ಹುಣಸೂರಿನಲ್ಲಿ ಮಕ್ಕಳ ದಿನಾಚರಣೆ
ಮೈಸೂರು

ಹುಣಸೂರಿನಲ್ಲಿ ಮಕ್ಕಳ ದಿನಾಚರಣೆ

November 26, 2018

ಹುಣಸೂರು:  ಮಾನವ, ಕೃಷಿ ಮತ್ತು ಪರಿಸರಕ್ಕೆ ಪೂರಕವಾಗಿರುವ ಪಕ್ಷಿಗಳ ಸಂರಕ್ಷಿಸುವ ಜೊತೆಗೆ ಅವುಗಳನ್ನು ಪ್ರೀತಿಯಿಂದ ಕಾಣಬೇಕು ಎಂದು ಮೈಸೂರಿನ ಪಕ್ಷಿ ಪ್ರೇಮಿ, ಸೆಂಟ್ ಥಾಮಸ್ ಸೆಂಟ್ರಲ್ ಸ್ಕೂಲ್‍ನ ಏಳನೇ ತರಗತಿ ವಿದ್ಯಾರ್ಥಿನಿ ಎಸ್.ವರ್ಷಿಣಿ ತಿಳಿಸಿದರು.

ನಗರದ ಶಾಸ್ತ್ರೀ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯ ಅತಿಥಿಯಾಗಿದ್ದ ವರ್ಷಿಣಿ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿ, ಆಧುನಿಕತೆ ಬೆಳೆದಂತೆ ಪಕ್ಷಿಗಳ ಸಂತತಿಯೂ ಸಹ ನಶಿಸುತ್ತಿರುವುದು ಬೇಸರದ ಸಂಗತಿ, ಇಂದು ನಾವೆಲ್ಲ ಮೊಬೈಲ್ ಇಲ್ಲದ ಜೀವನವೇ ಇಲ್ಲವೆಂಬಂತೆ ಆಗಿದ್ದೇವೆ. ಆ ಮೊಬೈಲ್ ಟವರ್ ನಿರ್ಮಿಸಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಪಕ್ಷಿಗಳ ಓಡಾಟ-ಗೂಡು ಕಟ್ಟುವುದಕ್ಕೆ ತೊಂದರೆಯಾಗಿರುವುದನ್ನು ಯಾರೂ ಸಹ ಗಮನಿಸುತ್ತಿಲ್ಲ. ಈ ಬಗ್ಗೆ ವಿದ್ಯಾರ್ಥಿ ಜೀವನದಿಂದಲೇ ಪ್ರಾಣಿ ಪಕ್ಷಿಗಳ ಉಳಿವಿನ ಬಗ್ಗೆ ಗಮನ ಹರಿಸಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮುಖ್ಯಶಿಕ್ಷಕ ನಾಗರಾಜ್ ದಾ.ರಾ.ಬೇಂದ್ರೆ ಕಾವ್ಯವಾಚನ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರವಿಶಂಕರ್, ನಿರ್ದೇಶಕ ಸಚ್ಚಿತ್, ಶೈಕ್ಷಣಿಕ ಸಂಯೋಜಕಿ ಸತ್ಯವತಿ ಹಾಗೂ ಶಿಕ್ಷಕರು ಹಾಗೂ ಪೋಷಕ ವೃಂದದವರಿದ್ದರು.

Translate »