ನಾಳೆಯಿಂದ ಚಾಮರಾಜನಗರದಲ್ಲಿ ದಸರಾ
ಚಾಮರಾಜನಗರ

ನಾಳೆಯಿಂದ ಚಾಮರಾಜನಗರದಲ್ಲಿ ದಸರಾ

October 12, 2018

ಚಾಮರಾಜನಗರ: ಚಾ.ನಗರದಲ್ಲಿ ಅ.13ರಿಂದ 16ರವರೆಗೆ ಆಯೋಜಿಸಿರುವ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ, ರಂಗೋಲಿ ಸ್ಪರ್ಧೆ, ರೈತ ದಸರಾ, ದಸರಾ ನಡಿಗೆ ಹಾಗೂ ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಅವರು ದಸರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಪ್ರತಿದಿನ ಸಂಜೆ 4.30ರಿಂದ ರಾತ್ರಿ 10.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೊದಲ ದಿನ (ಅ.13) ಸಂಜೆ 4 ಗಂಟೆಗೆ ಜಿಲ್ಲಾಡಳಿತ ಭವನದಿಂದ ದೇವಸ್ಥಾನದವರೆಗೆ ಕಲಾ ತಂಡಗಳ ಮೆರವಣಿಗೆ ಆಯೋಜಿಸಲಾಗಿದೆ ಎಂದರು. ಅ.14ರಂದು ಬೆ.7 ಗಂಟೆಯಿಂದ 10 ಗಂಟೆವರೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ರಂಗೋಲಿ ಮತ್ತು ಪುಷ್ಟ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. 15ರಂದು ಬೆ.10ರಿಂದ ಮ.2ರವರೆಗೆ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ರೈತ ದಸರಾ ಕಾರ್ಯಕ್ರಮ, 16ರಂದು ಬೆ.7ಗಂಟೆಗೆ ವಾಕ್‍ಥಾನ್ ಕಾರ್ಯಕ್ರಮ ‘ದಸರಾ ನಡೆಗೆ’ ಏರ್ಪಡಿಸಲಾಗಿದೆ ಎಂದರು.

ಅ.13ರಿಂದ 16ರವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗ ದೊಂದಿಗೆ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ. ಭ್ರಮರಾಂಬ ಹಾಗೂ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರಲ್ಲಿ 4 ದಿನಗಳ ಕಾಲ ಬೆಳಗಿನ ಪ್ರದರ್ಶನದಲ್ಲಿ ಸದಭಿರುಚಿ ಹಾಗೂ ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು. ಜಿಪಂ ಅಧ್ಯಕ್ಷೆ ಶಿವಮ್ಮ, ಡಿಸಿ ಬಿ.ಬಿ. ಕಾವೇರಿ, ಎಡಿಸಿ ಕೆ.ಎಂ.ಗಾಯತ್ರಿ, ಸಿಇಓ ಡಾ.ಕೆ.ಹರೀಶ್ ಕುಮಾರ್ ಸುದ್ದಿಗೋಷ್ಟಿಯಲ್ಲಿದ್ದರು.

Translate »