ಉನ್ನತ ಶಿಕ್ಷಣ ಪಡೆಯಲು ನಾಯಕ ಸಮುದಾಯ ವಿದ್ಯಾರ್ಥಿಗಳಿಗೆ ಸಲಹೆ
ಚಾಮರಾಜನಗರ

ಉನ್ನತ ಶಿಕ್ಷಣ ಪಡೆಯಲು ನಾಯಕ ಸಮುದಾಯ ವಿದ್ಯಾರ್ಥಿಗಳಿಗೆ ಸಲಹೆ

August 7, 2018

ಚಾಮರಾಜನಗರ:  ‘ನಾಯಕ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡಬೇಕು’ ಎಂದು ತಾಪಂ ಸದಸ್ಯ ಎಚ್.ವಿ.ಚಂದ್ರು ಸಲಹೆ ನೀಡಿದರು.

ನಗರದ ಶ್ರೀಮಹರ್ಷಿ ವಾಲ್ಮೀಕಿ ಭವನದಲ್ಲಿ ನಾಯಕ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ 5ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

ನಾಯಕ ಜನಾಂಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶವಿದೆ. ಸಮುದಾಯದ ಮಕ್ಕಳ ಎಸ್‍ಎಸ್‍ಎಲ್‍ಸಿ, ಪಿಯುಸಿಗೆ ಶಿಕ್ಷಣವನ್ನು ಮೊಟಕುಗೊಳಿಸದೇ ಉನ್ನತ ಶಿಕ್ಷಣ ವ್ಯಾಸಂಗಮಾಡಿ ಮುಂದಿನ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಜನಾಂಗದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಜನಾಂಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ನಾಯಕ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘವು 5 ವರ್ಷದಿಂದ ನಿರಂತರವಾಗಿ ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಪ್ರೋತ್ಸಾಹಿಸುತ್ತಿರವುದು ಬಹಳ ಅರ್ಥಪೂರ್ಣವಾದದ್ದು ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.

ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಮಾತನಾಡಿ, ಸಮುದಾಯ ಹಾಗೂ ನೌಕರರು ಜೊತೆಗೂಡಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳುವ ಸಾಮಥ್ರ್ಯವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ಪ್ರತಿಭಾ ಪುರಸ್ಕಾರ: ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರಾದ ಬಂಗಾರಸ್ವಾಮಿನಾಯಕ, ಮಾಧು, ಕೆಂಪನಾಯಕ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಪೃಥ್ವಿರಾಜ್, ಶಿಕ್ಷಣ ಸಂಯೋಜಕ ನಾ.ಮಂಜುನಾಥ್, ಶಿಕ್ಷಕ ನಾಗೇಂದ್ರ, ಉಪನ್ಯಾಸಕ ಶ್ರೀಕಂಠನಾಯಕ, ನಿವೃತ್ತ ಅಂಚೆ ನೌಕರರ ಸುಬ್ಬನಾಯಕ, ನಾಯಕ ಜನಾಂಗದ ಮುಖಂಡರಾದ ರಾಜುನಾಯಕ, ಪಿಣ್ಯನಾಯಕ, ಸಾಧನೆ ಸಂಸ್ಥೆ ಟಿ.ಜೆ.ಸುರೇಶ್, ಸಂಘದ ಅಧ್ಯಕ್ಷ ಲಿಂಗರಾಜು, ಕಾರ್ಯದರ್ಶಿ ಕಿಟ್ಟು, ಮುಖಂಡರಾದ ಶಿವಕುಮಾರ್, ಮಹೇಶ್, ಚಂದ್ರು, ನಾಗರಾಜು, ಕೃಷ್ಣನಾಯಕ, ರಾಜೇಶ್, ಕರಿಯಪ್ಪ, ಪ್ರಸನ್ನ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Translate »