ಚಿನಕುರಳಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಅವುಗಳನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಪಂ ಸದಸ್ಯ ಸಿ.ಅಶೋಕ್ ತಿಳಿಸಿದರು.
ಚಿನಕುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 2018-19ನೇ ಸಾಲಿನ ಚಿನಕುರಳಿ ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರೇ ದೊಡ್ಡ ವ್ಯಕ್ತಿಗಳಾಗಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ಸೋಲು-ಗೆಲುವು ಸಾಮಾನ್ಯ. ಒಂದು ತಂಡ ಗೆಲ್ಲಬೇಕಾದರೆ ಮತ್ತೊಂದು ತಂಡ ಸೋಲಬೇಕು. ಹಾಗಾಗಿ ವಿದ್ಯಾರ್ಥಿಗಳು ಗೆದ್ದಾಗ ಬೀಗದೆ, ಸೋತಾಗ ಹತಾಶ ರಾಗದೇ ಸೋಲೆ ಗೆಲುವಿನ ಮೆಟ್ಟಿಲು ಎನ್ನುವುದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಗ್ರಾಮೀಣ ಕ್ರೀಡಾ ಕೂಟಗಳು ಸಹಕಾರಿಯಾಗಿವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಕ್ರೀಡಾಕೂಟಗಳಲ್ಲಿ ಭಾಗ ವಹಿಸಿ ತಮ್ಮ ಪ್ರತಿಭೆ ಹೊರ ಹಾಕುವ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೂ ಮುನ್ನಡೆಯಬೇಕು ಎಂದರು.
ತಾಪಂ ಸದಸ್ಯ ಸಿ.ಎಸ್.ಗೋಪಾಲಗೌಡ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೇ ಮುಖ್ಯ ಎಂದರು. ಜಿಪಂ ಸದಸ್ಯೆ ಶಾಂತಲ, ಬಿಇಓ ಮಲ್ಲೇ ಶ್ವರಿ ಅವರು ಕ್ರೀಡಾಪಟುಗಳ ಕುರಿತು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಪ್ರೇಮಮ್ಮ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ತಾಪಂ ಅಧ್ಯಕ್ಷೆ ಪೂರ್ಣಿಮಾ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಕ್ರೀಡಾಕೂಟದಲ್ಲಿ ಚಿನಕುರಳಿ ವೃತ್ತಮಟ್ಟದ ಸುಮಾರು 16 ಶಾಲೆಗಳಿಂದ 300ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.
ತಾಪಂ ಸದಸ್ಯೆ ನವೀನ, ವಿಎಸ್‍ಎಸ್ ಎನ್‍ಬಿ ಅಧ್ಯಕ್ಷ ಕೆ.ಎಸ್.ಜಯರಾಮು, ಗ್ರಾಪಂ ಉಪಾಧ್ಯಕ್ಷ ನಾಗರಾಜು, ಬಿಇಓ ಮಲ್ಲೇಶ್ವರಿ, ಬಿಆರ್‍ಸಿ ತಿಮ್ಮರಾಯಿಗೌಡ, ಪಿಡಿಓ ಎ.ನಾರಾಯಣ್, ಗ್ರಾಪಂ ಸದಸ್ಯರಾದ ಸಿ.ಎ.ಲೋಕೇಶ್, ಸಿ.ಡಿ.ಮಹದೇವು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಎಸ್‍ಡಿಎಂಸಿ ಅಧ್ಯಕ್ಷ ಸಿ.ಸೋಮ ಶೇಖರ್, ಡೈರಿ ಅಧ್ಯಕ್ಷ ವನರಾಜು, ಮಾಜಿ ಅಧ್ಯಕ್ಷ ರಮೇಶ್, ಮಂಜು, ಮಾಜಿ ತಾಪಂ ಸದಸ್ಯ ನಿಸಾರ್ ಅಹಮದ್, ಯಜಮಾನ್ ಸುಬ್ಬೇಗೌಡ, ಪ್ರಭಾರ ಮುಖ್ಯೋಪಾಧ್ಯಾಯ ಸಿ.ಎನ್. ರಮೇಶ್, ದೈಹಿಕ ಶಿಕ್ಷಕ ಕೆ.ವಿ.ಮಧುಸೂದನ್ ಇದ್ದರು.