ದಸಂಸ ಬೇಡಿಕೆಗೆ ಸಿಎಂ ಸ್ಪಂದನೆ: ದಾಖಲೆ ಪರಿಶೀಲಿಸಿ ನಿವೇಶನ ಹಂಚುವ ಭರವಸೆ
ಕೊಡಗು

ದಸಂಸ ಬೇಡಿಕೆಗೆ ಸಿಎಂ ಸ್ಪಂದನೆ: ದಾಖಲೆ ಪರಿಶೀಲಿಸಿ ನಿವೇಶನ ಹಂಚುವ ಭರವಸೆ

December 13, 2018

ವೀರಾಜಪೇಟೆ: ದಲಿತ ಸಂಘರ್ಷ ಸಮಿತಿಯ ಬೇಡಿಕೆಯಂತೆ ದಲಿತರು, ಕಾರ್ಮಿಕರು, ಬಡ ವರ್ಗದವರು ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಅಧಿಕಾರಿಗಳು ಗುರುತಿಸಿರುವ ಸರಕಾರಿ ಜಾಗದಲ್ಲಿ ನಿವೇಶನಗಳ ದಾಖಲೆಗಳನ್ನು ಪರಿಶೀಲಿಸಿ ಹದಿ ನೈದು ದಿನಗಳ ಅವಧಿಯಲ್ಲಿ ಹಕ್ಕು ಪತ್ರವನ್ನು ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ದಸಂಸ ಮುಖಂಡರುಗಳಿಗೆ ಭರವಸೆ ನೀಡಿರುವುದಾಗಿ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಆರ್.ಪರಶುರಾಮ್ ತಿಳಿಸಿದರು.

ವಿರಾಜಪೇಟೆ ಮಿನಿ ವಿಧಾನಸೌಧ ಎದುರು ಕೆಲವು ದಿನಗಳ ಹಿಂದೆ ಮನೆ ನಿವೇಶನ ಹಾಗೂ ವಿವಿದ ಬೇಡಿಕೆಗಳನ್ನು ಮುಂದಿಟ್ಟು ದಲಿತ ಸಂಘರ್ಷ ಸಮಿತಿಯ ಸದಸ್ಯರುಗಳು ಅಹೋ ರಾತ್ರಿ ಮುಷ್ಕರ ನಡೆಸಿದ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಭೇಟಿ ನೀಡಿ ಮುಷ್ಕರ ನಿರತರ ಮನ ಒಲಿಸಿದ್ದರು. ಈ ಹಿನ್ನಲೆಯಲ್ಲಿ ದಲಿತ ಸಮಿತಿ ಮುಖಂಡರು ವೀಣಾ ಅಚ್ಚಯ್ಯ ಅವರ ನೇತೃತ್ವದಲ್ಲಿ ಇತ್ತೀಚೆಗೆ ಮಡಿಕೇರಿಗೆ ಬಂದಿದ್ದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದಾಗ ಬೇಡಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ಕುಮಾರಸ್ವಾಮಿ ಅವರು ಸಮಿತಿಯ ಬೇಡಿಕೆಯಂತೆ ನಿವೇಶನಕ್ಕೆ ಆದ್ಯತೆ ನೀಡಲಾಗುವುದು. ಆದರೆ ಹಕ್ಕು ಪತ್ರ ವಿತರಣೆಯ ನಂತರ ಶೆಡ್ ಕಟ್ಟಿಕೊಳ್ಳಲು ಅನುಮತಿ ನೀಡಲಾಗುವುದು. ಅನಂತರ ಸರಕಾರದ ವತಿಯಿಂದಲೇ ನಿಯಮ ಬದ್ಧವಾಗಿ ಮನೆ ಕಟ್ಟಿಕೊಡಲಾಗುವುದು. ಅದಕ್ಕೆ ಕಾಲಾವಕಾಶ ಬೇಕಾಗಿರುವುದಾಗಿ ಮುಖ್ಯಮಂತ್ರಿ ತಿಳಿಸಿರುವುದಾಗಿ ಪರಶುರಾಮ್ ಹೇಳಿದರು.

ಮಡಿಕೇರಿಯ ಗರಗಂದೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಸಂದರ್ಭ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ವಸತಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಉಪ ವಿಭಾಗಾಧಿಕಾರಿ ಜವರೆಗೌಡ, ಐಟಿಡಿಪಿ ಅಧಿಕಾರಿ ಶಿವಕುಮಾರ್, ವಿರಾಜಪೇಟೆ ತಾಲೂಕು ತಹಸಿಲ್ದಾರ್, ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಇತರ ಅಧಿಕಾರಿಗಳು ಮತ್ತು ದಲಿತ ಸಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎಚ್.ಎಸ್.ಕೃಷ್ಣಪ್ಪ, ಜಿಲ್ಲಾ ಸಮಿತಿಯ ಎಚ್.ಎನ್.ಕುಮಾರ್ ಮಹದೇವ್, ಗಣೇಶ್, ಜೆ.ಪಿ.ಸುಬ್ರಮಣಿ, ಮುಂತಾದವರು ಹಾಜರಿದ್ದರು.

Translate »