ಜಿಟಿಡಿಯಿಂದ ಎನ್‍ಆರ್ ಕ್ಷೇತ್ರ ಪರಿವೀಕ್ಷಣೆ; ಅಭಿವೃದ್ಧಿ ಭರವಸೆ
ಮೈಸೂರು

ಜಿಟಿಡಿಯಿಂದ ಎನ್‍ಆರ್ ಕ್ಷೇತ್ರ ಪರಿವೀಕ್ಷಣೆ; ಅಭಿವೃದ್ಧಿ ಭರವಸೆ

July 3, 2019

ಮೈಸೂರು,ಜು.2(ಎಂಟಿವೈ)- ಅಪೂರ್ಣ ಗೊಂಡಿರುವ ರೈಲ್ವೆ ಗೂಡ್ಸ್ ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ದೇವನೂರು ಕೆರೆ ಸಮಗ್ರ ಅಭಿವೃದ್ಧಿ ಸೇರಿದಂತೆ ಎನ್.ಆರ್. ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಶಾಸಕ ತನ್ವೀರ್ ಸೇಠ್ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ದೇವನೂರು ಕೆರೆ, ಸಾತಗಳ್ಳಿ ರಿಂಗ್ ರಸ್ತೆ ಜಂಕ್ಷನ್, ರಾಜೀವ್ ನಗರ, ಬನ್ನಿಮಂಟಪದ ಜೋಡಿ ತೆಂಗಿನಮರದ ರಸ್ತೆ, ಗೂಡ್ಸ್ ಯಾರ್ಡ್ ರಸ್ತೆ, ಟಿಪ್ಪು ವೃತ್ತ, ಸರ್ಕಾರಿ ಅತಿಥಿ ಗೃಹದ ಮುಂಭಾಗದ ಆರ್ಚ್ ಸೇರಿದಂತೆ ಎನ್.ಆರ್.ಕ್ಷೇತ್ರದ ವಿವಿಧೆಡೆ ಪರಿಶೀಲಿಸಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗೆ  ಅಗತ್ಯವಾದ ಕಾಮಗಾರಿಗಳನ್ನು ಮಂಜೂರು ಮಾಡಲು ಬದ್ಧ ಎಂದು ನುಡಿದರು.

ರೈಲ್ವೆ ಅಧಿಕಾರಿಗಳಿಂದ ಕಿರುಕುಳ: ಬನ್ನಿಮಂಟಪದ ಜೋಡಿ ತೆಂಗಿನ ಮರದ ರಸ್ತೆ ಹಾಗೂ ಗೂಡ್ಸ್ ಶೆಡ್‍ನಿಂದ ಲಾರಿಗಳಿಗಾಗಿ ಹೊಸದಾಗಿ ಮುಡಾ ವತಿಯಿಂದ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಶಾಸಕ ತನ್ವೀರ್ ಸೇಠ್ ಮಾತ ನಾಡಿ, ಗೂಡ್ಸ್ ರೈಲಿನ ಮೂಲಕ ಬರುವ ಪಡಿತರ ಪದಾರ್ಥಗಳು, ರಸಗೊಬ್ಬರವನ್ನು 800ಕ್ಕೂ ಹೆಚ್ಚು ಲಾರಿಗಳಿಂದ ಜಿಲ್ಲೆಯ ಮೂಲೆ ಮೂಲೆಗೆ ಸರಬ ರಾಜು ಮಾಡಲಾಗುತ್ತದೆ. ಈ ಲಾರಿಗಳು ಜನವಸತಿ ಪ್ರದೇಶದ ಮೂಲಕವೇ ಸಂಚರಿಸುತ್ತಿವೆ. ಇದರಿಂದ ಹಲವು ಅಪಘಾತಗಳಾಗಿ 15 ಸಾವು ಸಂಭವಿಸಿವೆ. ಅಪಘಾತಗಳು ಮರುಕಳಿಸದಂತೆ ತಡೆಗಟ್ಟಲು ಮುಡಾ ವತಿಯಿಂದ 15 ಕೋಟಿ ರೂ. ವೆಚ್ಚದಲ್ಲಿ ಗೂಡ್ಸ್ ಶೆಡ್‍ನಿಂದ ರಿಂಗ್ ರಸ್ತೆವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಎರಡೂ ಬದಿಯಿಂದ 800 ಮೀಟರ್ ರಸ್ತೆ ಕಾಮಗಾರಿಗೆ ರೈಲ್ವೆ ಅಧಿಕಾರಿಗಳು ಅಡ್ಡಿಪಡಿಸಿ ದ್ದಾರೆ. ಈ ಕಾಮಗಾರಿ ಪೂರ್ಣಗೊಂಡರೆ ಗೂಡ್ಸ್ ಶೆಡ್‍ನಿಂದ ಬರುವ ಲಾರಿಗಳು ರಿಂಗ್ ರಸ್ತೆ ಮೂಲಕ ಸಾಗುತ್ತವೆ. ಇದರಿಂದ ಜೋಡಿ ತೆಂಗಿನಮರದ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ತಗ್ಗುತ್ತದೆ ಎಂದು ವಿವರಿಸಿದರು.

ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದಲೇ ಈ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಸಂಸದ ರೊಂದಿಗೂ ಸಭೆ ನಡೆಸಲಾಗಿದೆ. ಆದರೂ ರೈಲ್ವೆ ಅಧಿಕಾರಿಗಳು ರಸ್ತೆ ಕಾಮಗಾರಿಗೆ ತಡೆಯೊಡ್ಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಗೂಡ್ಸ್ ಶೆಡ್ ಲಾರಿಗಳ ಮಾಲೀಕರು, ಚಾಲಕರು ಹಲವು ಬಾರಿ ಪ್ರತಿಭಟನೆ ಮಾಡಿದ್ದಾರೆ. ಶಿಖಾ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳು ಸಮ್ಮತಿಸಿದ್ದರು. ಪರ್ಯಾಯ ಜಾಗ ವನ್ನೂ ಕೇಳಿದ್ದರು. ಅದರ ಪ್ರಕ್ರಿಯೆಯೂ ಆಗಿದೆ ಎಂದು ತನ್ವೀರ್ ಸೇಠ್ ಸಚಿವರಿಗೆ ವಿವರ ನೀಡಿದರು.

ಮಾಡ್ಸೋಣ ಬಿಡಪ್ಪ: ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ರೈಲ್ವೆ ಮಂತ್ರಿ ನಮ್ಮವರೇ (ರಾಜ್ಯದವರೇ) ಇದ್ದಾರೆ. ಅವರೊಂದಿಗೆ ಚರ್ಚಿಸಿ, ಕಾಮಗಾರಿ ಮುಂದುವರೆಸುವುದಕ್ಕೆ ಅನುಮತಿ ಕೊಡಿಸುತ್ತೇನೆ. ತಲೆಕೆಡಿಸಿಕೊಳ್ಳಬೇಡಿ ಎಂದು ಜಿಟಿಡಿ ಭರವಸೆ ನೀಡಿದರು.

ದೇವನೂರು ಕೆರೆ ಅಭಿವೃದ್ಧಿಗೆ ಕ್ರಮ: ಮುಖ್ಯ ಮಂತ್ರಿಗಳ ವಿಶೇಷ ಅನುದಾನದಲ್ಲಿ ಮೈಸೂರು ನಗರಕ್ಕೆ 150 ಕೋಟಿ ರೂ. ಅನುದಾನ ನೀಡಲು ಸಿಎಂ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎನ್.ಆರ್.ಕ್ಷೇತ್ರದಲ್ಲಿ ಪರಿವೀಕ್ಷಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಪ್ರದೇಶ, ರಸ್ತೆ ಅಭಿವೃದ್ಧಿ ಮಾಡಲು ಇರುವ ತಕರಾರು, ರೈಲ್ವೆ ಇಲಾಖೆ ಅಧಿಕಾರಿಗಳ ನೀಡುವ ಕಿರುಕುಳದ ಬಗ್ಗೆ ವಿವರಣೆ ನೀಡಿದ್ದೇನೆ. ಮೈಸೂರಿನ ದೇವರಾಜ ಹಾಗೂ ವಾಣಿವಿಲಾಸ ಮಾರುಕಟ್ಟೆ ಹೆಚ್ಚಿನ ಒತ್ತಡದಲ್ಲಿವೆ. ಈ ಹಿನ್ನೆಲೆಯಲ್ಲಿ ರಾಜೀವ್‍ನಗರದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಬೇಕೆಂದು ಕೋರಿ ಸ್ಥಳವನ್ನು ತೋರಿಸಿದ್ದೇನೆ. ಅದಕ್ಕೆ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ತನ್ವೀರ್ ಸೇಠ್ ಸುದ್ದಿಗಾರರಿಗೆ ವಿವರಿಸಿದರು.

ದೇವನೂರು ಕೆರೆ ಅಭಿವೃದ್ಧಿಗೆ ಮುಡಾ ಈಗಾ ಗಲೇ 17.80 ಕೋಟಿ ರೂ. ಕಾಮಗಾರಿ ನಡೆಸಲು ಡಿಪಿಆರ್ ಸಿದ್ಧಪಡಿಸಿ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಿದೆ. ತಹಸೀಲ್ದಾರ್ ಸರ್ವೆ ಪೂರ್ಣಗೊಳಿಸಿ ದ್ದಾರೆ. ಕೆರೆಗೆ ಮಳೆ ನೀರು  ಮಾತ್ರ ಸೇರುವಂತೆ ಒಳ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‍ಗೆ ಡಿಸಿ ಸೂಚನೆ ನೀಡಿದ್ದಾರೆ. ಇದಲ್ಲದೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೂ ಚರ್ಚಿಸಿ ದೇವನೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವು ದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.

ರಿಂಗ್ ರಸ್ತೆಯಿಂದ ಉದಯಗಿರಿ ರಸ್ತೆಗೆ ಬರುವ ವೇಳೆ ಅಪಘಾತಗಳಾಗುತ್ತಿವೆ. ರಿಂಗ್ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿ ಸುವುದರಿಂದ ಉದಯಗಿರಿ ಕಡೆಗೆ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾತಗಳ್ಳಿ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ಕೆಳ ಸೇತುವೆ ನಿರ್ಮಿಸುವುದಕ್ಕೆ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೂ ಸಹಕರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕರು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮುಡಾ ಆಯುಕ್ತ ಕಾಂತರಾಜು, ಮುಡಾ ಅಧ್ಯಕ್ಷ ವಿಜಯ್‍ಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ಲಾ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

 

Translate »