ಕಲ್ಯಾಣಿಯಲ್ಲಿ ತೇಲುತ್ತಿದ್ದ ಕಸದ ನಡುವೆ ಚೆಲುವನಿಗೆ ತೀರ್ಥಸ್ನಾನ
ಮಂಡ್ಯ

ಕಲ್ಯಾಣಿಯಲ್ಲಿ ತೇಲುತ್ತಿದ್ದ ಕಸದ ನಡುವೆ ಚೆಲುವನಿಗೆ ತೀರ್ಥಸ್ನಾನ

August 7, 2018

ಮೇಲುಕೋಟೆ: ಕಲ್ಯಾಣಿಯ ಮೂಲೆ ಮೂಲೆಗಳಲ್ಲಿ ತೇಲುತ್ತಿದ್ದ ಕಸದ ರಾಶಿ ನಡುವೆ ಚೆಲುವನಾರಾಯಣಸ್ವಾಮಿ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ತೀರ್ಥಸ್ನಾನ ಸೋಮವಾರ ಮಧ್ಯಾಹ್ನ ನೆರವೇರಿತು.

ಈ ವೇಳೆ ದೇಗುಲದ ಕೈಂಕರ್ಯಪರರು ಸಹ ವಿಧಿ ಇಲ್ಲದೇ ಕಲ್ಯಾಣಿಯಲ್ಲಿ ಕಸ ಹಾಗೂ ಗಲೀಜು ತೇಲುತ್ತಿದ್ದರೂ, ತೀವ್ರ ಅಸಮಾಧಾನದಿಂದಲೇ ದೇವರ ಮೇಲೆ ಭಾರ ಹಾಕಿ ಅಭಿಷೇಕದ ವಿಧಿ ವಿಧಾನಗಳನ್ನು ನೆರವೇರಿಸಿದರು.

ಕೃಷ್ಣರಾಜಮುಡಿ ಬ್ರಹ್ಮೋತ್ಸವ ಆರಂಭ ಕ್ಕೂ ಮುನ್ನಾ ಕಲ್ಯಾಣಿ ಅಶುಚಿತ್ವದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದರೂ, ಸಂಬಂಧಪಟ್ಟ ಅಧಿಕಾರಿಗಳು ಕಲ್ಯಾಣಿಯ ಸ್ವಚ್ಛತೆಗೆ ಕ್ರಮ ವಹಿಸದ ಕಾರಣ ಭಕ್ತರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಹೀಗಾಗಿ ಕೂಡಲೇ ಸಣ್ಣ ನೀರಾ ವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಪವಿತ್ರ ಹಾಗೂ ಭವ್ಯ ಸ್ಮಾರಕವಾದ ಕಲ್ಯಾಣಿ ಪರಿಸರ ಶುಚಿತ್ವಕ್ಕೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರು ಆಷಾಡ ಮಾಸದ ಕೃಷ್ಣರಾಜ ಮುಡಿ ತೀರ್ಥಸ್ನಾನದ ಕಾರ್ಯಕ್ರಮಗಳು ನಡೆಸುವ ಆಶಯದೊಂದಿಗೆ ನಿರ್ಮಿಸಿದ ಭುವನೇಶ್ವರಿ ಮಂಟಪದ ಅಕ್ಕಪಕ್ಕದಲ್ಲಿ ಮಲಮೂತ್ರ ವಿಸರ್ಜನೆ ಹಾಗೂ ಗಿಡ ಗಂಟೆಗಳು ಬೆಳೆದಿದ್ದರಿಂದ ಅಲ್ಲಿ ನೆರ ವೇರಬೇಕಿದ್ದ ತೀರ್ಥಸ್ನಾನದ ವಿಧಿ ವಿಧಾನಗಳು ಪಕ್ಕದ ಗಜೇಂದ್ರನ ಸನ್ನಿಧಿ ಆವರಣದಲ್ಲಿ ನೆರವೇರುವ ಮೂಲಕ ಮಹಾರಾಜರ ಆಶಯಕ್ಕೂ ತಿಲಾಂಜಲಿ ಹಾಡಿದಂತಾಯಿತು.

ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡದಿದ್ದರೂ, ಕನಿಷ್ಠ ಕಲ್ಯಾಣಿಯ ನೀರಿನಲ್ಲಿ ತೇಲುತ್ತಿದ್ದ ಕಸಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿ ಸದೇ ಕರ್ತವ್ಯ ಶ್ರದ್ಧೆ ಮೆರೆದ ಅಧಿಕಾರಿಗಳ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಥೋತ್ಸವಕ್ಕೆ ಆಗಮಿಸಿದ್ದ ದೇವಾ ಲಯದ ಕಾರ್ಯ ನಿರ್ವಾಹಕ ಅಧಿಕಾರಿ ನಂಜೇಗೌಡ ಕಲ್ಯಾಣಿ ಅಶುಚಿತ್ವದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿ, ಮಾಧ್ಯ ಮಗಳಲ್ಲಿ ಪ್ರಕಟವಾದ ವರದಿಯನ್ನು ಲಗತ್ತಿಸಿ ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ಕ್ರಮ ಜರುಗಿಸಬೇಕು ಎಂದಿದ್ದಾರೆ.

Translate »