ಮೈಸೂರು,ಜು.2(ವೈಡಿಎಸ್)- ಚಿತ್ರ ದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ(ಜೆಜೆ) ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಆದೇಶವನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಚಿತ್ರ ದುರ್ಗದ ಶ್ರೀ ಸ್ವಾಮಿ ವಿವೇಕಾನಂದ ಹಳೇ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿ ಗಳು, ಗ್ರಾಮಸ್ಥರು ಸಚಿವ ಜಿ.ಟಿ.ದೇವೇ ಗೌಡರ ನಿವಾಸದ ಎದುರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ತಮ್ಮ ಊರಿನ ಕಾಲೇಜು ಉಳಿಸುವಂತೆ ದೂರದ ಕೋಟೆ ನಾಡಿನಿಂದ ಸಾಂಸ್ಕøತಿಕ ನಗರಿಗೆ ಆಗಮಿಸಿದ 30ಕ್ಕೂ ಹೆಚ್ಚು ಮಂದಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಗಳು, ಗ್ರಾಮಸ್ಥರು ಉನ್ನತ ಶಿಕ್ಷಣ ಸಚಿವರ ನಿವಾಸದ ಎದುರು ಕಾಲೇಜನ್ನು ಉಳಿಸಿ ವಿದ್ಯಾರ್ಥಿಗಳನ್ನು ರಕ್ಷಿಸಿ ಎಂಬ ಘೋಷಣೆಗಳನ್ನು ಕೂಗಿದರು.
2006-07ರಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಜೂರು ಮಾಡಿದ್ದ ಜವನ ಗೊಂಡನಹಳ್ಳಿ ಪ್ರಥಮ ದರ್ಜೆ ಕಾಲೇ ಜನ್ನು 2019-20ನೇ ಸಾಲಿನಲ್ಲಿ ಕುಮಾರ ಸ್ವಾಮಿಯವರೇ ಬೇರೆ ಕಡೆಗೆ ಸ್ಥಳಾಂತರಿಸಿ ರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಕಾಲೇಜಿನಲ್ಲಿ ಹಲವಾರು ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು, ಉತ್ತಮ ಫಲಿತಾಂಶವೂ ಬರುತ್ತಿದೆ. ಆದರೂ ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಜೆಜೆ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿಗೆ ಸ್ಥಳಾಂ ತರಿಸಿರುವುದು ಯಾವ ನ್ಯಾಯ?. ಈ ಕಾಲೇಜಿನಲ್ಲಿ ಜವನಗೊಂಡನಹಳ್ಳಿ ಸುತ್ತ ಲಿನ ಹಳ್ಳಿಗಳ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸರ್ಕಾರದ ಈ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಕೂಡಲೇ ಕಾಲೇಜು ಸ್ಥಳಾಂತರ ಆದೇಶ ವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜವನಗೊಂಡನ ಹಳ್ಳಿಯಿಂದ ವಿಧಾನಸೌಧದವರೆಗೆ ಪಾದ ಯಾತ್ರೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ನಂತರ ವಿದ್ಯಾರ್ಥಿಗಳು ಜಲದರ್ಶಿನಿ ಅತಿಥಿ ಗೃಹದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ಕಾಲೇಜು ಸ್ಥಳಾಂತರ ಆದೇಶ ವನ್ನು ಹಿಂಪಡೆಯಬೇಕೆಂದು ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಚಿವರು, ದೂರವಾಣಿ ಮೂಲಕ ತಮ್ಮ ಇಲಾಖೆಯ ಆಯುಕ್ತರನ್ನು ಸಂಪ ರ್ಕಿಸಿ ಕಾಲೇಜು ಸ್ಥಳಾಂತರ ಆದೇಶವನ್ನು ಹಿಂಪಡೆಯುವಂತೆ ಆದೇಶಿಸಿದರು.
ಪ್ರತಿಭಟನೆಯಲ್ಲಿ ಶ್ರೀ ಸ್ವಾಮಿ ವಿವೇಕಾ ನಂದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಕೆ.ಮಂಜುನಾಥ್, ರಘು ಯಾದವ್, ಎಸ್.ರಘು, ಈಶ್ವರಪ್ಪ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.