ರಜೆ ಘೋಷಣೆ ನಡುವೆಯೂ ನಡೆದ ಕಾಲೇಜು: ಪ್ರತಿಭಟನೆ
ಮಂಡ್ಯ

ರಜೆ ಘೋಷಣೆ ನಡುವೆಯೂ ನಡೆದ ಕಾಲೇಜು: ಪ್ರತಿಭಟನೆ

January 23, 2019

ಕೆ.ಆರ್.ಪೇಟೆ: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಿದ್ದರೂ, ಪಟ್ಟಣದ ಕ್ರೈಸ್ತ ದಿ ಕಿಂಗ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಿಸದೇ ಆಂತರಿಕ ಪರೀಕ್ಷೆ ನಡೆಸುವ ಮೂಲಕ ಶ್ರೀಗಳಿಗೆ ಅಗೌರವ ತೋರಿದ ಕ್ರಮ ಖಂಡಿಸಿ ಭಕ್ತಾದಿಗಳು ಕಾಲೇಜಿನ ಎದುರು ಧರಣಿ ನಡೆಸಿದರು.

ಪ್ರಥಮ ಪಿಯುಸಿ ಮಕ್ಕಳಿಗೆ ಆಂತರಿಕ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಪೂರ್ವ ಸಿದ್ದತಾ ಪರೀಕ್ಷೆ ಮಾಡುತ್ತಾ ಸರ್ಕಾರಿ ಆದೇಶ ಗಾಳಿಗೆ ತೂರಿರುವ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾನಿರತರು, ನಾಡಿನಾದ್ಯಂತ ಶೋಕಾಚರಣೆ ನಡೆಯುತ್ತಿದ್ದರೂ ಮಕ್ಕಳನ್ನು ಬಲವಂತವಾಗಿ ಬರಮಾಡಿಕೊಂಡು ಪರೀಕ್ಷೆ ನಡೆಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿ ಸಿದರು. ಸಿದ್ಧಗಂಗಾಶ್ರೀಗಳ ಗೌರವಾರ್ಥ ರಜೆ ನೀಡುವಂತೆ ಸರ್ಕಾರ ಆದೇಶ ನೀಡಿದ್ದರೂ ಏಕೆ ಪರೀಕ್ಷೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ಪ್ರಾಂಶು ಪಾಲರು ಮತ್ತು ವ್ಯವಸ್ಥಾಪಕರು ಯಾರು ಸತ್ತರೆ ನಮಗೇನು ನಮ್ಮ ಶಾಲೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುವ ಹಿತದೃಷ್ಠಿಯಿಂದ ತರಗತಿ ನಡೆಸುತ್ತಿದ್ದೇವೆ ಕೇಳಲು ನೀವ್ಯಾರು ಎಂದು ಪ್ರತಿಭಟನಾಕಾರ ರನ್ನು ತಡೆಯಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದನ್ನು ಅರಿತ ಆಡಳಿತ ಮಂಡಳಿ ಕಡೆಗೆ ತಮ್ಮ ತಪ್ಪನ್ನು ಒಪ್ಪಿಕೊಂಡು ಪರೀಕ್ಷೆ ರದ್ದುಪಡಿಸಿ ರಜೆ ಘೋಷಿಸಿತು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು. ಪ್ರತಿಭಟನೆಯಲ್ಲಿ ತಾಲೂಕು ವೀರಶೈವ- ಲಿಂಗಾಯಿತ ಮಹಾಸಭಾ ಮುಖಂಡ ಕೆ.ಎಸ್.ಸತೀಶ್, ಸಿದ್ಧಗಂಗಾ ಶ್ರೀಮಠದ ಭಕ್ತರಾದ ಯೋಗೇಶ್, ನಾಗರಾಜು, ಸಿದ್ದಲಿಂಗ ಸ್ವಾಮಿ, ಮನು, ಮುರುಗೇಶ್, ಹೆಚ್.ಬಿ. ಮಂಜುನಾಥ್, ಕೆ.ಪಿ.ಮಂಜು ನಾಥ್, ವಿಶ್ವನಾಥ್ ಮತ್ತಿತರರಿದ್ದರು.

Translate »