ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಂಸ್ಕೃತಿಕ ವೇದಿಕೆ ಅಗತ್ಯ
ಮಂಡ್ಯ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಂಸ್ಕೃತಿಕ ವೇದಿಕೆ ಅಗತ್ಯ

August 7, 2018

ಕೆ.ಆರ್.ಪೇಟೆ:  ವಿದ್ಯಾರ್ಥಿಗಳ ಪ್ರತಿಭೆ ಗುರ್ತಿಸಿ ಪ್ರತಿಭಾ ಕಾರಂಜಿ, ಕ್ರೀಡಾ ಕೂಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸೂಕ್ತ ವೇದಿಕೆ ಕಲ್ಪಿಸಬೇಕಾದುದು ಶಾಲೆಯ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.

ತಾಲೂಕಿನ ಮುರುಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ನಡೆದ ಕಸಬಾ ಸಿಆರ್‌ಸಿ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗಮನಿಸಿ ಆ ಮಗುವಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಇಲ್ಲದಿದ್ದರೆ ತಮ್ಮ ವೃತ್ತಿಗೆ ದ್ರೋಹ ಹಾಗೂ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಹಿಂದೆ ಮಕ್ಕಳಲ್ಲಿ ಪ್ರತಿಭೆ ಇದ್ದರೂ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿರಲಿಲ್ಲ. ಇದರಿಂದ ಮಕ್ಕಳು ತಮ್ಮ ಪ್ರತಿಭೆ ಹೊರ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿಭಾ ಕಾರಂಜಿಯನ್ನು ರಾಜ್ಯ ಸರ್ಕಾರ ರೂಪಿಸಿದ್ದರಿಂದ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಅವಕಾಶ ವಾಗಿದೆ. ಈ ಪ್ರತಿಭಾ ಕಾರಂಜಿ, ಕ್ರೀಡಾ ಕೂಟ, ಸಾಂಸ್ಕøತಿಕ ಸ್ಪರ್ಧೆಗಳು ಮಕ್ಕಳ ಬಹುಮುಖ ಪ್ರತಿಭೆ ಹಾಗೂ ಮಕ್ಕಳ ಜ್ಞಾನ ವಿಕಾಸಕ್ಕೆ ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್. ವಿಜಯಕುಮಾರ್ ಮಾತನಾಡಿ, ಮಕ್ಕಳ ಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾ ಗಿದ್ದು, ಮಕ್ಕಳು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆಯುವಂತಾದರೆ ಅದರಿಂದ ಶಾಲೆಗೆ ಹಾಗೂ ಶಿಕ್ಷಕರಿಗೆ ಗೌರವ ಬರುತ್ತದೆ. ಇದನ್ನರಿತು ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಜಾನಕೀರಾಂ, ಎಪಿಎಂಸಿ ನಿರ್ದೇಶಕ ಹೆಚ್.ಆರ್.ನಾಗರಾಜೇಗೌಡ, ಮುರುಕ ನಹಳ್ಳಿ ಎಸ್‍ಡಿಎಂಸಿ ಅಧ್ಯಕ್ಷ ರಮೇಶ್, ಮುಖ್ಯ ಶಿಕ್ಷಕ ಚಿದಾನಂದ್, ಗ್ರಾಪಂ ಉಪಾಧ್ಯಕ್ಷೆ ಮಮತಾ, ಸದಸ್ಯ ಎಂ.ಎನ್. ರಾಮೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಜೆ. ಕುಮಾರ್, ಸಿಆರ್‍ಪಿ ಧರ್ಮರಾಜ್, ಕುಮಾರಿ, ಮುಖಂಡರಾದ ಈರಪ್ಪ, ಕುಮಾರ್, ಹೊನ್ನೇಶ್ ಮತ್ತಿತರರಿದ್ದರು.

Translate »