ಮಣ್ಣಿನ ಮಕ್ಕಳು 1 ಲೋಟ ಹಾಲು ಕರೆದು ತೋರಿಸಲಿ: ಸ್ವಾಭಿಮಾನ ಸಮಾವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸವಾಲು
ಮಂಡ್ಯ

ಮಣ್ಣಿನ ಮಕ್ಕಳು 1 ಲೋಟ ಹಾಲು ಕರೆದು ತೋರಿಸಲಿ: ಸ್ವಾಭಿಮಾನ ಸಮಾವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸವಾಲು

April 17, 2019

ಮಂಡ್ಯ: ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರಲ್ಲ, 1 ಲೋಟ ಹಾಲು ಕರೆದು ತೋರಿಸಲಿ, ಹಸು ಕರು ಹಾಕಿದಾಗ ಅದಕ್ಕೆ ಏನು ಆಹಾರ ಕೊಡು ತ್ತಾರೋ ಹೇಳಲಿ ನೋಡೋಣ ಎಂದು ಚಾಲೆಂಜಿಂಗ್ ಸ್ಟಾರ್ ಎಂದೇ ಹೆಸರಾಗಿರುವ ದರ್ಶನ್ ತೂಗುದೀಪ ಅವರು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ, ನಿಖಿಲ್‍ಗೆ ಸವಾಲು ಹಾಕಿದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಭಿಮಾನ ಸಮಾವೇಶದಲ್ಲಿ ಜೋರು ಧ್ವನಿ ಯಲ್ಲಿ ಮಾತನಾಡಿದ `ಯಜಮಾನ’ ದರ್ಶನ್, ಅಮ್ಮ ಗೆದ್ದರೆ `ಮಂಡ್ಯ ಅಂದರೆ ಏನು’ ಅಂತಾ ಇಡೀ ಇಂಡಿಯಾಗೆ ಮಾತ್ರ ಅಲ್ಲ, ವಲ್ರ್ಡ್‍ಗೆ ಗೊತ್ತಾಗುತ್ತೆ ಎಂದು ಹೇಳಿದರು.

ನಾನು ಕಚಡಾ: ಮೈಕ್ ಮುಂದೆ ನಿಂತ ದರ್ಶನ್, ಎಲ್ಲಿಂದ ಶುರು ಮಾಡೋದ್ರಣ್ಣ ಎಂದು ಸಭಿಕರನ್ನೇ ಪ್ರಶ್ನಿಸಿದರು. ಈಗ್ಲೇ ಹೇಳ್ತೀನಿ, ನನ್ನಂಥ ಕಚಡಾ ನನ್ ಮಗಾ ಇನ್ನೊಬ್ಬ ಇಲ್ಲ. ನನಗಿರೋದು 2 ಮುಖ. ಆದರೆ, ಈ ಎಲೆಕ್ಷನ್‍ಗೆ ಒಂದೇ ಮುಖ ಇಟ್ಟು ಕೊಂಡು ಪ್ರಚಾರ ಮಾಡಿದ್ದೇವೆ. ಏಕೆಂದರೆ ನಮ್ಮಿಂದ ಅಮ್ಮಂಗೆ ತೊಂದ್ರೆ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದರು.

ನಮ್ಮ ಫಾರ್ಮ್ ಮೇಲೆ ದಾಳಿ ಆಗಿದೆ. ಏನು ಚಿಂತೆ ಇಲ್ಲ. ಅಲ್ಲಿ ಡೈರಿ ಸಿಕ್ಕಿದೆ ಅಂತಾ ಹೇಳ್ತಾರೆ. ಹಸುಗೆ ಇಂಜೆಕ್ಷನ್ ಕೊಡಿಸಿದ್ದು, ಕೋಳಿಗೆ ಔಷಧ ಹಾಕಿದ್ದು, ಡೈರಿಗೆ ಹಾಲು ಎಷ್ಟು ಹಾಕಿದ್ದು ಎಂಬ ವಿವರವಷ್ಟೇ ಅದ್ರಲ್ಲಿದೆ ಎಂದು ವ್ಯಂಗ್ಯವಾಡಿದರು.
ನಾನು ಇವತ್ತು ಕುಮಾರಸ್ವಾಮಿ ಅವರಿಗೆ ತುಂಬಾನೆ ಥ್ಯಾಂಕ್ಸ್ ಹೇಳ್ತೀನಿ. ನಮ್ಮ ಬಗ್ಗೆ ಇಡೀ ಕರ್ನಾಟಕಕ್ಕೆ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದ ಹೇಳ್ತೀನಿ ಎಂದು ಅಣಕಿಸಿದರು.

ಭಾಷಣದ ಕೊನೆಗೆ, `ನಿಮಗೆಲ್ಲಾ ಕೈ ಮುಗಿದು, ಕಾಲು ಹಿಡಿದು ಕೇಳ್ಕೊತೇನೆ. ಮುಂದಿನ 2 ದಿನ ಪಟ್ಟಾಗಿ ಕೆಲಸ ಮಾಡಿ. ಇಲ್ಲಿ ಎಲ್ಲಾ ಪಕ್ಷದವರು ಇದ್ದೀರಿ. ನಿಮ್ಮ ನಡು ವಿನ ಬೇಜಾರು, ದ್ವೇಷ ಮರೆತು ಮತಗಟ್ಟೆ ಬಳಿ ಗಟ್ಟಿಯಾಗಿ ನಿಂತು ಕೆಲಸ ಮಾಡಿ ಎಂದು ಯುವ ಸಮೂಹವನ್ನು ಕೋರಿದರು. ನಮ್ಮದು ಮುಗಿಯಿತು, ಇನ್ನೇನಿದ್ದರೂ ನಿಮ್ಮದೇ ಇರೋದು. ದಯಮಾಡಿ, 500-1000ಕ್ಕೆಲ್ಲಾ (ಹಣಕ್ಕೆ) ಕೈವೊಡ್ಡಿ ಸ್ವಾಭಿಮಾನ ಕಳೆದು ಕೊಳ್ಳಬೇಡಿ. ಹೆಸರು ನೆನಪಿಟ್ಟುಕೊಳ್ಳದೇ ಇದ್ದರೂ ಪರವಾಗಿಲ್ಲ. ಕ್ರಮ ಸಂಖ್ಯೆ 20 ನೆನ ಪಿಟ್ಟುಕೊಳ್ಳಿ ಎಂದು ಮನವಿ ಮಾಡಿದರು.

ಚಂದ್ರಬಾಬು ‘ಗೌಡ’ರೋ? ನಾಯ್ಡುವೊ?: ಸುಮಲತಾ ಅವರನ್ನು ಗೌಡ್ತಿ ಅಲ್ಲ, ನಾಯ್ಡು ಎಂದು ಮುಖ್ಯಮಂತ್ರಿ ಮತ್ತು ಅವರ ಆಪ್ತರು ಟೀಕಿಸಿದ್ದಾರೆ. ಆದರೆ ಪಾಂಡವಪುರದಲ್ಲಿ ಸೋಮವಾರ ನಡೆದ ಸಮಾವೇಶಕ್ಕೆ ಬಂದಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು `ಗೌಡ’ರೋ? `ನಾಯ್ಡು’ವೋ ಗೊತ್ತಾಗುತ್ತಿಲ್ಲ? ಎಂದು ಮಂಡ್ಯ ಸ್ವಾಭಿ ಮಾನಿ ಹೋರಾಟ ಆರಂಭಿಸಿದ್ದ ಡಾ. ರವೀಂದ್ರ ಲೇವಡಿ ಮಾಡಿದರು.

ಕುಮಾರಸ್ವಾಮಿ ಅವರಿಗೆ ಈಗ ನಾಯ್ಡುಗಳೇ ಬೇಕಾಯಿತು. ಸುಮಲತಾ ಅವರು ಚುನಾವಣೆಯಲ್ಲಿ ಸ್ಫರ್ಧಿಸಿದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಕುಮಾರ ಸ್ವಾಮಿ ಅವರ ಕರಾಳ ಮುಖ ಎಲ್ಲರಿಗೂ ಗೊತ್ತಾಗುತ್ತಿರಲಿಲ್ಲ ಎಂದು ಛೇಡಿಸಿದರು.

ಕನಗನಮರಡಿ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿರುವುದನ್ನು ಪ್ರಸ್ತಾಪಿಸಿ, ಮುಖ್ಯ ಮಂತ್ರಿಯಾಗಿ ಆ ಸ್ಥಳಕ್ಕೆ ಹೋಗಲೇಬೇಕಿತ್ತು. ಅದು ಕರ್ತವ್ಯವಾಗಿತ್ತು ಎಂದು ಕುಟುಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ನಡೆದಂತೆ ಮಂಡ್ಯದಲ್ಲಿಯೂ ನಡೆಯು ತ್ತಿದೆ. ಅಂದು ಅಲ್ಲಿ ಕುಮಾರಸ್ವಾಮಿ ಖಳ ನಾಯಕನಾಗಿದ್ದರು, ಈ ಬಾರಿಯೂ ಖಳ ನಾಯಕನಾಗಲಿದ್ದಾರೆ. ಚಾಮುಂಡೇಶ್ವರಿ ದೇವಿ ಮಹಿಷಾಸುರನನ್ನು ಸಂಹಾರ ಮಾಡಿದಂತೆ ಮಂಡ್ಯ ಕ್ಷೇತ್ರದಲ್ಲಿ ಇವರ ವ್ಯಕ್ತಿತ್ವವನ್ನು ಸಂಹಾರ ಮಾಡೋಣ. ಇದಕ್ಕೆ ಸ್ವಾಭಿಮಾನಿಗಳೆಲ್ಲರೂ ಒಂದಾಗಬೇಕು ಎಂದು ಡಾ. ರವೀಂದ್ರ ಕರೆ ನೀಡಿದರು.

ಮಂಡ್ಯ ಶೈಲಿ ಭಾಷಣ: ನಟ ಯಶ್, ಕಡೆಯ ದಿನದ ಬಹಿರಂಗ ಪ್ರಚಾರದ ಭಾಷಣವನ್ನು ಅಣ್ತಮ್ಮಾಸ್ ಎಂದು ಮಂಡ್ಯ ಶೈಲಿಯಲ್ಲಿ ಮಾತನಾಡಿ ನೆರೆದಿದ್ದವರನ್ನು ಖುಷಿ ಪಡಿಸಿದರು. ಡಾ.ರವೀಂದ್ರ ಅವರು ಬಹಳ ಚೆನ್ನಾಗಿ ಮಾತನಾಡಿದರು. ಹಾಗಾಗಿ ಮಾತ ನಾಡಲು ನನಗೇನೂ ಉಳಿದಿಲ್ಲ ಎಂದು ಯಶ್ ಹೇಳಿದ್ದಕ್ಕೆ, ಸಭಿಕರು, ಇಲ್ಲ, ಯಶ್ ಮಾತನಾಡಲೇಬೇಕು ಎಂದು ಕೂಗಿದರು.

ನೋಡಕ್ಕೆ ಬರ್ತಾರಂತೆ, ಓಟು ಹಾಕಲ್ವಂತೆ. ನೋಡಕ್ಕೂ ಬರಲ್ವಂತೆ. ಆದರೆ, ರಾತ್ರಿ ದುಡ್ಡು ತಗಂಡು ಓಟ್ ಹಾಕ್ಬಿಡ್ತಾರಂತೆ ಎಂದು ಅಣಕಿಸಿದ ಯಶ್, ದುಡ್ಡಿಗೆ ಬಗ್‍ಬೇಡಿ. ನಿಮ್ಮ ತಾಕತ್ ತೋರಿಸಿ ಎಂದು ಉತ್ತೇಜನದ ಮಾತ ನಾಡಿದರು. ಏನ್ರಯ್ಯಾ, ಜಾತಿ, ಜಾತಿ ಅಂತಾ ಬಡಿದಾಡ್ತೀರಿ ಎಂದೂ ಮಾತಿನಲ್ಲೇ ತಿವಿದರು.

ಈಗ ನ್ಯಾಯ ಆಗ್ಬಿಡ್ಲಪ್ಪಾ. ಸಿನಿಮಾದವ ರನ್ನು ನಂಬ್‍ಬೇಕೊ, ಬ್ಯಾಡ್ವೊ..? ತೀರ್ಮಾನ ಮಾಡ್ಬಿಡಿ ಎನ್ನುತ್ತಲೇ ಸಿಎಂ ಕುಮಾರ ಸ್ವಾಮಿ ಅವರ ಮಾತನ್ನು ಅಣಕಿಸಿದರು.

ಅಂಬರೀಶ್-ಸುಮಲತಾ ದಂಪತಿ ಪುತ್ರ ಅಭಿಷೇಕ್ ಅವರನ್ನು ನನ್ನ ತಮ್ಮ ಎಂದು ಹೇಳಿಕೊಂಡ ಯಶ್, ಅಭಿ ಏನಿದ್ದರೂ ಮಂಡ್ಯ ಸ್ವತ್ತು ಎಂದರು. ಅಮ್ಮನ ಕ್ರಮ ಸಂಖ್ಯೆ 20. ಕಹಳೆ ಊದುತ್ತಿರುವ ರೈತ, ಮರೀಬೇಡಿ ಎಂದು ಮನವಿ ಮಾಡಿದರು.
ನಾವು ಪ್ರಚಾರದ ವೇಳೆ ಎದುರಾಳಿಗಳ ಹೇಳಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಎಲ್ಲ ಕಹಿಯನ್ನೂ ನುಂಗಿಕೊಂಡು ಸುಮ್ಮನೆ ಇದ್ದೆವು. ಈಗ ಉತ್ತರ ಕೊಡುವ ಸಮಯ ಬಂದಿದೆ. ನಮಗೂ ರಕ್ತ ಕುದಿಯುತ್ತೆ. ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತಾ ಡಿದ್ರೆ ನಾವು ಸುಮ್ಮನ್ನಿರೋಲ್ಲ. ಎಷ್ಟೇ ದೊಡ್ಡವರಾದ್ರು ಅಷ್ಟೆ ಎಂದು ಯಶ್ ಪರೋಕ್ಷವಾಗಿ ಸಿಎಂಗೆ ಟಾಂಗ್ ನೀಡಿದರು.

ಚುನಾವಣೆಗೂ ಮುನ್ನ ಎಲ್ಲರೂ ಅಣ್ಣ- ತಮ್ಮಂದಿರಂತೆ ಇದ್ರು. ಇದೀಗಾ ನನ್ನ ವಿಷ್ಯದಲ್ಲಿ ಸುಳ್ಳು ಹೇಳ್ತಿದ್ದಾರೆ. ನಾನು ಕಳ್ಳರ ಪಕ್ಷ ಅಂತ ಹೇಳಿದ್ನಂತೆ. ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳ್ತಿದೀನಿ. ನಾನು ಕಳ್ಳರ ಪಕ್ಷ ಅಂತ ಹೇಳಿಲ್ಲ. ಒಂದು ವೇಳೆ ನಾನು ಹೇಳಿದಕ್ಕೆ ಸಾಕ್ಷಿ ಇದ್ದರೆ, ವೀಡಿಯೋ ಏನಾದರೂ ಸಿಕ್ಕಿದರೆ ಮಂಡ್ಯ ಬಿಟ್ ಹೋಗ್ತೀನಿ, ಸಿನಿಮಾ ಬಿಟ್ ಹೋಗ್ತೀನಿ. ಸುಮ್ನೆ ನಾನು ಹೇಳ್ತಿಲ್ಲ, ಹೇಳಿ ಬೇರೆಯವ್ರ ಥರ ಮಾಡಲ್ಲ. ಇದು ಅರ್ಥ ಆಗಿರೋರಿಗೆ ಅರ್ಥ ಆಗುತ್ತೆ ಎಂದರು.

ಪರಿಣಾಮ ನೆಟ್ಟಗಿರಲ್ಲ: ಕಳೆದ 20 ದಿನದಿಂದ ಊರೂರು ತಿರುಗಿದ್ದೇವೆ. ಎದು ರಾಳಿ ಪಕ್ಷದವ್ರು, ಕ್ಯಾಂಪೇನ್ ಮಾಡಿದ್ರೋ ಇಲ್ವೋ. ಗೊತ್ತಿಲ್ಲ. ಅಮ್ಮ, ಅಣ್ಣಂದಿರ ಬಗ್ಗೆ ಮಾತಾಡಿದ್ದೇ ಹೆಚ್ಚು ಎಂದು ಜೆಡಿಎಸ್ ನಾಯಕರ ವಿರುದ್ಧ ಅಭಿಷೇಕ್ ಕಿಡಿಕಾರಿದರು.

ನನ್ನ ತಂದೆ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರುವ ಆಲೋಚನೆ ಕೊಟ್ಟಿದ್ದೇ ತಮ್ಮ ಪುತ್ರ ಎಂದು ಸಿಎಂ ಹೇಳಿಕೊಂಡಿ ದ್ದರು. ಇಷ್ಟು ದಿನ ಅವರು ಏನೇ ಮಾತಾ ಡಿದ್ರು ಸುಮ್ಮನೆ ಇದ್ದೆ. ನ.24 ರಾತ್ರಿ 9ಕ್ಕೆ ಅಪ್ಪನ ಜೊತೆ ನಾನಿದ್ದೆ. ಅವತ್ತು ರಾತ್ರಿ ಕುಮಾರ ಸ್ವಾಮಿ ಅವ್ರಿಗೆ ನಾನ್ ಹೇಳಿದ್ದು ಮಂಡ್ಯಕ್ಕೆ ಕರೆ ತನ್ನಿ ಅಂಥ. ಇದು ನನ್ನ ತಂದೆ ಆಣೆಗೂ ಸತ್ಯ ಎಂದು ಅಭಿ ಹೇಳಿದರು.

ನಿಮಗೆ ಕೈಮುಗಿದು ಬೇಡಿಕೊಳ್ಳುತ್ತೇನೆ, ನಮ್ಮ ತಂದೆ ಬಗ್ಗೆ ಮಾತಾಡಬೇಡಿ. ಮತ್ತೆ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಅಭಿ ಗುಡುಗಿದರು.

ನಗರದ ಕಾಳಿಕಾಂಬ ದೇವಾಲಯದ ಬಳಿ ಜಮಾಯಿಸಿದ ಸಾವಿರಾರು ಮಂದಿ ಅಂಬರೀಶ್ ಅಭಿಮಾನಿಗಳು, ಬಿಜೆಪಿ, ಡಿಎಸ್ ಎಸ್, ಬಂಡಾಯ ಕಾಂಗ್ರೆಸ್, ರೈತಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಸುಮಲತಾ ಅಂಬರೀಶ್ ಪರವಾಗಿ `ಕ್ರಮಸಂಖ್ಯೆ 20ಕ್ಕೆ ಮತ ಮಂಡ್ಯ ಜನತೆಗೆ ಹಿತ’ ಎಂದು ಜಯಘೋಷಗಳನ್ನು ಕೂಗಿದರು. ರೆಬಲ್‍ಸ್ಟಾರ್ ಅಂಬರೀಶ್, ನಟರಾದ ಯಶ್, ದರ್ಶನ್‍ರ ಭಾವಚಿತ್ರಗಳು ರಾರಾಜಿಸಿದವು.

ರ್ಯಾಲಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳನ್ನು ಕಂಡು ಸುಮಲತಾ ಭಾವುಕರಾದರು. ಭದ್ರತಾ ದೃಷ್ಟಿಯಿಂದ ಪೊಲೀಸರು ಬೆಂಗಳೂರು-ಮೈಸೂರು ಮಾರ್ಗದ ವಾಹನಗಳಿಗೆ ಮದ್ದೂರು-ಮಳವಳ್ಳಿ ಮಾರ್ಗವಾಗಿ ಸಂಚಾರ ವ್ಯವಸ್ಥೆ ಮಾಡಿದ್ದರು. ಮಂಡ್ಯ ಪ್ರವೇಶಿಸುವ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು.

Translate »