ವಿವಾಹವಾಗುವುದಾಗಿ ನಂಬಿಸಿ ವಿಧವೆ ಚಿನ್ನದ ಸರ ಪಡೆದು ಪರಾರಿ
ಮೈಸೂರು

ವಿವಾಹವಾಗುವುದಾಗಿ ನಂಬಿಸಿ ವಿಧವೆ ಚಿನ್ನದ ಸರ ಪಡೆದು ಪರಾರಿ

November 22, 2019

80 ಸಾವಿರ ವಂಚನೆ ಪ್ರಕರಣ ದಾಖಲು
ಮೈಸೂರು,ನ.21(ವೈಡಿಎಸ್)-ಶಾದಿ ಡಾಟ್ ಕಾಂ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ವಿಧವೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, 80 ಸಾವಿರ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ ಪಡೆದು ಪರಾರಿಯಾಗಿರುವ ಘಟನೆ ಮೈಸೂರಲ್ಲಿ ನಡೆದಿದೆ. ಮಹಿಳೆಯೊಬ್ಬರ ಪತಿ ತೀರಿಹೋಗಿದ್ದು, ಜೀವನಾಧಾರಕ್ಕೆ ಮದುವೆಯಾಗಲು ನಿರ್ಧರಿಸಿ ಶಾದಿ ಡಾಟ್ ಕಾಮ್‍ನಲ್ಲಿ ಹೆಸರನ್ನು ನೊಂದಾಯಿಸಿದ್ದರು. ಇದನ್ನು ಗಮನಿ ಸಿದ ವಿನೀತ್‍ರಾಜ್ ಎಂಬಾತ, ಮೊಬೈಲ್ ಮೂಲಕ ಮಹಿಳೆಯನ್ನು ಪರಿಚಯಿಸಿ ಕೊಂಡಿದ್ದಾನೆ. ನಂತರದಲ್ಲಿ ತನ್ನ ಪತ್ನಿಯೂ ಸಾವನ್ನಪ್ಪಿದ್ದು, ನಿಮ್ಮನ್ನು ಮದುವೆಯಾಗು ತ್ತೇನೆ. ನಾಳೆ ಚಾಮುಂಡಿಬೆಟ್ಟಕ್ಕೆ ಹೋಗುತ್ತಿದ್ದು, ಅಲ್ಲಿಗೆ ಬರುವಂತೆ ಮಹಿಳೆಗೆ ತಿಳಿಸಿದ್ದಾನೆ. ಅದರಂತೆ ಮಹಿಳೆ, ನ.18ರಂದು ವಿನೀತ್ ಕಾರಿನಲ್ಲಿ ಬೆಟ್ಟಕ್ಕೆ ಹೋಗಿದ್ದಾರೆ. ಈ ವೇಳೆ ವಿನೀತ್, ಮದುವೆಗೂ ಮುನ್ನ ದೋಷ ಪರಿಹಾರವಾಗಲು ನಮ್ಮಲ್ಲಿರುವ ಸರವನ್ನು ಅದಲು ಬದಲು ಮಾಡಿಕೊಳ್ಳಬೇಕು. ಬೆಟ್ಟದಿಂದ ತೆರಳಿದ ನಂತರ ಸರ ವನ್ನು ವಾಪಸ್ ನೀಡುವುದಾಗಿ ನಂಬಿಸಿದ್ದಾನೆ. ಇವನ ಮಾತನ್ನು ನಂಬಿದ ಮಹಿಳೆ, ಕತ್ತಿನಲ್ಲಿದ್ದ 30 ಗ್ರಾಂ ತೂಕದ ಸರವನ್ನು ಆತನಿಗೆ ಕೊಟ್ಟು, ಆತನಿಂದ ಸರ ಪಡೆದು ಕುತ್ತಿಗೆಗೆ ಹಾಕಿಕೊಂಡಿದ್ದಾರೆ. ಆನಂತರ ಬೆಟ್ಟದಿಂದ ತೆರಳಿದ ಇಬ್ಬರೂ ಅಂಬಾರಿ ಹೋಟೆಲ್‍ಗೆ ತೆರಳಿ ತಂಪು ಪಾನೀಯ ಕುಡಿದಿದ್ದಾರೆ. ಮಹಿಳೆ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಆರೋಪಿ ವಿನೀತ್‍ರಾಜ್ ಸರದೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆ ಕೆ.ಆರ್.ಠಾಣೆಗೆ ದೂರು ನೀಡಿದ್ದಾರೆ.

Translate »