ಮೈಸೂರು,ಜು.2(ಆರ್‍ಕೆ)-ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಗಳಂದು ಅಪರಾಧಗಳನ್ನು ತಡೆಗಟ್ಟಿ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭಾರೀ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
8 ಮಂದಿ ಎಸಿಪಿಗಳು, 31 ಇನ್ಸ್‍ಪೆಕ್ಟರ್‍ಗಳು, 28 ಸಬ್ ಇನ್ಸ್‍ಪೆಕ್ಟರ್‍ಗಳು, 124 ಎಎಸ್‍ಐಗಳು, 806 ಹೆಡ್‍ಕಾನ್ಸ್‍ಟೇಬಲ್, ಕಾನ್ಸ್‍ಟೇಬಲ್‍ಗಳು, 160 ಮಹಿಳಾ ಪೇದೆಗಳು ಹಾಗೂ 174 ಹೋಂ ಗಾಡ್ರ್ಸ್ ಭದ್ರತೆಗೆ ನಿಯೋಜಿಸಲಾಗಿದ್ದು, ಕಮಾಂಡೋ ಪಡೆ, ಅಶ್ವಾರೋಹಿ ದಳ, 8 ಸಿಎಆರ್ ತುಕಡಿ, 4 ಕೆಎಸ್‍ಆರ್‍ಪಿ, 3 ಎಎಸ್‍ಟಿ ತಂಡ, 4 ಆಂಬು ಲೆನ್ಸ್, 4 ಅಗ್ನಿಶಾಮಕ ದಳ, 2 ಇಂಟರ್‍ಸೆಪ್ಟರ್ ವಾಹನ, ಮೊಬೈಲ್ ಕಮಾಂಡ್ ಸೆಂಟರ್ ವಾಹನ ಹಾಗೂ ಗರುಡಾ ವಾಹನಗಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಚಾಮುಂಡೇಶ್ವರಿ ದೇವಸ್ಥಾನ ಬಳಿ ಪ್ರತ್ಯೇಕ ಹೆಲ್ಪ್‍ಲೈನ್, ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆಯಲ್ಲದೆ, ತಾತ್ಕಾಲಿಕ ಬಸ್ ನಿಲ್ದಾಣದ ಲಲಿತ ಮಹಲ್ ಹೆಲಿಪ್ಯಾಡ್‍ನ ಪಾರ್ಕಿಂಗ್ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ವಿದ್ಯುದ್ದೀಪದ ಸೌಲಭ್ಯ ಒದಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಉಚಿತ ಬಸ್ ವ್ಯವಸ್ಥೆ: ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟಕ್ಕೆ ತೆರಳಲು ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಮುಂಜಾನೆ 2 ಗಂಟೆಯಿಂದ ರಾತ್ರಿ 8.30 ಗಂಟೆವರೆಗೆ ಭಕ್ತರಿಗೆ ಉಚಿತ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಹೆಲಿಪ್ಯಾಡ್‍ನಲ್ಲಿ ನಿಲ್ಲಿಸಿ ಬಸ್‍ನಲ್ಲಿ ಪ್ರಯಾಣಿಸಬೇಕು.
ಚಾಮುಂಡಿಬೆಟ್ಟಕ್ಕೆ ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಚಾಮುಂಡಿಬೆಟ್ಟ ನಿವಾಸಿಗಳಿಗೆ ಅನುಮತಿ ಪಡೆಯಲು ದಾಖಲಾತಿಗಳನ್ನು ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಸಲ್ಲಿಸಿದಲ್ಲಿ ಪರಿಶೀಲಿಸಿ ನೀಡಲಾಗುವುದು. ವೃದ್ಧರು, ಅಂಗವಿಕಲರಿಗೆ ಮಹಿಷಾಸುರ ಪ್ರತಿಮೆಯಿಂದ ದೇವಸ್ಥಾನದವರೆಗೆ ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿಬೆಟ್ಟಕ್ಕೆ ಹೋಗುವ ಬಸ್ಸುಗಳು, ಹೆಲಿಪ್ಯಾಡ್‍ನಿಂದ ಲಲಿತಾದ್ರಿಪುರ ಮೂಲಕ ತೆರಳಬೇಕು. ಬರುವಾಗ ತಾವರೆಕಟ್ಟೆ ಮುಖಾಂತರ ಜೆಸಿ ಬಡಾವಣೆ ಜಂಕ್ಷನ್‍ನಲ್ಲಿ ಬಲಕ್ಕೆ ತಿರುಗಿ ಹೆಲಿಪ್ಯಾಡ್ ತಲುಪಬೇಕು ಎಂದು ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.