಕಾಡಿನಲ್ಲಿ ಅವುಗಳಿಗೆ ಆಹಾರ ಸಿಗುವ ರೀತಿಯಲ್ಲಿ ಸಂಶೋಧನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಆಹಾರ ಉತ್ಪಾದನೆ ಹೆಚ್ಚಿಸುವಂತಹ ಸಂಶೋಧನೆಗಳು ಆಗಬೇಕು. ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಸಮ್ಮೇಳನದಲ್ಲಿ ಸುಮಾರು 180ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೊಸ ಪರಿಕಲ್ಪನೆಗಳನ್ನು ಬೆಳೆಸಲು ಹಾಗೂ ಜೀವಿ ವಿಜ್ಞಾನದಲ್ಲಿನ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಯುವ ಮನಸ್ಸುಗಳಲ್ಲಿ ಸಂಶೋಧನೆಯ ಕಿಡಿ ಹೊತ್ತಿಸುವ ಉದ್ದೇಶದ ಈ ಕಾರ್ಯಾಗಾರದಲ್ಲಿ ಆಂತರಿಕ ರೋಗ ನಿರೋಧಕತೆ, ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸುವ ಉಪಾಯಗಳು, ಮಾನವನ ಕುರಿತ ಸಂಶೋಧನೆಗಳ ನೀತಿ ಸಂಹಿತೆ, ಕ್ಯಾನ್ಸರ್ ನಿಯಂತ್ರಣದಲ್ಲಿ ಸೂಕ್ಷ್ಮ ಜೀವಿಗಳು, ಮೈಸೂರು ನಗರವನ್ನು ನವೋದ್ಯಮಗಳ ಕೇಂದ್ರವನ್ನಾಗಿ ಮಾಡುವುದು ಹೇಗೆ? ಎಂಬಿತ್ಯಾದಿ ಹಲವು ಆಸಕ್ತಿಕರ ವಿಷಯಗಳ ಬಗ್ಗೆ ಸಂಶೋಧಕ ವಿದ್ಯಾರ್ಥಿಗಳಿಗೆ ತಜ್ಞರು ಮಾಹಿತಿ ನೀಡಿದರು.

ಸಿಎಫ್‌ಟಿಆರ್‌ಐ ಪಿಹೆಚ್.ಡಿ ಸಮನ್ವಯಕರಾದ ಡಾ.ನಂದಿನಿ ಶೆಟ್ಟಿ, ಮುಖ್ಯ ವಿಜ್ಞಾನಿ ಮತ್ತು ಸಲಹೆಗಾರ ಡಾ.ಆರ್.ಸುಬ್ರಹ್ಮಣಿಯನ್, ಸಮ್ಮೇಳನದ ಸಂಚಾಲಕ ಅಬ್ದುಲ್ ಮಜೀದ್, ಮೈಸೂರು ವಿವಿ ಜೀವ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೆ.ಕೆಂಪರಾಜು, ಸಂಘಟನಾ ಕಾರ್ಯದರ್ಶಿ ವಿ.ಪಿ.ಮಹೇಂದ್ರ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »