ಜಿಲ್ಲೆಯ ವಿವಿಧೆಡೆ ಸರಣಿ ಪ್ರತಿಭಟನೆ: ಸಾಲಮನ್ನಾಕ್ಕಾಗಿ ರೈತರು, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಉಚಿತ ಬಸ್‍ಪಾಸ್‍ಗೆ ವಿದ್ಯಾರ್ಥಿಗಳ ಆಗ್ರಹ
ಮಂಡ್ಯ

ಜಿಲ್ಲೆಯ ವಿವಿಧೆಡೆ ಸರಣಿ ಪ್ರತಿಭಟನೆ: ಸಾಲಮನ್ನಾಕ್ಕಾಗಿ ರೈತರು, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಉಚಿತ ಬಸ್‍ಪಾಸ್‍ಗೆ ವಿದ್ಯಾರ್ಥಿಗಳ ಆಗ್ರಹ

July 14, 2018

ಮಂಡ್ಯ:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು, ಸ್ತ್ರೀಶಕ್ತಿ ಸಂಘದ ಕಾರ್ಯಕರ್ತರು, ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲೆಯ ವಿವಿಧೆಡೆ ಸರಣಿ ಪ್ರತಿಭಟನೆ ನಡೆಸಿದರು.

ಮಂಡ್ಯ, ಮದ್ದೂರು, ನಾಗಮಂಗಲ ಸೇರಿದಂತೆ ವಿವಿಧೆಡೆ ರೈತಸಂಘ ಮತ್ತು ಸ್ತ್ರೀಶಕ್ತಿ ಸಂಘದ ಮಹಿಳೆ ಯರು ಸಾಲಮನ್ನಾಕ್ಕೆ, ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್‍ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ ವರದಿ, ಮೆರವಣಿಗೆ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ಹಾಗೂ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಿ ಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಸರ್.ಎಂವಿ ಪ್ರತಿಮೆ ಬಳಿಯ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷ ಆರಂಭ ವಾಗಿದ್ದು, ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಅದರಂತೆ ವಿತರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಜಿ.ಎಸ್.ಸೀಮಾ, ಭೈರವ, ಅಭಿನಂದನ್, ಎಸ್.ಎಚ್.ಹರೀಶ್, ಕೆಂಪರಾಜು, ಪ್ರಕಾಶ್, ಕುಮಾರ್, ಸಂತೋಷ್, ದೀಪಕ್, ಬಸವರಾಜು, ಶಿವು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಸ್ತೆ ತಡೆ: ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದ ಸದಸ್ಯರು ಜಿಲ್ಲೆಯ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿ ಸುವಂತೆ ಒತ್ತಾಯಿಸಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಗರದ ಸರ್‍ಎಂವಿ ಪ್ರತಿಮೆ ಮುಂಭಾಗ ಜಮಾ ಯಿಸಿದ ಕಾರ್ಯಕರ್ತರು ಮೊದಲು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ನಂತರ ಪ್ರತಿಮೆ ಮುಂಭಾಗ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ ಯಾವುದೇ ಭರವಸೆಯನ್ನು ಈಡೇರಿಸದೆ, ರಾಜ್ಯ ಹಾಗೂ ಜಿಲ್ಲೆಯ ಜನತೆಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕಗ ಮಹಿಳಾ ಅಧ್ಯಕ್ಷೆ ಲತಾಶಂಕರ್, ಮುಖಂಡರಾದ ಶಂಭೂನ ಹಳ್ಳಿ ಸುರೇಶ್, ವನಜಮ್ಮ, ಸಿದ್ದಪ್ಪ, ರಾಮಕೃಷ್ಣಯ್ಯ, ಲಕ್ಷ್ಮೀ, ಚಂದ್ರಮ್ಮ, ರಮ್ಯಾ, ಪುಷ್ಪಲತಾ, ಇತರರಿದ್ದರು.

ನಾಗಮಂಗಲ: ರಾಷ್ಟ್ರೀಕೃತ ಬ್ಯಾಂಕಿಗಳಲ್ಲಿರುವ ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು. ಹೇಮಾವತಿ ನದಿಯಿಂದ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಕಾಂತಣ್ಣ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಟಿ.ಮರಿಯಪ್ಪ ಸರ್ಕಲ್‍ನಲ್ಲಿ ರಸ್ತೆ ನಡೆಸಿ ಪ್ರತಿಭಟನೆ ನಡೆಸಿದರು.

ನಂತರ ಮಿನಿವಿಧಾನಸೌಧದ ಮುಂಭಾಗ ಧರಣಿ ನಡೆಸಿ ತಹಶೀಲ್ದಾರ್ ಎಂ. ನಂಜುಂಡಯ್ಯ ಅವರಿಗೆ ಮನವಿ ಸಲ್ಲಿಸಿದರು. 2016-17ನೇ ಸಾಲಿನ ಫಸಲ್ ಭೀಮಾ ಯೋಜನೆ ವಿಮೆ ಹಣ ರೈತರಿಗೆ ಕೊಡಿಸುವುದು. ಹಾಲು ಉತ್ಪಾದಕರಿಗೆ ಹೆಚ್ಚಿನ ಹಣವನ್ನು ನೀಡುವುದು. ಪಿಎಲ್‍ಡಿ ಬ್ಯಾಂಕಿನಿಂದ ಪಡೆದಿರುವ ಸಾಲವನ್ನು ಸಾಲಮನ್ನಾ ವ್ಯಾಪ್ತಿಗೆ ಸೇರಿಸುವುದು. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದು. ಚೆಸ್ಕಾಂ ಡಿಪಿಆರ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿ ಸುವುದು. ಅಕ್ರಮ ಭೂ ಒತ್ತುವರಿಯನ್ನು ಸ್ಥಳ ಪರಿಶೀಲನೆ ಮಾಡಿ ಶೀಘ್ರವಾಗಿ ಸಕ್ರಮಗೊಳಿಸ ಬೇಕು. ಇದುವರೆಗೂ ಪೋಡಿ ಮುಕ್ತವಾಗದ ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಬೇಕು ಎಂದು ಮನವಿಯಲ್ಲಿ ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ದಡಗ ಸತೀಶ್, ಖಜಾಂಚಿ ಜೆ.ಕೆ. ತಮ್ಮಣ್ಣಗೌಡ, ಕಾರ್ಯಾಧ್ಯಕ್ಷ ಶ್ರೀರಂಗಪುರ ರಂಗೇಗೌಡ, ಗೌರವಾಧ್ಯಕ್ಷ ಕೀಳಘಟ್ಟ ನಂಜುಂಡೇ ಗೌಡ, ಮುಖಂಡ ಹರಳಕೆರೆ ಗೋಪಾಲಕೃಷ್ಣ, ಮುಳಕಟ್ಟೆ ಶಿವರಾಜು ಇದ್ದರು.

ಮದ್ದೂರು: ಉಚಿತ ಬಸ್‍ಪಾಸ್‍ಗೆ ಆಗ್ರಹಿಸಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಪದಾಧಿಕಾರಿ ಗಳು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರ ಹಾಗೂ ಸಾರಿಗೆ ಸಚಿವರ ವಿರುದ್ಧ ಘೋಷಣೆ ಕೂಗಿದ ಅವರು, ಚುನಾವಣೆಗೂ ಮುನ್ನ ಉಚಿತ ಬಸ್‍ಪಾಸ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಆದರೆ ಇದುವರೆಗೂ ಪ್ರಣಾಳಿಕೆ ಮರೆತು ಉಚಿತ ಬಸ್‍ಪಾಸ್ ನೀಡದೇ ಸರ್ಕಾರ ಸತಾಯಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈ ಕೂಡಲೇ ಉಚಿತ ಬಸ್‍ಪಾಸ್ ವಿತರಿಸಬೇಕು. ಇಲ್ಲದಿದ್ದಲ್ಲಿ ಜು.21ರಂದು ರಾಜ್ಯ ವ್ಯಾಪಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಘೋಷಿಸಿದರು.

ಮುಖಂಡರಾದ ಆಕಾಶ್‍ಕುಮಾರ್, ಚಂದ್ರಕಲಾ, ಹೇಮಾ, ಸಹನಾ, ಅನುಶ್ರೀ, ದಿವ್ಯ, ಬಿಂದುಗೌಡ, ಪೂಜಾಶ್ರೀ, ಭಾವನಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »