ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿಯ ಅಶ್ಲೀಲ ಬರಹಗಳಿಗೆ ಬಣ್ಣ ಬಳಿದು ಸ್ವಚ್ಛತಾ ಕಾಯಕ
ಮೈಸೂರು

ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿಯ ಅಶ್ಲೀಲ ಬರಹಗಳಿಗೆ ಬಣ್ಣ ಬಳಿದು ಸ್ವಚ್ಛತಾ ಕಾಯಕ

June 13, 2019

ಮೈಸೂರು: ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಬಳಿ ಅಶ್ಲೀಲ ಬರಹಗಳನ್ನು ಬರೆದು ವಿರೂಪಗೊಳಿಸಿದ್ದ ಜಾಗಕ್ಕೆ ಬಣ್ಣ ಬಳಿದು, ಇಲ್ಲಿನ ಸುತ್ತಮುತ್ತಲಿನ ಜಾಗವನ್ನು ಮೈಸೂರು ಯುವ ಬ್ರಿಗೇಡ್ ಕಾರ್ಯಕರ್ತರು ಸೋಮವಾರ ಸ್ವಚ್ಛತಾ ಕಾರ್ಯ ನಡೆಸಿದರು.

ಚಾಮುಂಡಿಬೆಟ್ಟದ ಮೈಸೂರು ವ್ಯೂ ಪಾಯಿಂಟ್ ಗೋಡೆಗಳ ಮೇಲೆ ಯಾರೋ ಕಿಡಿಗೇಡಿಗಳು ಅಶ್ಲೀಲ ಬರಹಗಳಿಂದ ಅಂದಗೆಡಿಸಿದ್ದರು. ಈ ವಿಷಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ವಿಷಯ ತಿಳಿದ ಯುವ ಬ್ರಿಗೇಡ್ ಕಾರ್ಯಕರ್ತರು ಅಶ್ಲೀಲ ಬರಹ ಗಳಿಂದ್ದ ಜಾಗದಲ್ಲಿ ಬಣ್ಣ ಬಳಿದು, ಮಲೀನಗೊಂಡಿದ್ದ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಈ ಬಗ್ಗೆ, `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಯುವ ಬ್ರಿಗೇಡ್ ಸಂಚಾಲಕ ನಿಂಗರಾಜ್, ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಬಳಿಯ ಗೋಡೆಗಳ ಮೇಲೆ ಯಾರೋ ಕಿಡಿಗೇಡಿಗಳು ಅಶ್ಲೀಲ ಬರಹಗಳನ್ನು ಬರೆದಿದ್ದರು. ಇದರಿಂದ ಇಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಮುಜುಗರವಾಗುತ್ತಿತ್ತು. ಇದನ್ನು ಮನಗಂಡ ಯುವಬ್ರಿಗೇಡ್‍ನ 20 ಮಂದಿ ಯುವಕರು ಮೈಸೂರು ವ್ಯೂ ಪಾಯಿಂಟ್ ಬಳಿ ಸ್ವಚ್ಛಗೊಳಿಸಿ, ಅಶ್ಲೀಲ ಗೋಡೆ ಬರಹಗಳಿಗೆ ಬಿಳಿ ಬಣ್ಣ ಬಳಿಯಲಾಗಿದೆ ಎಂದರು.

ನಾವು ಒಮ್ಮೆ ಈ ರೀತಿ ಮಾಡಬಹುದು. ಆದರೆ, ಪದೇಪದೆ ಈ ಘಟನೆ ಮರು ಕಳಿಸುತ್ತಿದ್ದರೆ ಏನು ಮಾಡುವುದು. ಇದಕ್ಕೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪ್ರಮುಖ ಪ್ರವಾಸಿ ಜಾಗದಲ್ಲ್ಲಿ ಅಶ್ಲೀಲ ಬರಹಗಳ ತಡೆಗಟ್ಟುವ ಕ್ರಮ ಕೈಗೊಳ್ಳಬೇಕು ಮತ್ತು ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಅಗತ್ಯ ಎಂದು ಪ್ರತಿಪಾದಿಸಿದರು.

ದೇಶದ ಬೇರೆ ಬೇರೆ ರಾಜ್ಯಗಳಿಂದ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲು ಬರುತ್ತಾರೆ. ಹೀಗೆ ಬಂದವರು ಮೈಸೂರು ವ್ಯೂವ್ ಪಾಯಿಂಟ್ ಬಳಿ ಸ್ವಲ್ಪ ಹೊತ್ತು ನಿಂತು ನಗರದ ಅಂದ ಸವಿಯುವ ಪ್ರವಾಸಿಗರು, ತಿಂಡಿ-ತಿನಿಸುಗಳನ್ನು ತಿಂದು ಬೇಕಾಬಿಟ್ಟಿ ತ್ಯಾಜ್ಯ ಎಸೆದು ಹೋಗಿರುತ್ತಾರೆ. ಇದನ್ನು ಸ್ವಚ್ಛಗೊಳಿಸುವವರ್ಯಾರು?. ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ವಲಯ ಎಂದು ಘೋಷಿಸಿದ್ದರೂ ಅದು ಪಾಲನೆಯಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕುವವರ್ಯಾರು ಎಂದು ಪ್ರಶ್ನಿಸಿದರು.

Translate »