ಮೈಸೂರು, ಆ. 12(ಆರ್‍ಕೆ)- ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಯೊಬ್ಬರ ಕೊರಳಿ ನಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಖದೀಮನನ್ನು ಸಿಸಿಬಿ ಪೊಲೀ ಸರು ಬಂಧಿಸಿದ್ದಾರೆ. ಮೈಸೂರಿನ ಸಾತಗಳ್ಳಿ ನಿವಾಸಿ ಅಲ್ಲಾಭಕ್ಷ್ ಅವರ ಮಗ ನಯಾಜ್ ಪಾಷ ಅಲಿಯಾಸ್ ತಲ್ಲಾ(20) ಬಂಧಿತ ಆರೋಪಿಯಾಗಿದ್ದು, ಆತನಿಂದ 75 ಸಾವಿರ ರೂ. ಮೌಲ್ಯದ 22 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಯೊಬ್ಬರ ಕೊರಳಿನಿಂದ ಯಾಸಿನ್ ಪಾಷ ಎಂಬುವನೊಂದಿಗೆ ಸೇರಿಕೊಂಡು 22 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸಿಸಿಬಿ ಪ್ರಭಾರ ಎಸಿಪಿ ಜಿ.ಎನ್.ಮೋಹನ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಸಿ.ಕಿರಣ್‍ಕುಮಾರ್, ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿಗಳಾದ ರಾಮಸ್ವಾಮಿ, ರಾಜೇಂದ್ರ, ಚಂದ್ರಶೇಖರ್, ಚಿಕ್ಕಣ್ಣ, ಗಣೇಶ್, ಲಕ್ಷ್ಮೀಕಾಂತ, ಅಸ್ಗರ್ ಖಾನ್, ಶಿವರಾಜು, ಯಾಕೂಬ್ ಷರೀಫ್, ನಿರಂಜನ್ ಹಾಗೂ ಚಾಮುಂಡಮ್ಮ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.