ಮೈಸೂರು: ಕೆಆರ್‍ಎಸ್ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ವಾಲ್ವ್ ತುಂಡರಿಸಿ ಅಪಾರ ಪ್ರಮಾಣದ ನೀರು ಪೋಲಾಗಲು ಕಾರಣರಾದ ಖಾಸಗಿ ಕಂಪನಿಗೆ 1.5 ಲಕ್ಷ ರೂ. ದಂಡ ಪಾವತಿಸುವಂತೆ ನಗರಪಾಲಿಕೆಯ ವಾಣಿ ವಿಲಾಸ ವಾಟರ್ ವಕ್ರ್ಸ್ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಪೈಪ್ ರಿಪೇರಿ ಖರ್ಚು, ಪೋಲಾಗಿರುವ ನೀರಿನ ದರ, ಸಾರ್ವಜನಿಕರಿಗೆ ಆದ ತೊಂದರೆ ಹೀಗೆ ಮೂರು ವರ್ಗ ಮಾಡಿ ಒಟ್ಟು 1,50,000 ರೂ. ದಂಡ ಪಾವತಿಸುವಂತೆ ಘಟನೆಗೆ ಕಾರಣವಾದ ಖಾಸಗಿ ಕಂಪನಿ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ದಂಡ ಪಾವತಿಸದಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ತಿಳಿಸಿದ್ದಾರೆ.
ಡಿಸೆಂಬರ್ 18ರಂದು ಗೋಕುಲ್ ಹೋಟೆಲ್ ಎದುರು ಕೆಆರ್‍ಎಸ್ ರಸ್ತೆಯಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ಮೇಲೆ ಹಿಟಾಚಿ ಹತ್ತಿಸಿ ಪೈಪಿನ ವಾಲ್ವ್ ಮೌತ್ ಮುರಿದು ಹಾಕಿದ್ದರಿಂದ ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗಿತ್ತು. ತಕ್ಷಣ ಮೋಟಾರ್ ಆಫ್ ಮಾಡಿ ನೀರು ನಿಂತ ಬಳಿಕ ವಾಣಿ ವಿಲಾಸ ವಾಟರ್ ವಕ್ರ್ಸ್ ಅಧಿಕಾರಿಗಳು ಪೈಪ್ ಅನ್ನು ರಿಪೇರಿ ಮಾಡಿದ ಬಳಿಕ ಮತ್ತೆ ನೀರು ಸರಬರಾಜು ಮಾಡಿದ್ದರು.