ಚಾಮರಾಜನಗರ ನಗರಸಭೆ ಅಧ್ಯಕ್ಷ ಗಾದಿಗೆ ಕಸರತ್ತು: ಈ ಇಬ್ಬರು ಸದಸ್ಯರೇ ಕಿಂಗ್ ಮೇಕರ್!
ಚಾಮರಾಜನಗರ

ಚಾಮರಾಜನಗರ ನಗರಸಭೆ ಅಧ್ಯಕ್ಷ ಗಾದಿಗೆ ಕಸರತ್ತು: ಈ ಇಬ್ಬರು ಸದಸ್ಯರೇ ಕಿಂಗ್ ಮೇಕರ್!

September 7, 2018

ಚಾಮರಾಜನಗರ: ಈ ಸುದ್ದಿಯ ಭಾವಚಿತ್ರದಲ್ಲಿ ಇರುವ ಇಬ್ಬರು ಚಾಮರಾಜನಗರ ನಗರಸಭೆಯ ನೂತನ ಸದಸ್ಯರು. ಒಬ್ಬರು ಬಿಎಸ್‍ಪಿ ಸದಸ್ಯ ವಿ.ಪ್ರಕಾಶ್, ಮತ್ತೊಬ್ಬರು ಪಕ್ಷೇತರ ಸದಸ್ಯ ಸಿ.ಎ. ಬಸವಣ್ಣ. ಇವರಿಬ್ಬರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಭವಿಷ್ಯ ನಿಂತಿದೆ. ಈ ಇಬ್ಬರು ಸದಸ್ಯರೇ ಇದೀಗ ಕಿಂಗ್ ಮೇಕರ್ ಆಗಿದ್ದಾರೆ.

31 ಸದಸ್ಯರ ಬಲವುಳ್ಳ ಚಾಮರಾಜ ನಗರ ನಗರಸಭೆಯ ಚುನಾವಣೆಯಲ್ಲಿ 15 ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 8, ಎಸ್‍ಡಿಪಿಐ 6, ಬಿಎಸ್‍ಪಿ 1, ಪಕ್ಷೇತರ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ಸ್ಥಳೀಯ ಸಂಸದರು (ಆರ್.ಧ್ರುವನಾರಾಯಣ್) ಹಾಗೂ ಸ್ಥಳೀಯ ಶಾಸಕ (ಸಿ.ಪುಟ್ಟರಂಗಶೆಟ್ಟಿ)ರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಹೀಗಾಗಿ ನಗರ ಸಭೆಯ ಬಲ 33 ಆಗಲಿದೆ. ಅಧಿಕಾರ ಹಿಡಿಯುವ ಪಕ್ಷ 17 ಸದಸ್ಯರನ್ನು ಹೊಂದಿರಲೇಬೇಕು. ಆದರೆ ಯಾವುದೇ ಪಕ್ಷವು ಇಷ್ಟು ಸದಸ್ಯರನ್ನು ಹೊಂದಿರದ ಕಾರಣ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ.

ಬಿಜೆಪಿ ಅಧಿಕಾರ ಹಿಡಿಯಲು ಇಬ್ಬರು ಸದಸ್ಯರ ಅವಶ್ಯಕತೆ ಇದೆ. ಇದಕ್ಕೆ ಪ್ರಯತ್ನ ನಡೆಸುತ್ತಿರುವ ಪಕ್ಷದ ಮುಖಂಡರು ಮೊದಲಿಗೆ ಬಿಎಸ್‍ಪಿ ಸದಸ್ಯ ಪ್ರಕಾಶ್ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಎಸ್‍ಡಿಪಿಐ ಸದಸ್ಯರು ತಮಗೆ ಬೆಂಬಲ ಸೂಚಿಸುವ ಸಾಧ್ಯತೆ ಕ್ಷೀಣವಾಗಿರುವ ಕಾರಣ ಬಿಜೆಪಿ ಮುಖಂಡರು ಆ ಪಕ್ಷದ ಸದಸ್ಯರನ್ನು ಮನವೊಲಿಸುವ ಪ್ರಯತ್ನವನ್ನೇ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರಕಾಶ್ ಮತ್ತು ಬಸವಣ್ಣ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಜೆಪಿ ನಗರಸಭೆ ಯಲ್ಲಿ ಅಧಿಕಾರಕ್ಕೇರುವುದು ಅಥವಾ ವಿರೋಧ ಪಕ್ಷವಾಗುವುದು ನಿಂತಿದೆ.

ಮೊದಲ ಬಾರಿಗೆ ನಗರಸಭೆ ಅಧಿಕಾರ ಹಿಡಿಯಲೇಬೇಕು ಎಂದು ಪ್ರಯತ್ನಿಸುತ್ತಿರುವ ಬಿಜೆಪಿ ಮುಖಂಡರು, ಅಸಮಾಧಾನಗೊಂಡಿರುವ ಕಾಂಗ್ರೆಸ್‍ನ ಹಿರಿಯ ಮುಖಂಡರೊಬ್ಬರನ್ನು ಭೇಟಿ ಮಾಡಿ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆ ಅಸಮಾಧಾನಿತ ಕಾಂಗ್ರೆಸ್ ಮುಖಂಡ ಹೇಳಿದಂತೆ ಕೇಳುವಒಂದಿಬ್ಬರು ಸದಸ್ಯರನ್ನು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ದಿನ ಗೈರು ಹಾಜರಿ ಮಾಡುವ ಪ್ರಯತ್ನವನ್ನು ಸಹ ಬಿಜೆಪಿ ಮುಖಂಡರು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

8 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‍ಗೆ 6 ಸದಸ್ಯರನ್ನು ಹೊಂದಿರುವ ಎಸ್‍ಡಿಪಿಐ ಬೆಂಬಲ ಸೂಚಿಸುವುದು ಖಚಿತವಾಗಿದೆ. ಹೀಗಾಗಿ ಆ ಪಕ್ಷದ ಸಂಖ್ಯಾ ಬಲ 14ಕ್ಕೆ ಏರಿಕೆ ಆದಂತಾಗಿದೆ. ಸಂಸದರು ಹಾಗೂ ಶಾಸಕರು ಕಾಂಗ್ರೆಸ್ ಪಕ್ಷದವರೇ ಆಗಿರು ವುದರಿಂದ ಅವರ ಬಲ 16ಕ್ಕೆ ಏರಿಕೆ ಆಗ ಲಿದೆ. ಅಧಿಕಾರಕ್ಕೆ ಏರಲು ಒಬ್ಬ ಸದಸ್ಯರ ಅವಶ್ಯಕತೆ ಬೇಕಾಗಿದೆ. ಬಿಎಸ್‍ಪಿ ಸದಸ್ಯ ಪ್ರಕಾಶ್ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ಅವರಲ್ಲಿ ಒಬ್ಬರು ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದರೆ ಆ ಪಕ್ಷ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದೆ.

ನಗರಸಭೆಯ ಗದ್ದುಗೆ ಏರಬೇಕು ಎಂದು ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‍ಗೆ ಒಬ್ಬ ಸದಸ್ಯರ ಅವಶ್ಯಕತೆ ಇದೆ. ಬಿಜೆಪಿಗೆ ಇಬ್ಬರು ಸದಸ್ಯರ ಅವಶ್ಯಕತೆ ಇದೆ. ಹೀಗಾಗಿ ಬಿಎಸ್‍ಪಿ ಸದಸ್ಯ ಪ್ರಕಾಶ್ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಗರಸಭೆಯ ಅಧಿಕಾರ ಹಿಡಿಯಬೇಕು ಎಂಬ ಕಾಂಗ್ರೆಸ್ ಹಾಗೂ ಬಿಜೆಪಿಯ ಭವಿಷ್ಯ ಅಡಗಿದೆ. ಅದಕ್ಕೆ ಈ ಮೊದಲೇ ಹೇಳಿದ್ದು, ಈ ಭಾವಚಿತ್ರದಲ್ಲಿ ಇರುವ ನಗರಸಭೆಯ ಇಬ್ಬರು ಸದಸ್ಯರು ಕಿಂಗ್‍ಮೇಕರ್‍ಗಳು ಎಂದು.

Translate »