ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ
ಮಂಡ್ಯ

ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ

July 14, 2018

ಪಾಂಡವಪುರ:  ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಜು.15 ರಂದು ಮಠದ ಆವರಣದಲ್ಲಿ ನಡೆಯಲಿದೆ ಎಂದು ಮಠದ ಕಿರಿಯ ಶ್ರೀಗಳಾದ ಶ್ರೀಗುರು ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗೈಕ್ಯ ಸದಾಶಿವ ಸ್ವಾಮೀಜಿಗಳು ಸಾಕಷ್ಟು ಧರ್ಮ ಪ್ರಚಾರ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಜಾತಿ-ಭೇದ, ಮೇಲುಕೀಳು, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಧಾರ್ಮಿಕ ಪ್ರಚಾರ ಮಾಡಿ ಜನರ ಪ್ರೀತಿ ಗಳಿಸಿದ್ದರು. ಅವರ ಅಗಲಿಕೆ ನೋವುಂಟು ಮಾಡಿದೆ ಎಂದರು.

ಭಾನುವಾರ ನಡೆಯುವ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠಾಧೀಶ ಶ್ರೀಸಿದ್ದಲಿಂಗ ಸ್ವಾಮೀಜಿ, ದುರ್ದಂಡೇಶ್ವರ ಮಠದ ಪೀಠಾ ಧ್ಯಕ್ಷ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಶ್ರೀಪುರುಷೋತ್ತಮಾನಂದ ಸ್ವಾಮೀಜಿ ವಹಿಸಲಿದ್ದಾರೆ.

ಪುಣ್ಯಸ್ಮರಣೆ ಕಾರ್ಯಕ್ರಮದ ನೇತೃತ್ವವನ್ನು ಮಠದ ಕಿರಿಯ ಶ್ರೀಗಳಾದ ಗುರುಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಲಿದ್ದು, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಶಾಸಕ ಎಸ್.ನಿರಂಜನ್‍ಕುಮಾರ್ ಭಾವಚಿತ್ರ ಅನಾವರಣಗೊಳಿಸುವರು. ಜಿಪಂ ಸದಸ್ಯ ಸಿ.ಅಶೋಕ್, ಸ್ವರಾಜ್ ಇಂಡಿಯಾ ಪಕ್ಷದ ಪ್ರಧಾನ ಕಾರ್ಯದರ್ಶಿ ದರ್ಶನ್ ಪುಟ್ಟಣ್ಣಯ್ಯ ಶ್ರೀಗಳ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಸಿ ಆರ್.ಯಶೋಧ, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಸಿಪಿಐ ಎಂ.ಕೆ.ದೀಪಕ್, ಜಿಪಂ ಸದಸ್ಯರಾದ ತಿಮ್ಮೇಗೌಡ, ಶಾಂತಲ, ಎಚ್.ತ್ಯಾಗರಾಜು, ಅನುಸೂಯ, ತಾಪಂ ಅಧ್ಯಕ್ಷೆ ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಆಹ್ವಾನ ಪತ್ರಿಕೆ ಸಿಗದ ಭಕ್ತರು ಇದನ್ನೇ ಆಹ್ವಾನ ಪತ್ರಿಕೆ ಎಂದು ತಿಳಿದು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ತಾಲೂಕು ವೀರಶೈವ ಹಿತರಕ್ಷಣ ಸಮಿತಿ ಅಧ್ಯಕ್ಷ ಎಸ್.ಎ.ಮಲ್ಲೇಶ್, ಸದಸ್ಯ ನಂಜುಂಡಸ್ವಾಮಿ, ಖಜಾಂಚಿ ರಾಜಣ್ಣ ಮುಖಂಡ ಜಗದೀಶ್ ಹಾಜರಿದ್ದರು.

Translate »