ಬಾಲಕರಿಬ್ಬರು ಕೆರೆಯಲ್ಲಿ ಜಲಸಮಾಧಿ
ಚಾಮರಾಜನಗರ

ಬಾಲಕರಿಬ್ಬರು ಕೆರೆಯಲ್ಲಿ ಜಲಸಮಾಧಿ

October 12, 2018

ಬೇಗೂರು: ಸಮೀಪದ ಬೆಳಚಲವಾಡಿ ಗ್ರಾಮದ ಕೆರೆಗೆ ಈಜಲು ತೆರಳಿದ್ದ ಬಾಲಕರಿಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

ಬೆಳಚಲವಾಡಿ ಗ್ರಾಮದ ಶಿವಣ್ಣ ಎಂಬುವರ ಮಗ ಬೇಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 10 ನೇತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಚಂದನ್(17) ಹಾಗೂ ಇದೇ ಗ್ರಾಮದ ಮಹೇಶ್ ಎಂಬು ವರ ಮಗ 9ನೇ ತರಗತಿಯ ಪ್ರವೀಣ್ (15) ಮೃತಪಟ್ಟವರು.

ಈ ಇಬ್ಬರು ಬಾಲಕರು ಬುಧವಾರ ಶಾಲೆಯಲ್ಲಿ ನಡೆದ ವಿಶ್ವಾಸ ಕಿರಣ ತರಗತಿಗೆ ಹಾಜರಾಗಿ ಮಧ್ಯಾಹ್ನ ಮನೆಗೆ ತೆರಳಿದ್ದು, ನಂತರ ಡ್ಯಾನ್ಸ್ ತರಗತಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ರಾತ್ರಿ ಮಕ್ಕಳು ಮನೆಗೆ ಬಾರದಿದ್ದಾಗ ಡ್ಯಾನ್ಸ್ ಶಾಲೆಯಲ್ಲೆ ತಂಗಿರಬಹುದೆಂದು ಪೋಷಕರು ತಿಳಿದಿದ್ದರು. ಆದರೆ ಗುರುವಾರ ಬೆಳಿಗ್ಗೆ ಬೆಳಚಲವಾಡಿ ಕೆರೆಯ ಬಳಿ ಎರಡು ಸೈಕಲ್‍ಗಳು ಮತ್ತು ಮಕ್ಕಳ ಬಟ್ಟೆಗಳು ಇದ್ದುದನ್ನು ಗಮನಿಸಿದ ಗ್ರಾಮಸ್ಥರು ಮಕ್ಕಳು ನೀರಿನಲ್ಲಿ ಮುಳು ಗಿರಬಹುದೆಂದು ಶಂಕಿಸಿ ಬೇಗೂರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀ ಸರು ಸುಮಾರು 3 ಗಂಟೆಗಳಿಗೂ ಅಧಿಕ ಕಾಲ ಹುಡುಕಾಟ ನಡೆಸಿದರು. ಈ ಸಂದರ್ಭದಲ್ಲಿ ಬೇಗೂರು ಗ್ರಾಮದ ಯುವಕರೂ ಸಹ ನೀರಿಗೆ ಇಳಿದು ಹುಡುಕಾಟ ನಡೆಸಿದ ನಂತರ ಎರಡೂ ಶವಗಳು ಪತ್ತೆಯಾದವು.

ಹೆತ್ತವರ ಆಕ್ರಂದನ: ಡ್ಯಾನ್ಸ್ ಶಾಲೆಗೆ ತೆರಳಿರುವ ಮಕ್ಕಳು ಬೆಳಿಗ್ಗೆ ಹಿಂದಿರುಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಹೆತ್ತವರಿಗೆ ತಮ್ಮ ಮಕ್ಕಳು ನೀರಿನಲ್ಲಿ ಮುಳುಗಿರುವ ವಿಷಯ ಬರ ಸಿಡಿಲಿನಂತೆ ಬಡಿದು ಅವರು ರೋಧಿಸುತ್ತಿದ್ದ ದೃಶ್ಯ ಮನಕಲ ಕುವಂತಿತ್ತು.

ಸಾವಿನಲ್ಲೂ ಒಂದಾದ ಗೆಳೆಯರು: ಚಂದನ್ ಹಾಗೂ ಪ್ರವೀಣ್ ಒಳ್ಳೆಯ ಸ್ನೇಹಿತರಾಗಿದ್ದು, ಎಲ್ಲಿ ಹೋದರೂ ಒಟ್ಟಿಗೆ ತೆರಳುತ್ತಿದ್ದರು. ಇದೀಗ ಸಾವಿನಲ್ಲೂ ಒಂದಾದುದನ್ನು ಕಂಡ ಜನತೆ ಮಮ್ಮಲ ಮರುಗಿದರು.

ನಂತರ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ಪೋಷಕರಿಗೆ ಒಪ್ಪಿಸಲಾಯಿತು. ಈ ಬಗ್ಗೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವರ ಭೇಟಿ, ಸಾಂತ್ವನ: ಸುದ್ದಿ ತಿಳಿ ಯುತ್ತಿದ್ದಂತೆಯೇ ಸಮುದಾಯ ಆರೋಗ್ಯ ಕೇಂದ್ರದ ಬಳಿ ಆಗಮಿಸಿದ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ರಾಜ್ಯ ಹಾಲು ಮಹಾಮಂಡಳಿ ನಿರ್ದೇಶಕ ಹೆಚ್.ಎಸ್.ನಂಜುಂಡ ಪ್ರಸಾದ್ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರಲ್ಲದೆ, ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ತಹಸೀಲ್ದಾರರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ಸಿ.ಭಾರತಿ, ಸರ್ಕಲ್ ಇನ್ಸ್‍ಪೆಕ್ಟರ್ ಎಚ್.ಎನ್. ಬಾಲಕೃಷ್ಣ, ಬೇಗೂರು ಠಾಣೆಯ ಪಿಎಸ್‍ಐ ಲೋಹಿತ್‍ಕುಮಾರ್, ಅಗ್ನಿಶಾಮಕ ದಳದ ಅಧಿಕಾರಿ ಚೆಲುವರಾಜು ಭೇಟಿ ನೀಡಿದ್ದರು.

Translate »