ಸುಕ್ವಿಂದರ್ ದೇಹ ಹಸ್ತಾಂತರ
ಮೈಸೂರು

ಸುಕ್ವಿಂದರ್ ದೇಹ ಹಸ್ತಾಂತರ

May 19, 2019

ಮೈಸೂರು: ಮೈಸೂರಿನ ಹೆಬ್ಬಾಳು ಬಳಿ ರಿಂಗ್ ರಸ್ತೆಯಲ್ಲಿ ನಡೆದ ಪೊಲೀಸ್ ಶೂಟೌಟ್‍ನಲ್ಲಿ ಬಲಿಯಾಗಿದ್ದ ಸುಕ್ವಿಂದರ್ ದೇಹವನ್ನು ಪೊಲೀಸ್ ಭಾರೀ ಬಿಗಿ ಭದ್ರತೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಇಂದು ಮಧ್ಯಾಹ್ನ ವಾರಸು ದಾರರಿಗೆ ಒಪ್ಪಿಸಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿರುವ ಶವಾಗಾರದಲ್ಲಿ ಮೈಸೂರಿನ 5ನೇ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಧೀಶ (ಕಿರಿಯ ಶ್ರೇಣಿ) ಭೀಮಪ್ಪ ಎಸ್.ಪೌಲ್ ಹಾಗೂ ಮೈಸೂರು ತಾಲೂಕು ಅಡಿಷನಲ್ ತಹಸೀಲ್ದಾರ್ ಚಂದ್ರಕಾಂತ ಸಮ್ಮುಖದಲ್ಲಿ ದೇಹದ ಪಂಚನಾಮೆ (ಇನ್‍ಕ್ವೆಸ್ಟ್) ನಡೆದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ವಾರಸುದಾರರಿಂದ ಮೃತದೇಹದ ಗುರುತು: ಶುಕ್ರವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಸುಕ್ವಿಂದರ್ ರಕ್ತ ಸಂಬಂಧಿ ಎನ್ನಲಾದ ಪಂಜಾಬ್‍ನ ಮುಕ್ಸಾರ್ ಸಾಹಿಬ್ ತಾಲೂಕಿನ ಬುರಾ ಗುಜ್ಜರ್ ಗ್ರಾಮದ ಗುರುದ್ವಾರ್ ಸಾಹಿಬ್ ಬಳಿಯ ನಿವಾಸಿ ಗುರುದೇವ್ ಸಿಂಗ್ ಅವರ ಮಗನಾದ 53 ವರ್ಷದ ಗುರುಮೀತ್‍ಸಿಂಗ್ ತಮ್ಮ ಸ್ನೇಹಿತರೆನ್ನಲಾದ ಪಂಜಾಬ್‍ನ ಫಜಿಲ್ಕಾ ಜಿಲ್ಲೆ, ಗೋಬಿಂದ್‍ಗರ್ ನಿವಾಸಿ ಗುರ್‍ಜಂತ್ ಸಿಂಗ್ ಅವರ ಮಗ ಹರ್‍ಜಿಂದರ್ ಸಿಂಗ್ (48) ಹಾಗೂ ಪಂಜಾಬ್‍ನ ಮುಕ್ಸಾರ್ ತಾಲೂಕು ಲುಬಾನಿಯನ್ ನಿವಾಸಿ ಹರ್ಕೇಕ್ ಸಿಂಗ್ ಅವರ ಮಗ ಅರ್ವಿಂದರ್‍ಪಾಲ್ ಸಿಂಗ್ (53)ರೊಂದಿಗೆ ಎಲ್ಲೋ ಬೋರ್ಡ್ ಟಯೋಟಾ ಈಟಿ ಯಸ್ ಕಾರಿನಲ್ಲಿ ಬೆಳಿಗ್ಗೆ 10.15 ಗಂಟೆ ವೇಳೆಗೆ ಶವಾ ಗಾರದ ಬಳಿ ಆಗಮಿಸಿದರು. ನಂತರ ಬೆಳಿಗ್ಗೆ 10.25 ಗಂಟೆ ವೇಳೆಗೆ ನ್ಯಾಯಾಧೀಶ ಭೀಮಪ್ಪ ಎಸ್. ಪೌಲ್ ಹಾಗೂ ಅಡಿಷನಲ್ ತಹಸೀಲ್ದಾರ್ ಚಂದ್ರಕಾಂತ್ ಸಮ್ಮುಖದಲ್ಲಿ ವಾರಸುದಾರರು ದೇಹವನ್ನು ವೀಕ್ಷಿಸಿ, ಸುಕ್ವಿಂದರ್ ಎಂಬುದನ್ನು ದೃಢಪಡಿಸಿದರು.

ಪಂಚನಾಮೆ: ನ್ಯಾಯಾಧೀಶರು ಹಾಗೂ ಅಡಿಷನಲ್ ತಹಸೀಲ್ದಾರ್ ಅವರು ರಕ್ತ ಸಂಬಂಧಿ ಎನ್ನಲಾದ ಗುರ್‍ಮೀತ್ ಸಿಂಗ್ ಅವರ ಆಧಾರ್ ಕಾರ್ಡ್ ಮತ್ತು ಇತರ ಗುರುತಿನ ಕಾರ್ಡ್‍ಗಳ ದಾಖಲೆ ಪಡೆದು, ನಂತರ ಸ್ಥಳದಲ್ಲೇ ಇನ್‍ಕ್ವೆಸ್ಟ್ ಪ್ರಕ್ರಿಯೆ ನಡೆಸಿದರು.

ಬಾಡಿ ಸ್ಕ್ಯಾನಿಂಗ್: ಶೂಟೌಟ್ ಪ್ರಕರಣವಾದ ಕಾರಣ, ಸುಕ್ವಿಂದರ್ ಮೃತದೇಹವನ್ನು ಆಂಬುಲೆನ್ಸ್‍ನಲ್ಲಿ ಕೆ.ಆರ್. ಆಸ್ಪತ್ರೆಗೆ ಕೊಂಡೊಯ್ದು ರೇಡಿಯಾಲಜಿ ವಿಭಾಗದಲ್ಲಿ ಸ್ಕ್ಯಾನಿಂಗ್ ಮಾಡಿದ ನಂತರ ಮತ್ತೆ ಶವಾಗಾರಕ್ಕೆ ತರಲಾಯಿತು.

ರಕ್ತ ಸಂಬಂಧಿ ಹೇಳಿಕೆ ದಾಖಲು: ನ್ಯಾಯಾಧೀಶರು ಮತ್ತು ಅಡಿಷನಲ್ ತಹಸೀಲ್ದಾರ್ ಸಮ್ಮುಖದಲ್ಲಿ ಸುಕ್ವಿಂದರ್ ರಕ್ತ ಸಂಬಂಧಿ ಗುರುಮೀತ್ ಸಿಂಗ್ ಅವರ ಹೇಳಿಕೆಗಳನ್ನು ದಾಖಲು ಮಾಡಲಾಯಿತು. ನಂತರ ಸಾಕ್ಷಿದಾರರೆಂದು ಪರಿಗಣಿಸಿರುವ ಹರ್‍ಜಿಂದರ್ ಸಿಂಗ್ ಹಾಗೂ ಅರ್ವಿಂದರ್ ಪಾಲ್ ಹೇಳಿಕೆಗಳನ್ನೂ ದಾಖಲಿಸಲಾಯಿತಲ್ಲದೇ, ಸುಮಾರು ಎರಡು ತಾಸು ನಡೆದ ಹೇಳಿಕೆಯನ್ನು ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಲಾಗಿದೆ.

ಮರಣೋತ್ತರ ಪರೀಕ್ಷೆ: ಇನ್‍ಕ್ವೆಸ್ಟ್ ಮಾಡಿ ನ್ಯಾಯಾಧೀಶರು ಹಾಗೂ ಅಡಿಷನಲ್ ತಹಸೀಲ್ದಾರ್‍ರು ಮೆಮೋ ನೀಡಿದ ನಂತರ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಫೊರೇನ್ಸಿಕ್ ವಿಭಾಗದ ಪ್ರಾಧ್ಯಾಪಕ ಡಾ. ಆನಂದ್ ರಾಯಮನಿ ಹಾಗೂ ಜೆಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯದ ಡಾ. ಚಂದ್ರಕಾಂತ್ ಸುಮಾರು ಒಂದು ಗಂಟೆ ಕಾಲ ಸುಕ್ವಿಂದರ್ ದೇಹದ ಮರಣೋತ್ತರ ಪರೀಕ್ಷೆ ನಡೆಸಿದರು.

ದೇಹ ಹಸ್ತಾಂತರ: ರಕ್ತ ಸಂಬಂಧಿಯಿಂದ ಅರ್ಜಿ ಸ್ವೀಕರಿಸಿದ ಮಂಡಿ ಠಾಣೆ ಪೊಲೀಸರು, ಮರಣೋತ್ತರ ಪರೀಕ್ಷೆ ಮುಕ್ತಾಯದ ನಂತರ ಸುಕ್ವಿಂದರ್ ದೇಹವನ್ನು ಮಧ್ಯಾಹ್ನ 3.30 ಗಂಟೆ ವೇಳೆಗೆ ಹಸ್ತಾಂತರಿಸಿದರು. ಆಂಬುಲೆನ್ಸ್‍ನಲ್ಲಿ ಬೆಂಗಳೂರಿಗೆ ಕೊಂಡೊಯ್ದು ಅಲ್ಲಿಂದ ವಿಮಾನದಲ್ಲಿ ದೇಹವನ್ನು ಪಂಜಾಬ್‍ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಗುರುಮೀತ್ ಸಿಂಗ್ ಅವರು ಲಿಖಿತ ಹೇಳಿಕೆ ನೀಡಿದ್ದರಿಂದ ಬೆಂಗಳೂರುವರೆಗೆ ಪೊಲೀಸ್ ಬೆಂಗಾವಲು ವಾಹನವನ್ನು ಕಳುಹಿಸಿಕೊಡಲಾಯಿತು.

ಭಾರೀ ಭದ್ರತೆ: ಸುಕ್ವಿಂದರ್ ಮೃತದೇಹದ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ವೇಳೆ ಶವಾಗಾರದ ಬಳಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೈಸೂರು ಮೆಡಿಕಲ್ ಕಾಲೇಜು ಪ್ರವೇಶ ದ್ವಾರದಿಂದ ಶವಾಗಾರದವರೆಗೆ 3 ಸುತ್ತಿನ ಬ್ಯಾರಿಕೇಡ್ ಅಳವಡಿಸಿ ಯಾರೂ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ಮಾಧ್ಯಮವೂ ದೂರ: ಮರಣೋತ್ತರ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆ ಮುಗಿದು ದೇಹವನ್ನು ಹಸ್ತಾಂತರಿಸುವವರೆಗೆ ಮಾಧ್ಯಮ ಪ್ರತಿನಿಧಿಗಳನ್ನು ಪೊಲೀಸರು ದೂರ ಇರಿಸಿದ್ದರಿಂದ ಯಾವುದೇ ಸಣ್ಣ ಮಾಹಿತಿ ಸೋರಿಕೆಯಾಗದಂತೆ ಎಚ್ಚರ ವಹಿಸಿದರು.

ಶೂಟೌಟ್ ಬಗ್ಗೆ ಸಿಎಂಗೆ ಮಾಹಿತಿ
ಮೈಸೂರು: ಗುರುವಾರ ಮೈಸೂರಿನಲ್ಲಿ ನಡೆದ ಶೂಟೌಟ್ ಪ್ರಕರಣ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಇಂದು ಮಧ್ಯಾಹ್ನ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಗೌರವ ವಂದನೆ ಸಲ್ಲಿಸಿದ ನಂತರ ಹೂಟಗಳ್ಳಿ ಬಳಿ ಸೈಲೆಂಟ್ ಶೋರ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ ಅವರನ್ನು ಸಂಜೆ ಭೇಟಿ ಮಾಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಶೂಟೌಟ್ ಪ್ರಕರಣವನ್ನು ವಿವರಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಬಂಧ 20 ನಿಮಿಷ ಕಾಲ ವಿವರಿಸಿದ ಅವರು, ತದನಂತರ ತಾವು ಕೈಗೊಂಡಿರುವ ಕ್ರಮ, ಮರ ಣೋತ್ತರ ಪರೀಕ್ಷಾ ಪ್ರಕ್ರಿಯೆ ನಡೆಸಿ ದೇಹವನ್ನು ಸಂಬಂಧಿಗಳಿಗೆ ಒಪ್ಪಿಸಿ ರುವ ವಿಚಾರವಲ್ಲದೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವು ದನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದರು ಎಂದು ಹೇಳಲಾಗಿದೆ.

ಬಿ.ಜಿ.ಕುಮಾರ್ ವರ್ಗಾವಣೆ
ಮೈಸೂರು: ಶೂಟೌಟ್ ನಡೆಸಿದ್ದ ಮೈಸೂರಿನ ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಬೆಂಗಳೂರು ಕೇಂದ್ರ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಮಾಡ ಲಾಗಿದೆ. ಜಯಲಕ್ಷ್ಮೀಪುರಂ ಠಾಣೆ ಇನ್‍ಸ್ಪೆಕ್ಟರ್ ಸುರೇಶ್ ಕುಮಾರ್ ಅವರಿಗೆ ಹೆಚ್ಚುವರಿಯಾಗಿ ವಿಜಯನಗರ ಠಾಣೆ ಜವಾಬ್ದಾರಿ ವಹಿಸಲಾಗಿದ್ದು, ಶನಿವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಗುರುವಾರ ಹಿನಕಲ್ ಬಳಿ ರಿಂಗ್‍ರೋಡ್‍ನಲ್ಲಿ ಶೂಟೌಟ್ ನಡೆದು ಒಂದು ಗಂಟೆಯ ನಂತರ ಮಾಹಿತಿ ನೀಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಜಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇನ್ಸ್‍ಪೆಕ್ಟರ್ ಕೆ.ಆರ್.ಆಸ್ಪತ್ರೆಗೆ ದಾಖಲು
ಮೈಸೂರು: ಅಮಾನ್ಯೀಕರಣ ಗೊಂಡ ಹಳೇ ನೋಟುಗಳ ಅಕ್ರಮ ವಿನಿಮಯ ದಂಧೆ ಮೇಲೆ ದಾಳಿ ನಡೆಸಿದಾಗ ಶೂಟೌಟ್ ನಲ್ಲಿ ವ್ಯಕ್ತಿ ಬಲಿಯಾದ ಸಂದರ್ಭದಲ್ಲಿ ನಡೆದ ಕಾಳಗದಲ್ಲಿ ದೈಹಿಕ ಹಾಗೂ ಮಾನಸಿಕ ಆಘಾತಕ್ಕೊಳಗಾದ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್, ಎಎಸ್‍ಐ ವೆಂಕಟೇಶ್ ಗೌಡ ಹಾಗೂ ಕಾನ್‍ಸ್ಟೇಬಲ್ ವೀರಭದ್ರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೂಟೌಟ್ ನಡೆದ ದಿನವೇ (ಗುರುವಾರ ಬೆಳಿಗ್ಗೆ 11 ಗಂಟೆ ವೇಳೆಗೆ) ಒಳರೋಗಿ ಗಳಾಗಿ ದಾಖಲಾಗಿದ್ದಾರೆ.

ನೋಟು ಎಕ್ಸ್‍ಚೇಂಜ್‍ಗೆ ಒಪ್ಪಂದ!
ಮೈಸೂರು: ಭಾರೀ ಪ್ರಮಾಣದ ನಿಷೇ ಧಿತ ಹಳೇ ನೋಟುಗಳ ಎಕ್ಸ್‍ಚೇಂಜ್‍ಗೆ ಮೈಸೂರಿನಲ್ಲಿ ಒಪ್ಪಂದ (ಅಗ್ರಿಮೆಂಟ್) ನಡೆದಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಕ್ರಮವಾಗಿ ಮನಿ ಎಕ್ಸ್‍ಚೇಂಜ್ ದಂಧೆ ನಡೆಯುತ್ತಿದೆ ಎಂಬ ಬಾತ್ಮೀದಾರನ ಮಾಹಿತಿ ಹಿನ್ನೆಲೆಯಲ್ಲಿ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ನಡೆಸಿದ ದಾಳಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿ, ಹಲ್ಲೆಗೆ ಮುಂದಾದ ರೆಂಬ ಕಾರಣಕ್ಕೆ ನಡೆಸಿದ ಶೂಟೌಟ್‍ನಲ್ಲಿ ಸುಕ್ವಿಂದರ್ ಎಂಬಾತ ಬಲಿಯಾಗಿ ಮತ್ತಿಬ್ಬರು ಪರಾರಿಯಾದರು ಎಂದು ಹೇಳಲಾಗಿದೆ. ಪೊಲೀಸ್ ಇನ್ಸ್‍ಪೆಕ್ಟರ್‍ಗೆ ಮಾಹಿತಿ ನೀಡಿದ ಬಾತ್ಮೀದಾರ ವಿಜಯಕುಮಾರ್ ಎಂಬ ವ್ಯಕ್ತಿ ಬಳಿ ಅಕ್ರಮ ಹಣ ವಿನಿಮಯ ಪ್ರಕ್ರಿಯೆಗೆ ಮಾಡಿಕೊಂಡಿದ್ದ ಅಗ್ರಿಮೆಂಟ್ ಪ್ರತಿ ಸಿಕ್ಕಿದೆಯಂತೆ. ಒಪ್ಪಂದದಲ್ಲಿ ಸ್ಥಳ, ದಿನಾಂಕ, ಸಮಯ ಉಲ್ಲೇಖ ಮಾಡಲಾಗಿದ್ದು, ದಂಧೆ ಯೋಜನೆ ವಿಫಲವಾದರೆ 50 ಲಕ್ಷ ರೂ. ಹಣ ಕೊಡಬೇಕು ಎಂದು ದಂಧೆಕೋರರು ಮತ್ತು ರದ್ದಾದ ನೋಟುಗಳ ಸರಬರಾಜು ಮಾಡುವ ವ್ಯಕ್ತಿ ನಡುವೆ ಒಪ್ಪಂದವಾಗಿತ್ತು ಎಂದು ತಿಳಿದು ಬಂದಿದೆ. ‘Work of C to C transaction’ ತಲೆಬರಹದಡಿ ಅಗ್ರಿಮೆಂಟ್ ಮಾಡಲಾಗಿದ್ದು, ಅದರಲ್ಲಿ ‘500 ಕೋಟಿ ರೂ.’ ಎಂದು ಪ್ರಸ್ತಾಪಿಸಲಾಗಿದೆ. ಈ ವ್ಯವಹಾರ ಮೇ 16 ರಂದು ಬೆಳಿಗ್ಗೆ 9ರಿಂದ 10 ಗಂಟೆ ಒಳಗೆ ಮುಗಿಬೇಕು, ಯಾವುದೇ ಕಾರಣಕ್ಕೂ ಸಮಯ ಮುಂದೂಡುವಂತಿಲ್ಲ ಎಂದು ಅಗ್ರಿಮೆಂಟ್‍ನಲ್ಲಿ ಷರತ್ತು ನಮೂದಾಗಿದೆ ಎಂದು ತಿಳಿದು ಬಂದಿದೆ. ವ್ಯವಹಾರ ನಡೆಯುವ ಒಂದು ದಿನ ಮುಂಚಿತವಾಗಿ ಭೇಟಿಯಾಗಬೇಕು. ಭೇಟಿ ಸ್ಥಳಕ್ಕೂ ವ್ಯವಹಾರ ನಡೆಯುವ ಸ್ಥಳಕ್ಕೂ ಒಂದೂವರೆ ಕಿಲೋಮೀಟರ್ ಅಂತರವಿರಬೇಕು. ಜೊತೆಗೆ ಮೂವರು ಸಾಕ್ಷಿದಾರರಾಗಿ ಸಹಿ ಹಾಕಬೇಕೆಂಬ ಷರತ್ತುಗಳು ಒಪ್ಪಂದದಲ್ಲಿವೆ ಎಂದು ತಿಳಿದು ಬಂದಿದೆ. ಗುರುವಾರ ನಡೆದ ದಾಳಿ ವೇಳೆ ದಂಧೆಕೋರರು ಬಂದಿದ್ದರೆನ್ನಲಾದ ಟೊಯೋಟಾ ಈಟಿಯಸ್ ಕಾರು ಸದ್ಯ ವಿಜಯನಗರ ಪೊಲೀಸ್ ಠಾಣೆ ಆವರಣದಲ್ಲಿದೆ. ಜೊತೆಗೆ ಸುಕ್ವಿಂದರ್ ಬಳಸಿದ ಎನ್ನಲಾದ ಪಿಸ್ತೂಲ್ ಅನ್ನೂ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್ ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಣಕಾಸು ಕಂಪನಿಯೊಂದರ ಬೌನ್ಸರ್!
ಮೈಸೂರು: ಪೊಲೀಸರ ಶೂಟೌಟ್‍ಗೆ ಬಲಿಯಾದ ಸುಕ್ವಿಂದರ್ ಪಂಜಾಬಿನ ಫರೀದಾಕೋಟ್ ಜಿಲ್ಲೆಯ ದೊಡ್ಡ ಹಣಕಾಸು ಕಂಪನಿಯೊಂದರ ಬೌನ್ಸರ್ ಎಂದು ಹೇಳಲಾಗಿದೆ. ದೇಹ ಕೊಂಡೊಯ್ಯಲು ಬಂದಿದ್ದ ಆತನ ಸಂಬಂಧಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಆತನ ವಿರುದ್ಧ ಫರೀದಾ ಕೋಟ್‍ನಲ್ಲಾಗಲೀ, ಇನ್ನಿತರ ಕಡೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ ಎಂಬುದನ್ನೂ ರಕ್ತ ಸಂಬಂಧಿ ಹೇಳಿದ್ದಾರೆಂದು ತಿಳಿದು ಬಂದಿದೆ.

ಶೂಟೌಟ್ ನಡೆದ ದಿನದಿಂದ ಮರಣೋತ್ತರ ಪರೀಕ್ಷೆ ನಡೆಸಿ ದೇಹ ಹಸ್ತಾಂತರಿಸುವವರೆಗೆ ಪೊಲೀಸ್ ಅಧಿಕಾರಿಗಳ್ಯಾರೂ ಮಾಧ್ಯಮಕ್ಕೆ ಮಾಹಿತಿ ನೀಡದೆ ಇಡೀ ಪ್ರಕರಣವನ್ನು ಗುಪ್ತವಾಗಿಟ್ಟಿದ್ದಾರೆ.

Translate »