ತಿಂಗಳಲ್ಲಿ ಒಂದು ದಿನ ಸ್ಮಶಾನ ಒತ್ತುವರಿ ತೆರವು, ನಿರ್ವಹಣೆ:   ಮೈಸೂರು ತಾಲೂಕು ಪಂಚಾಯಿತಿ ಇಓ ನಿರ್ಧಾರ
ಮೈಸೂರು

ತಿಂಗಳಲ್ಲಿ ಒಂದು ದಿನ ಸ್ಮಶಾನ ಒತ್ತುವರಿ ತೆರವು, ನಿರ್ವಹಣೆ: ಮೈಸೂರು ತಾಲೂಕು ಪಂಚಾಯಿತಿ ಇಓ ನಿರ್ಧಾರ

December 11, 2019

ಮೈಸೂರು, ಡಿ.10(ಎಂಟಿವೈ)- ಮೈಸೂರು ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ, ಕುಡಿಯುವ ನೀರು ಹಾಗೂ ಸ್ಮಶಾನದ ಸಮಸ್ಯೆ ತಲೆದೋರಿದ್ದು, ಶೀಘ್ರವೇ ಪರಿ ಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಾಪಂ ಇಒ ಸಿ.ಆರ್.ಕೃಷ್ಣಕುಮಾರ್ ಭರವಸೆ ನೀಡಿದ್ದಾರೆ

ಮೈಸೂರು ನಜರ್‍ಬಾದ್‍ನಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಾ.ಪಂ ಸಭಾಂಗಣದಲ್ಲಿ ಅಧÀ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯಲ್ಲಿ ಸ್ಮಶಾನಗಳಿಲ್ಲದೆ, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದ ಜಾಗ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದ್ದು, ನಾಳೆಯಿಂದಲೇ (ಡಿ.11) ಒತ್ತುವರಿ ತೆರವುಗೊಳಿಸಿ, ಸ್ಮಶಾನ ರಕ್ಷಣೆಗಾಗಿ ಪ್ರತಿ ತಿಂಗಳಲ್ಲಿ ಒಂದು ದಿನ ಸ್ಮಶಾನ ಸರ್ವೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಡಿ.11, 12ರಂದು ಏಕಕಾಲದಲ್ಲಿ 32 ಸ್ಮಶಾನ ಗಳನ್ನು ಸರ್ವೆ ಮಾಡಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ನಾಗನಹಳ್ಳಿ, ಲಿಂಗದೇವರಕೊಪ್ಪಲು, ಉದ್ಬೂರು, ಕಲ್ಲಹಳ್ಳಿ, ಕಡಕೋಳ, ಜೈಪುರ, ಮಾರ್ಗಳ್ಳಿ (3), ಲಕ್ಷ್ಮಿಪುರ, ದಮ್ಮನಹಳ್ಳಿ, ಮೇಗಳಾಪುರ, ಕೂರ್ಗಳ್ಳಿ, ಯಡತೊರೆ, ವರುಣಾ ಹೋಬಳಿಯಲ್ಲಿ ಪಿಡಿಒ ಸಹಕಾರದೊಂದಿಗೆ ಸರ್ವೆ ಮಾಡಿ ಸ್ಮಶಾನವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ತಾಪಂ ಸದಸ್ಯರಾದ ಹನುಮಂತು ಹಾಗೂ ರೇವಣ್ಣ ಪ್ರತಿಕ್ರಿಯಿಸಿ, 2011-12ರಿಂದ ಸ್ಮಶಾನ ಅಭಿವೃದ್ಧಿಗೆ ಅರ್ಜಿ ಸಲ್ಲಿಸಿದ್ದರೂ, ಇದು ವರೆಗೂ ಅಭಿವೃದ್ಧಿ ಮಾಡಿಲ್ಲ ಎಂದರು. ಇದಕ್ಕೆ ಇಒ ಪ್ರತಿಕ್ರಿಯಿಸಿ, ಸ್ಮಶಾನವಿಲ್ಲದೆ, ಕೆಲ ಗ್ರಾಮ ಗಳಲ್ಲಿ ಕೆರೆ, ಕಾಲುವೆ ಜಾಗದಲ್ಲಿ ಶವ ಹೂಳುತ್ತಿ ದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಕ್ರಮ ಕೈಗೆತ್ತಿಕೊಳ್ಳುತ್ತಿದ್ದೇವೆ. ಪ್ರತಿ ತಿಂಗಳು ಒಂದು ದಿನ ಸ್ಮಶಾನಗಳ ಒತ್ತುವರಿ ತೆರವು ಹಾಗೂ ಅವುಗಳ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ. ಇದಕ್ಕೆ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಯತೀಂದ್ರ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆ 2.4 ಕೋಟಿ ಅನುದಾನ: ಗ್ರಾಮಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಕಂಡುಬರು ತ್ತಿದೆ. 37 ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಯನ್ನು ಗುರುತಿಸಿದ್ದೇವೆ. ಅವುಗಳಲ್ಲಿ 21 ಗ್ರಾಪಂ ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿ ಸಲು ಅನುಮೋದನೆ ಕಳುಹಿಸಿದ್ದೆವು. ಈಗ 12 ಗ್ರಾಪಂ ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು 2.4 ಕೋಟಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಿ ಉಳಿದ ಗ್ರಾಮ ಗಳಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗ್ರಾಮೀಣ ವಲಯವನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಪಂಗೆ 3ರಂತೆ 150 ಶಾಲೆಗಳಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ನಿರ್ಮಾಣ ಮಾಡುವಂತೆ ಜಾಗೃತಿ ಮೂಡಿಸಲಾಗುವುದು. ಜತೆಗೆ ಹಸಿ-ಒಣಕಸ ಬೇರ್ಪಡಿಸುವಿಕೆ, ಮರು ಬಳಕೆ ಬಗ್ಗೆಯೂ ಮಕ್ಕಳಿಗೆ ತಿಳಿಸಿಕೊಡಲಾಗು ವುದು ಎಂದು ಹೇಳಿದರು. ಸಭೆಯಲ್ಲಿ ತಾ.ಪಂ ಉಪಾ ಧ್ಯಕ್ಷ ಎನ್.ಬಿ.ಮಂಜು, ವಿವಿಧ ಸ್ಥಾಯಿ ಸಮಿತಿ ಸದಸ್ಯರು, ತಾ.ಪಂ ಸದಸ್ಯರು ಪಾಲ್ಗೊಂಡಿದ್ದರು.

ಬಹುತೇಕ ಹಾಸ್ಟೆಲ್‍ಗಳು ಬಾಡಿಗೆ ಕಟ್ಟಡಗಳಲ್ಲಿ: ಮೂಲ ಸೌಲಭ್ಯಗಳಿಲ್ಲದೆ ಅವ್ಯವಸ್ಥೆ ಕೊಂಪೆಗಳಾಗಿರುವ ಬಗ್ಗೆ ಸದಸ್ಯರ ಆಕ್ರೋಶ

ಮೂಲ ಸೌಲಭ್ಯಗಳಿಲ್ಲದ, ಅಶುಚಿತ್ವದ ವಾತಾವರಣ, ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ವಿವಿಧ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತಾ.ಪಂ ಸದಸ್ಯ ಹನುಮಂತು ಒತ್ತಾಯಿಸಿದರು.

ಮೈಸೂರು ಮಿನಿ ವಿಧಾನಸೌಧದ ತಾಪಂ ಸಭಾಂಗಣದಲ್ಲಿ ಮಂಗಳ ವಾರ ತಾಪಂ ಅಧÀ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆÉಯಲ್ಲಿ ಮಾತನಾಡಿದ ಅವರು, ಮೈಸೂರು ತಾಲೂಕು ವ್ಯಾಪ್ತಿಯ ಸಾತಗಳ್ಳಿ, ಹೂಟಗಳ್ಳಿ, ಕುವೆಂಪುನಗರ, ವಿಜಯನಗರದಲ್ಲಿ ಎಸ್‍ಸಿ, ಎಸ್‍ಟಿ ವರ್ಗದ ಮೂರು, ಸಮಾಜ ಕಲ್ಯಾಣ ಇಲಾಖೆಯ 7 ಹಾಗೂ 21 ಬಿಸಿಎಂ ಹಾಸ್ಟೆಲ್‍ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇದಕ್ಕೆ ವಾರ್ಷಿಕ 4.25 ಕೋಟಿ ರೂ. ಬಾಡಿಗೆ ಪಾವತಿಸಲಾಗುತ್ತಿದೆ. ಆದರೆ ಈ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ವಾಸಿಸಲು ಪೂರಕವಾದ ವಾತಾವರಣವಿಲ್ಲ. ಉತ್ತಮ ಗಾಳಿ ಬೆಳಕಿಲ್ಲ, ಶೌಚಾಲಯ ಸಮಸ್ಯೆ ಹಾಗೂ ಅಶುಚಿತ್ವ ತಾಂಡವವಾಡುತ್ತಿದೆ. ಇಷ್ಟೆಲ್ಲಾ ಅವ್ಯವಸ್ಥೆ ನಡುವೆ ಭಾರೀ ಮೊತ್ತದ ಬಾಡಿಗೆ ನೀಡುವ ಮೂಲಕ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ಅದೇ ಹಣವನ್ನು ವರ್ಷಕ್ಕೊಂದು ಹಾಸ್ಟೆಲ್ ಕಟ್ಟಡ ಕಟ್ಟಲು ಬಳಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಒಂದು ಕೊಠಡಿಯಲ್ಲಿ ಹತ್ತಾರು ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿದೆ. ಸರಿಯಾಗಿ ಕಿಟಕಿ, ಬಾಗಿಲು ಇಲ್ಲ. ಗಾಳಿ, ಬೆಳಕು ಬರುವುದಿಲ್ಲ, ಮಲಗುವುದಕ್ಕೆ ಹಾಸಿಗೆ ಇಲ್ಲ. 24 ಮಕ್ಕಳಿಗೆ ಒಂದೇ ಶೌಚಾಲಯ, ಸ್ನಾನದ ಮನೆ. ಕೆಲವು ಕಟ್ಟಡದಲ್ಲಿ ಯುಜಿಡಿ ಪೈಪ್‍ಲೈನ್ ಮೇಲೆ ದವಸ ಧಾನ್ಯಗಳ ಉಗ್ರಾಣ ಮಾಡಿಕೊಳ್ಳಲಾಗಿದೆ. ಅಶುಚಿತ್ವ ತಾಂಡವವಾಡುತ್ತಿದೆ. ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಹದಗೆಟ್ಟರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಇದಕ್ಕೆ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಎಸ್.ಎಸ್. ಸುಜೀಂದ್ರ ಪ್ರಸಾದ್ ಪ್ರತಿಕ್ರಿಯಿಸಿ, ನಾನು ಬರುವ ಮುನ್ನವೇ ವಿದ್ಯಾರ್ಥಿನಿಲಯ ಗಳು ಬಾಡಿಗೆ ಕಟ್ಟಡಲ್ಲಿ ಕಾರ್ಯಾಚರಿಸುತ್ತಿವೆ. ಅದನ್ನೇ ಮುಂದುವರಿಸಲಾಗು ತ್ತಿದೆ. ಇಂತಹ ಹಾಸ್ಟೆಲ್ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದÀರು. ಇದಕ್ಕೆ ಸದಸ್ಯರು ಹಾಗೂ ತಾಪಂ ಉಪಾಧÀ್ಯಕ್ಷ ಎನ್.ಬಿ.ಮಂಜು ಆಕ್ಷೇಪ ವ್ಯಕ್ತಪಡಿಸಿ, ಸಭೆಗೆ ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದರು. ಈ ವೇಳೆ ಇಒ ಕೃಷ್ಣಕುಮಾರ್ ಮಧ್ಯಪ್ರವೇಶಿಸಿ, ನನ್ನ ಅಧಿಕಾರದ ವ್ಯಾಪ್ತಿಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು. ಹಾಸ್ಟೆಲ್ ಕಟ್ಟಡಗಳಿಗೆ ನಾವು ಬಾಡಿಗೆ ಪಾವತಿಸುತ್ತಿಲ್ಲ. ಆದರೂ ನಮ್ಮ ವ್ಯಾಪ್ತಿಯಲ್ಲಿರುವ ಕಾರಣ ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಜಿಲ್ಲಾಧಿಕಾರಿ, ಜಿಪಂ ಸಿಇಒ, ಆಯಾಯ ಇಲಾಖಾಧಿಕಾರಿ ಹಾಗೂ ಆಯುಕ್ತರಿಗೆ ಈ ಸಂಬಂಧÀ ದೂರು ಸಲ್ಲಿಸಲಾಗುತ್ತದೆ ಎಂದು ಹೇಳಿದರು.

 

 

Translate »