ವ್ಯತಿರಿಕ್ತ ಹೇಳಿಕೆ ನೀಡದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರಿಗೆ ಸಿಎಂ ಮನವಿ
ಮೈಸೂರು

ವ್ಯತಿರಿಕ್ತ ಹೇಳಿಕೆ ನೀಡದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರಿಗೆ ಸಿಎಂ ಮನವಿ

May 19, 2019

ಬೆಂಗಳೂರು: ಕೇಂದ್ರದಲ್ಲಿ ಎನ್‍ಡಿಎ ಮೈತ್ರಿ ಹೊರತುಪಡಿಸಿ ಹೊಸ ಸರ್ಕಾರ ರಚನೆಯ ಸಕಾರಾತ್ಮಕ ಪ್ರಯತ್ನ ಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮುಖಂಡರು ವ್ಯತಿರಿಕ್ತ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಉಭಯ ಪಕ್ಷಗಳ ನಾಯಕರಲ್ಲಿ ಮನವಿ ಮಾಡಿದ್ದಾರೆ.

ಇಂತಹ ಹೇಳಿಕೆಗಳು ಮುಂದುವರೆದರೆ ಕೇಂದ್ರದಲ್ಲಿ ಬಿಜೆಪಿಯೇತರ ಹೊಸ ಸರ್ಕಾರ ರಚನೆ ಯತ್ನಗಳಿಗೆ ಹಿನ್ನಡೆ ಆಗಬಹುದು ಎಂದು ಕಿವಿಮಾತು ಹೇಳಿದ್ದಾರೆ. ಟ್ವೀಟ್ ಮೂಲಕ ವಿನಂತಿಸಿರುವ ಮುಖ್ಯ ಮಂತ್ರಿ ಅವರು, ಉಭಯ ಪಕ್ಷಗಳ ಮುಖಂಡರು ಕೇಂದ್ರದಲ್ಲಿ ಹೊಸ ಸರ್ಕಾರ ರಚನೆ ಪ್ರಯತ್ನದ ಆಶಯಗಳಿಗೆ ಸಕಾ ರಾತ್ಮಕವಾಗಿ ಸ್ಪಂದಿಸಬೇಕು.

ಯಾವುದೇ ವಿಭಿನ್ನ, ವಿವಾದಾತ್ಮಕ ಹೇಳಿಕೆ ನೀಡದಂತೆ ನನ್ನ ಕಳಕಳಿಯ ಮನವಿ ಎಂದು ಟ್ವೀಟ್‍ನಲ್ಲಿ ಕೋರಿದ್ದಾರೆ. ಇತ್ತೀಚೆಗೆ ಒಂದಲ್ಲಾ ಒಂದು ವಿಷಯಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಆ ಪಕ್ಷದ ಕೆಲವು ಮುಖಂಡರು, ಜೊತೆಗೆ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ನಡುವೆ ಒಬ್ಬರಿಗೊಬ್ಬರು ಟಾಂಗ್ ನೀಡುವ ಹೇಳಿಕೆ-ಪ್ರತಿಹೇಳಿಕೆಗಳನ್ನು ಕೆಳ ಹಂತದ ನಾಯಕರು ಬೆಂಬಲಿಸಿದ್ದರಿಂದ ಮೈತ್ರಿಯಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗುತ್ತಾ ಸಾಗಿತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಟ್ವೀಟ್ ಮೂಲಕ ಸ್ವತಃ ಮುಖ್ಯಮಂತ್ರಿ ಅವರೇ, ಗೊಂದಲಮಯ ಹೇಳಿಕೆಗಳಿಗೆ ತೆರೆ ಎಳೆಯುವಂತೆ ನಾಯಕರಲ್ಲಿ ಮನವಿ ಮಾಡಿದ್ದಾರೆ. ಟ್ವೀಟ್ ಮಾಡಿರುವುದಲ್ಲದೆ, ಸುದ್ದಿಗಾರರೊಂದಿಗೂ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಈ ಬೆಳವಣಿಗೆಗಳು ನಡೆಯಲಿವೆ ಎಂದಿರುವ ಅವರು, ಪೂರ್ಣ ವಿವರ ನೀಡಲು ಆಸಕ್ತಿ ತೋರಲಿಲ್ಲ. ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಈಗಾಗಲೇ ಜೆಡಿಎಸ್ ನೀಡಿರುವ ಭರವಸೆಗೆ ನಾವು ಬದ್ಧರಾಗಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 18 ರಿಂದ 19 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ, ಮೇ 23ರಂದು ಪ್ರಕಟವಾಗುವ ಲೋಕಸಭಾ ಚುನಾವಣಾ ಫಲಿತಾಂಶದಿಂದ ಎಲ್ಲವೂ ಸ್ಪಷ್ಟವಾಗಲಿದೆ. ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂದರ್ಭದಲ್ಲೇ ಹೇಳಲಾಗಿತ್ತು, ಅದರಂತೆ ನಡೆದುಕೊಳ್ಳಲಾಗುವುದು ಎಂದಿದ್ದಾರೆ. ಚುನಾವಣಾ ಫಲಿತಾಂಶ ಏನೇ ಬಂದರೂ ನಾವು ಮುಂದೆಯೂ ಕಾಂಗ್ರೆಸ್ ಜೊತೆಗೆ ಇರುವುದಾಗಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

Translate »