ಪಾಂಡವಪುರ: ವಿಷಸೇವಿಸಿ ಕಂಪ್ಯೂಟರ್ ಆಪರೇಟರ್‍ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ನಡೆದಿದೆ. ಪಟ್ಟಣದ ಸುಬ್ರಮಣ್ಯ ಬೀದಿ ನಿವಾಸಿ ಲೇ.ರವೀಂದ್ರನಾಥ್ ರಾವ್ ಅವರ ಪುತ್ರಿ ಬಿ.ಎಂ.ಚೈತ್ರ(35) ಆತ್ಮಹತ್ಯೆ ಮಾಡಿಕೊಂಡವರು.
ಘಟನೆ ಹಿನ್ನೆಲೆ: ಮೃತ ಬಿ.ಎಂ.ಚೈತ್ರ ಕಳೆದ 7 ವರ್ಷಗಳಿಂದ ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ಕಳೆದ 8 ವರ್ಷದಿಂದ ಪತಿಯಿಂದ ದೂರವಿದ್ದ ಚೈತ್ರ ತಾಯಿ, ತಮ್ಮನೊಂದಿಗೆ ವಾಸವಾಗಿದ್ದಳು. ಕಚೇರಿಯಲ್ಲಿ ಎಲ್ಲರ ವಿಶ್ವಾಸಗಳಿಸಿದ್ದ ಚೈತ್ರ ಬಳಿ ಕಚೇರಿ ಬೀಗ ಇತ್ತು ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಚೈತ್ರ ರಾತ್ರಿಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಕಚೇರಿಗೆ ಬಂದ ಸಿಬ್ಬಂದಿಗಳು ಕಚೇರಿಯ ಟೆರೆಸ್ ಮೇಲೆ ಹೋದ ವೇಳೆ ಚೈತ್ರ ಆತ್ಮಹತ್ಯೆ ಮಾಡಿಕೊಂ ಡಿರುವುದು ಬೆಳಕಿಗೆ ಬಂದಿದೆ. ಚೈತ್ರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಡೆತ್‍ನೋಟ್‍ನಲ್ಲಿ ಏನಿದೆ?: ಚೈತ್ರ ಸಾಯುವ ಮುನ್ನ `ನನ್ನ ತಮ್ಮ ಜಯಂತ್‍ಗೆ ನಾನು ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಬ್ಯಾಂಕ್‍ನಲ್ಲಿ ಲೋನ್ ಕೊಡಿಸಲು ಸಾಧ್ಯವಾಗ ಲಿಲ್ಲ. ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಡೆತ್‍ನೋಟ್ ಬರೆದಿದ್ದು, ಸದ್ಯ ಅದು ಪೊಲೀಸರ ವಶದಲ್ಲಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಾಂಡವಪುರ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.