‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್
ಚಾಮರಾಜನಗರ

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್

May 6, 2018

ಚಾಮರಾಜನಗರ:  ಜಿಲ್ಲೆಯು ಕಾಂಗ್ರೆಸ್‍ನ ಭದ್ರಕೋಟೆ. ಇದು 2008 ಮತ್ತು 2013ರಲ್ಲಿ ವಿಧಾನಸಭಾ ಚುನಾವಣೆ ಹಾಗೂ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಈ `ಕೈ’ ಕೋಟೆಯ ಮೇಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಾದರೂ ‘ಕಮಲ’ ವನ್ನು ಅರಳಿಸಬೇಕು ಎಂದು ಬಿಜೆಪಿ ಅವಿರತ ಪ್ರಯತ್ನ ನಡೆಸಿದೆ.

ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ `ಕೈ’ಯ ಕೋಟೆಯಾಗಿದೆ. 2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು.

2017ರಲ್ಲಿ ಗುಂಡ್ಲುಪೇಟೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಕಾಂಗ್ರೆಸ್‍ನ ಈ ಗೆಲುವಿನ ನಾಗಾಲೋಟಕ್ಕೆ ಲಗಾಮು ಹಾಕಲು ಬಿಜೆಪಿ ಎಲ್ಲಾ ಚುನವಣೆಗಳಲ್ಲೂ ಪ್ರಯತ್ನಿಸಿದೆ. ಆದರೆ ಇದು ವಿಫಲವಾಗಿದೆ. ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಾದರೂ ಇದರಲ್ಲಿ ಯಶಸ್ಸು ಕಾಣಬೇಕು ಎಂದು ಬಿಜೆಪಿ ವರಿಷ್ಠರು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನೇ ಮೊದಲ ಬಾರಿಗೆ ಜಿಲ್ಲೆಗೆ ಕರೆಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಕಾಂಗ್ರೆಸ್‍ನ ಕೋಟೆಯಲ್ಲಿ ಕಮಲ ಅರಳಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದಾರೆ. ಆದರೆ ಜಿಲ್ಲೆ ಕಾಂಗ್ರೆಸ್‍ನ `ಕೈ’ ಕೋಟೆ ಆಗಿರುವ ಕಾರಣ ನಮ್ಮ `ಕೈ’ ಕೋಟೆಯ ಮೇಲೆ ಕಮಲವನ್ನು ಅರಳಿಸಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕಾಂಗ್ರೆಸ್ ವರಿಷ್ಠರು, ಸಂಸದರು, ಅಭ್ಯರ್ಥಿಗಳು ಮುಖಂಡರು ನಿರ್ಧರಿಸಿ ವ್ಯಾಪಕ ಪ್ರಚಾರದಲ್ಲಿ ನಿರತವಾಗಿದ್ದಾರೆ. ಹೀಗಾಗಿ ಫಲಿತಾಂಶ ಕುತೂಹಲ ಕೆರಳಿಸಿದೆ.

ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿ ಹವಾ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳ ಜಾರಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೊಳಿಸಿದ ಯೋಜನೆಗಳು, ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಿದ್ದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗಿದೆ. ಈ ಬಾರಿ ಜಿಲ್ಲೆಯ 4ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಲಿದೆ.
– ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ

ಕಾಂಗ್ರೆಸ್ ಈ ಹಿಂದಿನಂತೆ ದಲಿತರು, ಉಪ್ಪಾರರು, ಕುರುಬರು, ಅಲ್ಪ ಸಂಖ್ಯಾತರು, ಕ್ರಿಶ್ಚಿಯನ್, ಮುಸ್ಲಿಂ ಸೇರಿದಂತೆ ಹಿಂದುಳಿದ ಸಮುದಾಯ ಮತಗಳ ಮೇಲೆ ಹೆಚ್ಚಿನ ಕಣ್ಣು ಇಟ್ಟಿದೆ. ಈ ವರ್ಗಗಳ ಮತದಾರರ ಮತಗಳು ನಮ್ಮ ಪಕ್ಷಕ್ಕೆ ಬಹುತೇಕ ಬರುವುದರಿಂದ ಈ ಬಾರಿಯ ಗೆಲುವು ನಮ್ಮದೇ ಎಂದು ಕಾಂಗ್ರೆಸ್ ವರಿಷ್ಠರು ಅಭ್ಯರ್ಥಿಗಳು ಹಾಗೂ ಮುಖಂಡರು ಆಶಾಭಾವನೆಯಲ್ಲಿ ಇದ್ದಾರೆ. ಬಿಜೆಪಿಯು ವೀರಶೈವ ಲಿಂಗಾಯಿತ, ನಾಯಕರು, ಬ್ರಾಹ್ಮಣರು ಸೇರಿದಂತೆ ಇತರ ಮೇಲ್ವರ್ಗದ ಸಮುದಾಯಗಳ ಮತಗಳನ್ನು ಮೆಚ್ಚಿಕೊಂಡಿದೆ.

ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ, ಇದು ಎಲ್ಲಾ ಚುನಾವಣೆಗಳಲ್ಲೂ ಸಾಬೀತಾಗಿದೆ. ಜಿಲ್ಲೆಗೆ ಯಾವುದೇ ಪಕ್ಷದ ವರಿಷ್ಠರು ಆಗಮಿಸಿ ಪ್ರಚಾರ ನಡೆಸಿದರೂ ಅವರ ಪ್ರಭಾವ ಕಾಂಗ್ರೆಸ್ ಮೇಲೆ ಬೀರುವುದಿಲ್ಲ. ಕಳೆದ 5 ವರ್ಷದಿಂದ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು ಜಾರಿಯೇ ನಮಗೆ ಶ್ರೀರಕ್ಷೆ. ಈ ಚುನಾವಣೆಯಲ್ಲೂ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಭೀತಾಗಲಿದೆ.
– ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ವೀರಶೈವ ಲಿಂಗಾಯಿತ ಮತದಾರರು ಸಾರಸಾಗಾಟವಾಗಿ ನಮ್ಮನ್ನು ಬೆಂಬಲಿಸಲಿದ್ದಾರೆ. ತಳವಾರ ಮತ್ತು ಪರಿವಾರ ಪದಗಳನ್ನು ಪರಿಶಿಷ್ಟ ವರ್ಗಕ್ಕೆ ಕೇಂದ್ರ ಸರ್ಕಾರ ಸೇರ್ಪಡೆ ಮಾಡಿರುವುದರಿಂದ ನಾಯಕ ಸಮಾಜದ ಮತಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಬರಲಿದೆ. ಇದಲ್ಲದೆ ಮುಂದುವರೆದ ಸಮುದಾಯಗಳು ಮೊದಲಿನಂತೆ ಬಿಜೆಪಿ ಬೆಂಬಲಿಸುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಕಮಲ ಅರಳಲಿದೆ ಎಂಬ ಆಶಾ ಭಾವನೆಯನ್ನು ಪಕ್ಷದ ವರಿಷ್ಠರು, ಅಭ್ಯರ್ಥಿಗಳು ಹಾಗೂ ಮುಖಂಡರು ಹೊಂದಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಲ್ಲದೆ ಜೆಡಿಎಸ್-ಬಿಎಸ್‍ಪಿ ಮೈತ್ರಿ ಅಭ್ಯರ್ಥಿ, ಪಕ್ಷೇತರ ಅಭ್ಯರ್ಥಿಗಳು, ಇತರೆÀ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಇದ್ದಾರೆ. ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಬಿಎಸ್‍ಪಿ-ಜೆಡಿಎಸ್ ಅಭ್ಯರ್ಥಿ, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿರುವುದು ಆಯಾಯ ಪಕ್ಷಗಳ ವರಿಷ್ಠರು ಹಾಗೂ ಅಭ್ಯರ್ಥಿಗಳಲ್ಲಿ ಆತಂಕ ತಂದೊಡ್ಡಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿಯಾಗಿ ಆ ಪಕ್ಷದ ಅಧ್ಯಕ್ಷ, ಹನೂರು ಕ್ಷೇತ್ರದಲ್ಲಿ ಜೆಡಿಎಸ್-ಬಿಎಸ್‍ಪಿ ಮೈತ್ರಿ ಅಭ್ಯರ್ಥಿ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.

Translate »