ರಂಗಾಸಕ್ತಿಗಾಗಿ 30 ಜಿಲ್ಲೆಗಳಲ್ಲಿ ‘ಮಕ್ಕಳ ನಾಟಕ’ ಪ್ರದರ್ಶನ
ಚಾಮರಾಜನಗರ

ರಂಗಾಸಕ್ತಿಗಾಗಿ 30 ಜಿಲ್ಲೆಗಳಲ್ಲಿ ‘ಮಕ್ಕಳ ನಾಟಕ’ ಪ್ರದರ್ಶನ

August 7, 2018

ಚಾಮರಾಜನಗರ: ‘ರಂಗಭೂಮಿಯ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸಿ ಮಕ್ಕಳ ರಂಗಭೂಮಿ ಚಟುವಟಿಕೆಯನ್ನು ರಾಜ್ಯವ್ಯಾಪ್ತಿ ವಿಸ್ತರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಮೈಸೂರಿನ ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಅಭಿರುಚಿ ಸಾಹಿತ್ಯ ಸಾಂಸ್ಕೃತಿಕಯುವ ಸಂಘಟನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ‘ಪರಿವರ್ತನ’ ಮಕ್ಕಳ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲೇಬೇಕು ಎಂದು ಮಕ್ಕಳ ಮೇಲೆ ಪೋಷಕರು ಹಾಗೂ ಶಿಕ್ಷಕರು ಒತ್ತಡ ಹೇರುತ್ತಿದ್ದಾರೆ. ಆದರೆ, ಮಕ್ಕಳೊಳಗಿನ ಸೃಜನಶೀಲ ಪ್ರತಿಭೆಗೆ ಒತ್ತು ನೀಡುತ್ತಿಲ್ಲ. ಇದರಿಂದ ಅವರ ಸೃಜನಶೀಲತೆ ಕುಂದುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳ ರಂಗಭೂಮಿಗೆ ಒಂದು ಅಡಿಪಾಯವಾಗಲಿ ಎಂಬುದು ನಾಟಕ ಪ್ರದರ್ಶನದ ಉದ್ದೇಶವಾಗಿದೆ. ಒಂದು ಜಿಲ್ಲೆಯಲ್ಲಿ ಒಂದು ಉತ್ತಮ ನಾಟಕ ತಂಡವನ್ನು ಆಯ್ಕೆ ಮಾಡಿ ನಾಟಕ ತಯಾರಿಸಿ ಪ್ರದರ್ಶಿಸಲಾಗುತ್ತಿದೆ. ಈ ತಂಡಗಳು ಜಿಲ್ಲೆಯಲ್ಲಿ ಪ್ರದರ್ಶನ ನೀಡಿ, ವಿಭಾಗೀಯ ಮಟ್ಟಕ್ಕೆ ಹೋಗುತ್ತವೆ. ಅಲ್ಲಿಂದ ರಾಜ್ಯ ಮಟ್ಟಕ್ಕೆ ಹೋಗಿ ಬೆಂಗಳೂರಿನಲ್ಲಿ ಪ್ರದರ್ಶನ ನೀಡಲಿವೆ ಎಂದು ವಿವರಿಸಿದರು.

ಎಲ್ಲ ಜಿಲ್ಲೆಗಳಿಂದ ಒಟ್ಟು 600 ಮಕ್ಕಳು ಈ ಯೋಜನೆಯಲ್ಲಿದ್ದಾರೆ. ಇದರಿಂದ 600 ಮಕ್ಕಳು ನಾಟಕರಂಗಕ್ಕೆ ಬಂದಂತಾಗುತ್ತದೆ. ನಾಟಕ ಸಂಸ್ಕೃತಿ ಮಕ್ಕಳಿಗೆ ತಲುಪಬೇಕು. ಇದರಿಂದ ಸೋದರತ್ವ, ಸೌಹಾಧರ್ತೆ ಬೆಳೆಯುತ್ತದೆ. ಆಗಸ್ಟ್ ಕೊನೆಯವಾರ ವಿಭಾಗೀಯ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಮಟ್ಟದ ಪ್ರದರ್ಶನ ನಡೆಯಲಿವೆ ಎಂದು ಹೇಳಿದರು.

ರಂಗಮಂದಿರ ಇಲ್ಲದಿರುವುದಕ್ಕೆ ವಿಷಾದ: ಚಾಮರಾಜನಗರ ಸಾಂಸ್ಕೃತಿಕವಾದ ಜಿಲ್ಲೆ. ಇಲ್ಲಿ ಮಲೆ ಮಹದೇಶ್ವರ, ಮಂಟೇಸ್ವಾಮಿ ನೆಲೆಸಿದ್ದಾರೆ. ಇಂತಹ ಜಿಲ್ಲೆಯಲ್ಲಿ ರಂಗಮಂದಿರ ಇಲ್ಲದಿರುವುದು ವಿಷಾದನೀಯ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ರಂಗಮಂದಿರ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಪರಿವರ್ತನ ನಾಟಕ ರಚಿಸಿದ ಲೇಖಕಿ ಕವಿತಾ ಮಾತನಾಡಿ, ನಮ್ಮ ಸುತ್ತಮುತ್ತ ಹಾಗೂ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಈ ನಾಟಕದ ವಸ್ತು. ನನ್ನ ಅರಿವಿಗೆ ಬಂದ ಶಾಲೆಯಲ್ಲಿ ನಡೆಯುವ ವಿದ್ಯಮಾನಗಳನ್ನು ಇಲ್ಲಿ ಬರೆದಿದ್ದೇನೆ ಎಂದರು.

ಶಾಂತಲಾ ಕಲಾವಿದರ ಟ್ರಸ್ಟ್ ಅಧ್ಯಕ್ಷ ಎ.ಡಿ.ಸಿಲ್ವ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರ ಬೇಕು ಎಂಬ ಕೂಗು ಅನೇಕ ವರ್ಷಗಳಿಂದ ಇದೆ. ಇಲ್ಲಿ ನಾಟಕಗಳನ್ನು ಪ್ರಯೋಗಿಸುವವರಿಗೆ ಸೂಕ್ತ ರಂಗಮಂದಿರ ಇಲ್ಲ. ಜಿಲ್ಲಾಡಳಿತ ಭವನದ ಆವರಣದಲ್ಲಿ ರಂಗಮಂದಿರ ನಿರ್ಮಾಣವಾಗುತ್ತಿದೆ. ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ, ನಾಟಕ ತಂಡಗಳಿಗೆ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಅಭಿರುಚಿ ಸಂಘಟನೆ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ವಿನಯ್, ನಾಟಕದ ನಿರ್ದೇಶಕ ಮಂಜುನಾಥ ಕಾಚಕ್ಕಿ, ಕರ್ನಾಟಕ ರಂಗ ಪರಿಷತ್ ಜಿಲ್ಲಾಧ್ಯಕ್ಷ ಜಿ.ರಾಜಪ್ಪ, ರಂಗಕರ್ಮಿಗಳಾದ ಕೆ.ವೆಂಕಟರಾಜು, ಸಿ.ಎಂ.ನರಸಿಂಹಮೂರ್ತಿ ಹಾಜರಿದ್ದರು.

ಸಮಾಜದ ಸಮಸ್ಯೆಗೆ ಧ್ವನಿಯಾದ ಮಕ್ಕಳು

ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಶಾಲಾ ಮಕ್ಕಳು ಪ್ರದರ್ಶಿಸಿದ ಪರಿರ್ತನಾ ನಾಟಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಸುಮಾರು 6ರಿಂದ 14 ವರ್ಷದ ವರೆಗಿನ ಮಕ್ಕಳು ನಾಟಕದಲ್ಲಿ ಪಾಲ್ಗೊಂಡು, ಮನೋಜ್ಞವಾಗಿ ಅಭಿನಯಿಸಿದರು. ನಾಟಕದ ಮೂಲಕ ಶಾಲಾ ಮಕ್ಕಳು ಸಮಾಜದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರು.

ಮಕ್ಕಳ ನಾಟಕಗಳು ಹೆಚ್ಚಾಗಬೇಕು. ನಾಟಕಕ್ಕೆ ಹೆಚ್ಚು ಪ್ರತಿಭೆಗಳು ಬರಬೇಕೆಂಬ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ರಾಜ್ಯದ 30 ಜಿಲ್ಲೆಗಳಲ್ಲೂ ಆಯೋಜಿಸಿದೆ. ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು – ಜನಾರ್ದನ್(ಜನ್ನಿ) ಮಾಜಿ ನಿರ್ದೇಶಕರು, ಮೈಸೂರು ರಂಗಾಯಣ

Translate »