ಕೊಡಗಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ ಸಂತ್ರಸ್ತರಿಗೆ ಅಭಯ
ಮೈಸೂರು

ಕೊಡಗಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ ಸಂತ್ರಸ್ತರಿಗೆ ಅಭಯ

August 19, 2018
  • ಮನೆ ಕಳೆದುಕೊಂಡವರಿಗೆ ಬಡಾವಣೆ ನಿರ್ಮಾಣ ಮಾಡಲು ನಿರ್ಧಾರ
  • ಮೃತರ ಕುಟುಂಬಕ್ಕೆ 5 ಲಕ್ಷ, ಮನೆ ಕಳೆದುಕೊಂಡವರಿಗೆ 2 ಲಕ್ಷ ಪರಿಹಾರ
  • ಗುಡ್ಡ ಕುಸಿತ ಮುಂದುವರಿಕೆ; ಭೂಕಂಪದ ವದಂತಿ
  • 32 ಶಿಬಿರಗಳಲ್ಲಿ 3400 ಮಂದಿಗೆ ಆಶ್ರಯ
  • ಕೊಡಗಿನ ಜನರ ರಕ್ಷಣೆಗೆ ಸೇನಾ ಕಾರ್ಯಾಚರಣೆ ಆರಂಭ
  • ಕೊಡಗಿನ ನೆರವಿಗೆ ಕೇಂದ್ರ ಸರ್ಕಾರ ಸಿದ್ಧ: ಕೇಂದ್ರ ಸಚಿವ ಸದಾನಂದಗೌಡ

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಿಂದ ಮನೆ ಕಳೆದು ಕೊಂಡವರಿಗಾಗಿ ಬಡಾವಣೆಯೊಂದನ್ನು ನಿರ್ಮಿಸಿ, ಮನೆಗಳನ್ನು ಹಂಚಿಕೆ ಮಾಡಲಾಗುವುದೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇಂದು ಬೆಂಗಳೂರಿ ನಿಂದ ಹೆಲಿಕಾಪ್ಟರ್ ಮೂಲಕ ಪಿರಿಯಾಪಟ್ಟಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ರಸ್ತೆ ಮೂಲಕ ಮಡಿಕೇರಿಗೆ ಬಂದು ಸೇನೆಯ ವಿಶೇಷ ವಿಮಾನದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ನಂತರ ಪೊಲೀಸ್ ಸಮುದಾಯ ಭವನ, ಮೈತ್ರಿ ಹಾಲ್‍ನಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ಇದು ಪ್ರಕೃತಿಯಿಂದಾದ ವಿಕೋಪವಾಗಿದ್ದು, ಎಲ್ಲಾ ರೀತಿಯ ನೆರವನ್ನು ಸರ್ಕಾರ ನೀಡಲಿದೆ. ಮನೆ ಕಳೆದುಕೊಂಡವರಿಗೆ ಸರ್ಕಾರದ ಮೂಲಕವೇ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ಜೀವಹಾನಿಗೆ 5 ಲಕ್ಷ ರೂ. ಹಾಗೂ ಮನೆ ಕಳೆದುಕೊಂಡವರಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಸರ್ಕಾರ ಸಂತ್ರಸ್ತರೊಂದಿಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಈ ರೀತಿಯ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆಯಬಾರದಾಗಿತ್ತು. ಆದರೆ, ನಡೆದು ಹೋಗಿದೆ. ಮುಂದೆ ನೊಂದವರಿಗೆ ನೆರವನ್ನು ನೀಡುವುದು ಸರ್ಕಾರದ ಜವಾಬ್ದಾರಿ ಯಾಗಿದ್ದು, ಇದನ್ನು ನಿಭಾಯಿಸುವುದಾಗಿ ಭರವಸೆ ನೀಡಿದರು.

2 ದಿನ ವಾಸ್ತವ್ಯ: ಮುಂದಿನ ವಾರ ಜಿಲ್ಲೆಗೆ ಆಗಮಿಸಿ 2 ದಿನ ವಾಸ್ತವ್ಯ ಹೂಡುವ ಮೂಲಕ ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ನಿಮ್ಮ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಕಾರ್ಯವನ್ನು ನಾನು ಮಾಡುತ್ತೇನೆಂದು ಭರವಸೆ ನೀಡಿದ ಮುಖ್ಯಮಂತ್ರಿಗಳು ವಿಶೇಷ ವಿಮಾನದ ಮೂಲಕ ಬೆಟ್ಟ ಪ್ರದೇಶದಲ್ಲಿ ಸಿಲುಕಿರುವ ಗ್ರಾಮಸ್ಥರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದೆಂದರು. ಸಂತ್ರಸ್ತರ ಸಲಹೆಯಂತೆಯೇ ಬಡಾವಣೆÉ ಮತ್ತು ಮನೆಗಳು ನಿರ್ಮಾಣವಾಗಲಿದೆ ಯೆಂದು ಸ್ಪಷ್ಟಪಡಿಸಿದರು.

ಕಣ್ಣೀರಿಟ್ಟ ಸಂತ್ರಸ್ತರು: ಮುಖ್ಯಮಂತ್ರಿಗಳ ಬಳಿ ಅಳಲು ತೋಡಿಕೊಂಡ ಸಂತ್ರಸ್ತರು ಕಳೆದ 42 ವರ್ಷಗಳ ಬದುಕು ಮಣ್ಣು ಪಾಲಾಗಿದೆಯೆಂದು ಕಣ್ಣೀರು ಹಾಕಿದರು. ಕಲ್ಲು ಮತ್ತು ಮಣ್ಣಿನ ರಾಶಿ ಒಟ್ಟಿಗೆ ಬಂದು ನಮ್ಮನ್ನು ಊರು ಬಿಡುವಂತೆ ಮಾಡಿದೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಾವು ಬದುಕಿದ್ದೇವೆ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ನೊಂದವರಿಗೆ ಸಾಂತ್ವನ ಹೇಳಿದ ಸಿಎಂ ಕುಮಾರಸ್ವಾಮಿ ನಿಮ್ಮೊಂದಿಗೆ ನಾನಿದ್ದೇನೆ. ಹೊಸ ಬದುಕು ಕಟ್ಟಿಕೊಡುತ್ತೇನೆ ಎಂದು ಭರವಸೆ ನೀಡಿದಾಗ ಸಂತ್ರಸ್ತರು ಜೈಕಾರ ಹಾಕಿದರು. ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಸಭೆ ರದ್ದು: ಇತ್ತ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸುತ್ತಾರೆ ಎಂದು ಕಾಯ್ದು ಕುಳಿತಿದ್ದ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಶಾಸಕ ಕೆ.ಜಿ.ಬೋಪಯ್ಯ, ದಿಢೀರಾಗಿ ಮುಖ್ಯಮಂತ್ರಿಗಳ ಸಭೆ ರದ್ದಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭಾಂಗಣದಿಂದ ಹೊರ ಬಂದ ಡಿ.ವಿ.ಸದಾನಂದ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮನ್ನು ಸಭೆಗೆ ಆಹ್ವಾನಿಸಿ, ಸಭೆಯನ್ನು ದಿಢೀರಾಗಿ ರದ್ದುಗೊಳಿಸಿರುವ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದರು.

Translate »