ಪೆಟ್ರೋಲ್ ಬಂಕ್‍ನಲ್ಲಿ ನೂಕು-ನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ
ಕೊಡಗು

ಪೆಟ್ರೋಲ್ ಬಂಕ್‍ನಲ್ಲಿ ನೂಕು-ನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ

January 2, 2020

ಮೈಸೂರು,ಜ.1(ಆರ್‍ಕೆ)- ವಾಹನ ಗಳಿಗೆ ಇಂಧನ ತುಂಬಿಸಿಕೊಳ್ಳಲು ಉಂಟಾದ ನೂಕು-ನುಗ್ಗಲು ನಿಯಂತ್ರಿಸಲು ಪೊಲೀ ಸರು ಹರಸಾಹಸ ಪಡಬೇಕಾಗಿ ಬಂದ ಘಟನೆ ಮೈಸೂರಿನ ಮೆಟ್ರೊಪೋಲ್ ಸರ್ಕಲ್ ಬಳಿ ಮಂಗಳವಾರ ಮಧ್ಯರಾತ್ರಿ ನಡೆಯಿತು.

ದಿನದ 24 ಗಂಟೆಯೂ ತೆರೆದಿರುವ ಮೆಟ್ರೊಪೋಲ್ ಸರ್ಕಲ್ (ಕೆ.ಎಂ. ಕಾರ್ಯಪ್ಪ ವೃತ್ತ)ನಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಮಧ್ಯರಾತ್ರಿಯಾದರೂ ಯುವಕರು ಇಂಧನ ತುಂಬಿಸಿಕೊಳ್ಳಲು ಮುಗಿ ಬೀಳುತ್ತಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿಸಿ ಹೋಗುವಾಗ ನೂರಾರು ವಾಹನಗಳು ಜಮಾಯಿಸಿದ್ದರಿಂದ ಪೆಟ್ರೋಲ್ ಹಾಕಿಸಿ ಕೊಳ್ಳಲು ಯುವಕರು ನುಗ್ಗುತ್ತಿದ್ದರು.

ವಾಹನಗಳು ಸಾಲುಗಟ್ಟಿ ನಿಂತಿದ್ದರೂ, ಕೆಲವರು ಮಧ್ಯೆ ನುಗ್ಗಿ ಪೆಟ್ರೋಲ್ ಹಾಕು ವಂತೆ ದಬಾಯಿಸಿದಾಗ ಸಾಲಿನಲ್ಲಿ ನಿಂತಿರುವವರು ಸಹ ಗಲಾಟೆ ಮಾಡಿ ದರು. ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಪೆಟ್ರೋಲ್ ಬಂಕ್‍ನಲ್ಲಿ ಗದ್ದಲದ ವಾತಾವರಣ ಉಂಟಾಯಿತು.

ವಿಷಯ ತಿಳಿಯುತ್ತಿದ್ದಂತೆಯೇ ಗಸ್ತಿನ ಲ್ಲಿದ್ದ ಪೊಲೀಸರು ಪೆಟ್ರೋಲ್ ಬಂಕ್ ಬಳಿ ಬಂದು ನೀವು ಸಮಾಧಾನವಾಗಿ ನಿಲ್ಲದಿದ್ದರೆ ಬಂಕ್ ಬಾಗಿಲು ಬಂದ್ ಮಾಡಿಸುತ್ತೇವೆ ಎಂದರು. ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಯುವಕರು ವಾಗ್ವಾದಕ್ಕಿಳಿದಾಗ ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ನಾವು ಲಾಂಗ್ ಡ್ರೈವ್ ಮಾಡಿ ಕೊಂಡು ದೂರದ ಊರುಗಳಿಗೆ ಹೋಗ ಬೇಕಾಗಿರುವುದರಿಂದ ನಮಗೆ ಮೊದಲು ಪೆಟ್ರೋಲ್ ತುಂಬಲು ಅವಕಾಶ ಕೊಡಿ ಎಂದು ಮತ್ತೊಂದು ಗುಂಪು ಒತ್ತಾಯಿ ಸಿತು. ಒಮ್ಮೆಗೇ ಹೆಚ್ಚು ವಾಹನಗಳು ಜಮಾಯಿಸಿದ್ದರಿಂದ ವಾಹನಗಳಿಗೆ ಪರಸ್ಪರ ಡಿಕ್ಕಿಯಾದ ಕಾರಣ ಜಗಳ ಉಂಟಾಗುತ್ತಿತ್ತು.

ಕಡೆಗೆ ಪರಿಸ್ಥಿತಿ ನಿಯಂತ್ರಿಸಲು ಚಾಮುಂಡಿ ಕಮಾಂಡೋ ಪಡೆ ಸಿಬ್ಬಂದಿ ಕರೆಸಿ ಕೊಂಡ ದೇವರಾಜ ಠಾಣೆ ಪೊಲೀಸರು ಗುಂಪನ್ನು ತಹಬದಿಗೆ ತಂದು ಸರಾಗವಾಗಿ ಇಂಧನ ತುಂಬಲು ಅನುವು ಮಾಡಿಕೊಟ್ಟರು.

ಕೆಲವು ಯುವಕರ ಗುಂಪು ರಾತ್ರಿ 1.30ರ ನಂತರವೂ ಹಾರ್ಡಿಂಜ್ ಸರ್ಕಲ್, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ, ಕೆ.ಆರ್. ಸರ್ಕಲ್, ಡಿ. ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ ಜಂಕ್ಷನ್, ದಾಸಪ್ಪ ಸರ್ಕಲ್‍ಗಳಲ್ಲೂ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿಕೊಂಡು ಓಡಾಡುತ್ತಿದ್ದರು.

ರಾತ್ರಿಯಿಡೀ ಬಂದೋಬಸ್ತ್ ಕರ್ತವ್ಯ ದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸುರಕ್ಷಿತವಾಗಿ ಮನೆಗೆ ಹೋಗಿ ಎಂದು ತಿಳಿ ಹೇಳಿ ಯುವಕರನ್ನು ಕಳುಹಿಸುವಷ್ಟ ರಲ್ಲಿ ಸಾಕು ಸಾಕಾಯಿತು.

Translate »