ಮೃಗಾಲಯದ ಅಕ್ವೇರಿಯಂಗೆ ಶೀಘ್ರವೇ ಕಾಯಕಲ್ಪ
ಮೈಸೂರು

ಮೃಗಾಲಯದ ಅಕ್ವೇರಿಯಂಗೆ ಶೀಘ್ರವೇ ಕಾಯಕಲ್ಪ

January 2, 2020

ಮೈಸೂರು, ಜ.1- ಮೈಸೂರಿನ ಮೃಗಾಲಯದ ಆವರಣದಲ್ಲಿ ಕಳೆದ 7 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.

ಈ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಬುಧ ವಾರ ಮಾತನಾಡಿದ ಅವರು, ನನ್ನ ಕಚೇರಿಗೆ ಬರುವ ಕಡತಗಳನ್ನು ಒಂದು ದಿನವೂ ಇಟ್ಟುಕೊಳ್ಳದೆ ಅಂದೇ ವಿಲೇವಾರಿ ಮಾಡುತ್ತೇನೆ. ಅಕ್ವೇರಿಯಂಗೆ ಸಂಬಂಧಿಸಿದ ಕಡತ ನಮ್ಮ ಕಚೇರಿಗೆ ಬಂದಿರುವುದು ಗಮನಕ್ಕೆ ಬಂದಿಲ್ಲ. ನಾಳೆ ಬೆಂಗಳೂರಿಗೆ ತೆರಳುತ್ತೇನೆ. ಬಳಿಕ ಆ ಕಡತವನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಬೃಹತ್ ಅಕ್ವೇರಿಯಂ ಕಟ್ಟಡಕ್ಕೆ ಸಂಬಂಧಿಸಿದಂತೆ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಅವರಿಂದ ಸಚಿವರು ಮಾಹಿತಿ ಪಡೆದರು. ಯಾವ ತಂತ್ರಜ್ಞಾನ ಬಳಸಲು ಉದ್ದೇಶಿಸಲಾಗಿದೆ? ಯಾವ ಕಂಪನಿ ಮುಂದೆ ಬಂದಿದೆ? ಎಂದು ಪ್ರಶ್ನಿಸಿ, ಮಾಹಿತಿ ಕಲೆ ಹಾಕಿದರು.

ಸರ್ಕಾರಕ್ಕೆ ಪ್ರಸ್ತಾವನೆ: ಅಕ್ವೇರಿಯಂ ಕಾಮಗಾರಿ ಪೂರ್ಣ ಗೊಳಿಸಲು ನ್ಯೂಜಿóಲೆಂಡ್ ಸಂಸ್ಥೆ ಆಸಕ್ತಿ ವಹಿಸಿದ್ದ ಹಿನ್ನೆಲೆ ಯಲ್ಲಿ ಬಿ.ಪಿ.ರವಿ, ಅಜಿತ್ ಎಂ.ಕುಲಕರ್ಣಿ ಹಾಗೂ ಇತ ರರು ಇತ್ತೀಚೆಗಷ್ಟೇ ಗುಜರಾತ್‍ನ ಅಹಮದಾಬಾದ್‍ಗೆ ತೆರಳಿ, ಅಲ್ಲಿ ನಿರ್ಮಿಸುತ್ತಿರುವ ಅಕ್ವಾಟಿಕ್ ಲೈಫ್ ಸೈನ್ಸ್ ಪಾರ್ಕ್ ಕಾಮಗಾರಿ ವೀಕ್ಷಿಸಿ ಗುಣಮಟ್ಟ ಹಾಗೂ ಬಳಸು ತ್ತಿರುವ ತಂತ್ರಜ್ಞಾನ ಗಮನಿಸಿ, ಮೈಸೂರಿನ ಮೃಗಾಲ ಯದ ಅಕ್ವೇರಿಯಂ ಕಾಮಗಾರಿಗೆ ನ್ಯೂಜಿóಲೆಂಡ್ ಸಂಸ್ಥೆಯ ತಂತ್ರಜ್ಞಾನ ಬಳಸುವುದು ಸೂಕ್ತ ಎಂದು ನಿರ್ಧರಿಸಿದ್ದರು. ಇದಕ್ಕೆ ಅನುಮೋದನೆ ನೀಡುವಂತೆ ಕಳೆದ ಜೂನ್ ತಿಂಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು.

ಯೋಜನೆ ಹಿನ್ನೋಟ: ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಆಕರ್ಷಿಸಲು ಮೈಸೂರು ನಗರ ಪಾಲಿಕೆ 2010-11ನೇ ಸಾಲಿನಲ್ಲಿ ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಬೃಹತ್ ಮತ್ಸ್ಯಾಗಾರ(ಅಕ್ವೇರಿಯಂ)ದ ಕಾಮಗಾರಿ ಆರಂ ಭಿಸಿತ್ತು. 4.26 ಕೋಟಿ ರೂ. ವೆಚ್ಚದಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಅಕ್ವೇರಿಯಂ ಕಟ್ಟಡ ನಿರ್ಮಿಸ ಲಾಗಿತ್ತು. ಆದರೆ ಅಕ್ವೇರಿಯಂ ಕಾಮಗಾರಿ ಪೂರ್ಣಗೊಳಿ ಸಲು 30 ಕೋಟಿ ರೂ. ವೆಚ್ಚವಾಗಲಿದೆ ಎಂಬುದನ್ನು ತಿಳಿದ ಬಳಿಕ ಅನುದಾನ ಬಿಡುಗಡೆ ಮಾಡಲು ಪಾಲಿಕೆ ಹಾಗೂ ಮೃಗಾಲಯದ ನಡುವೆ ತಿಕ್ಕಾಟ ಉಂಟಾಗಿತ್ತು. ಇದರಿಂದಾಗಿ ಕಳೆದ 6 ವರ್ಷಗಳಿಂದ ಅಕ್ವೇರಿಯಂ ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿದೆ. 2018ರ ಜುಲೈ 1ರಂದು ಅಂದಿನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಸ್.ಎ.ರಾಮದಾಸ್ ಹಾಗೂ ಪಾಲಿಕೆ ಮತ್ತು ಮೃಗಾ ಲಯದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದರು. ಬಳಿಕ ಸಚಿವರ ಸೂಚನೆಯಂತೆ ಜು.14 ರಂದು ಮತ್ಸ್ಯಾಗಾರದ ಕಟ್ಟಡವನ್ನು ಮೃಗಾಲಯಕ್ಕೆ ಹಸ್ತಾಂ ತರಿಸಲಾಗಿತ್ತು. ಇದರಿಂದಾಗಿ ಮೃಗಾಲಯದ ಅಧಿಕಾರಿ ಗಳೇ ಮತ್ಸ್ಯಾಗಾರದ ಕಾಮಗಾರಿ ಪೂರ್ಣಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಿ, ವಿವಿಧೆಡೆ ನಿರ್ಮಿಸಲಾಗಿರುವ ಬೃಹತ್ ಅಕ್ವೇರಿಯಂಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಎಂ.ಟಿ.ಯೋಗೇಶ್ ಕುಮಾರ್

Translate »