ನಾನಲ್ಲ, ನನ್ನ ಹೆಣವೂ ಬಿಜೆಪಿ ಬಳಿ ಸುಳಿಯಲ್ಲ: ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ
ಮೈಸೂರು

ನಾನಲ್ಲ, ನನ್ನ ಹೆಣವೂ ಬಿಜೆಪಿ ಬಳಿ ಸುಳಿಯಲ್ಲ: ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ

July 14, 2018

ಮೈಸೂರು: ಗೆದ್ದಾಗ ಒಂದು ಪಕ್ಷ, ಸೋತಾಗ ಮತ್ತೊಂದು ಪಕ್ಷಕ್ಕೆ ಹಾರಲು ರಾಜಕೀಯವೇನು ಮರಕೋತಿ ಆಟವಲ್ಲ. ಈ ಹಿಂದಿನಿಂದಲೂ ತನ್ನದೇ ಆದ ರಾಜಕೀಯ ಸಿದ್ಧಾಂತದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕೋಮುವಾದಿ ಪಕ್ಷದ ಸಮೀಪಕ್ಕೂ ನಾನಲ್ಲ, ನನ್ನ ಹೆಣವು ಸುಳಿಯುವುದಿಲ್ಲ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ತಿಳಿಸುವ ಮೂಲಕ ಬಿಜೆಪಿ ಸೇರಲಿದ್ದಾರೆ ಎಂದು ಹರಡಿರುವ ವದಂತಿಯನ್ನು ತಳ್ಳಿ ಹಾಕಿದರು.

ಮೈಸೂರಿನ ಶ್ರೀರಾಂಪುರದಲ್ಲಿರುವ ಧನ್ವಂತರಿ ಆಸ್ಪತ್ರೆಯ ಬಳಿ ಗುರುವಾರ ಬೆಳಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಲಿದ್ದಾರೆ. ಇದಕ್ಕಾಗಿ ವೇದಿಕೆ ಸಿದ್ಧವಾಗಿದೆ. ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಇದು ಸತ್ಯಕ್ಕೆ ದೂರವಾದ ವರದಿಗಳಾಗಿವೆ. ನಾನು ಈ ಹಿಂದಿನಿಂದಲೂ ತತ್ವ ಸಿದ್ಧಾಂತದ ಮೇಲೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಹಲವು ವರ್ಷಗಳ ಹಿಂದೆಯೇ ಕೋಮುವಾದಿ ಪಕ್ಷ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಇಂದಿಗೂ ಬದ್ಧವಾಗಿದ್ದೇನೆ ಎಂದರು.

ಲಾಭ ಪಡೆಯುವ ಹುನ್ನಾರ: ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಸುಳ್ಳು ಸುದ್ದಿ ಹರಡಿರುವುದರ ಹಿಂದೆ ಬಿಜೆಪಿಯಿಂದ ಕಾಂಗ್ರೆಸ್‍ಗೆ ಬಂದಿರುವ ನಾಯಕರ ಕೈವಾಡವಿದೆ ಎಂಬ ಅನುಮಾನವಿದೆ. ನನ್ನ ವಿರುದ್ಧ ವದಂತಿ ಹಬ್ಬಿಸಿ ಕಾಂಗ್ರೆಸ್‍ನಲ್ಲಿ ತಾನು ಏಳಿಗೆ ಸಾಧಿಸಿ ಲಾಭ ಮಾಡಿಕೊಳ್ಳಬೇಕೆಂಬ ಹುನ್ನಾರ ನಡೆಸುತ್ತಿದ್ದಾರೆ. ಇದು ಯಾವುದೂ ಯಶಸ್ವಿಯಾಗುವುದಿಲ್ಲ. ನಾನು ಕಾಂಗ್ರೆಸ್‍ನಲ್ಲಿದ್ದೇನೆ. ಮುಂದೆಯೂ ಇರುತ್ತೇನೆ. ಪಕ್ಷವನ್ನು ಸಂಘಟಿಸುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

ಪ್ರಕೃತಿ ಚಿಕಿತ್ಸೆಗೆ ಹೋಗಿದ್ದೆ: ಪಕ್ಷದ ಸೋಲಿನಿಂದ ದಿಗ್ಭ್ರಾಂತನಾಗಿದ್ದೆ. ಚುನಾವಣೆಯಲ್ಲಿ ತುಂಬಾ ಓಡಾಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರಿಂದ ಪ್ರಕೃತಿ ಚಿಕಿತ್ಸೆ ಪಡೆಯಲು ತೆರಳಿದ್ದೆ. ಈ ಹಿನ್ನೆಲೆಯಲ್ಲಿ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಸೋಲಿನ ಆತ್ಮಾವಲೋಕನ ಮಾಡಲು ನನಗೆ ಆಘಾತ ಆಗಿದೆ. ಅದನ್ನ ವಿಮರ್ಶೆ ಮಾಡಿಕೊಂಡು ಮತ್ತೇ ಪುಟಿದೇಳಬೇಕು. ಚಿಕಿತ್ಸೆ ಪಡೆದ ನಂತರ ಇದೀಗ ನನ್ನಲ್ಲಿ ಚೈತನ್ಯ ಹೆಚ್ಚಾಗಿದೆ ಎಂದು ತಿಳಿಸಿದರು.

ಸ್ನೇಹ ಮಧುರವಾಗಿಯೇ ಇದೆ…

ನನ್ನ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಸ್ನೇಹ ಮಧುರವಾಗಿಯೇ ಇದೆ. ನನ್ನ ಹಾಗೂ ಸಿದ್ದರಾಮಯ್ಯ ನಡುವಿನ ಸ್ನೇಹ ಹಳಸಿದೆ ಎಂದು ಮಾಧ್ಯಮಗಳು ಬಿತ್ತರಿಸಿವೆ. ಈ ಕುರಿತು ಸಿದ್ದರಾಮಯ್ಯ ಅವರೇನಾದರೂ ಹೇಳಿದ್ದಾರಾ? ಅಥವಾ ನಾನೇನಾದರೂ ಹೇಳಿದ್ದೀನಾ? ಎಂದು ಪ್ರಶ್ನಿಸಿದರಲ್ಲದೆ, ನಮ್ಮ ಸ್ನೇಹ ಮುಂದುವರೆಯಲಿದೆ ಎಂದು ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

Translate »