ಸಾರಾ ವಿರುದ್ಧ ವಿಶ್ವನಾಥ್ ಹೇಳಿಕೆಗೆ ಖಂಡನೆ
ಮೈಸೂರು

ಸಾರಾ ವಿರುದ್ಧ ವಿಶ್ವನಾಥ್ ಹೇಳಿಕೆಗೆ ಖಂಡನೆ

July 26, 2019

ಮೈಸೂರು, ಜು.25(ಪಿಎಂ)- ಕಾಂಗ್ರೆಸ್‍ನಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಎ.ಹೆಚ್. ವಿಶ್ವನಾಥ್ ಅವರನ್ನು ಜೆಡಿಎಸ್‍ಗೆ ಕರೆ ತಂದು ರಾಜಕೀಯ ಜೀವನ ಪುನರಾಂಭಿಸಲು ಮಾಜಿ ಸಚಿವ ಸಾ.ರಾ.ಮಹೇಶ್ ನೆರವಾಗಿದ್ದಾರೆ. ಇದೀಗ ಅವರ ವಿರುದ್ಧವೇ ವಿಶ್ವನಾಥ್ ಮಾತನಾಡುವುದು ನಾಚಿಕೆಗೇಡು ಎಂದು ಜೆಡಿಎಸ್ ರಾಜ್ಯ ವಕ್ತಾರ, ಜಂಗಲ್ ಲಾಡ್ಜ್ ಅಂಡ್ ರೆಸಾಟ್ರ್ಸ್ ನಿರ್ದೇಶಕ ಎನ್.ಆರ್.ರವಿಚಂದ್ರೇಗೌಡ ಖಂಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪುನರ್‍ಜನ್ಮ ನೀಡಿದ್ದ ಜೆಡಿಎಸ್ ಅನ್ನು ಬಿಡುವುದಿಲ್ಲ ಎಂದು ಹೇಳಿದ್ದ ವಿಶ್ವನಾಥ್, ಈಗ ಮುಂಬೈಯಲ್ಲಿ ಕುಳಿತು ಪಕ್ಷ ಹಾಗೂ ಕ್ಷೇತ್ರದ ಮತದಾರರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಟೀಕಿಸಿದರು. ವಿಶ್ವನಾಥ್ ಪಕ್ಷದ್ರೋಹಿಯಾಗಿದ್ದು, ಇವರು ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸದಿದ್ದರೆ, ಸದರಿ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಶಾಸಕರಾಗಿ ಹೊರಹೊಮ್ಮುತ್ತಿದ್ದರು. ಜೊತೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ಸ್ವಕ್ಷೇತ್ರವಾದ ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದರು. ವಿಶ್ವನಾಥ್ ಅವರನ್ನು ಮಾನವೀಯ ದೃಷ್ಟಿಯಿಂದ ಜೆಡಿಎಸ್‍ಗೆ ಕರೆತಂದು ಅವಕಾಶ ನೀಡಿದರೆ ಇದೀಗ ನೆರವಾದವರನ್ನೇ ದೂರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ವನಾಥ್ ಅವರನ್ನು ಕುರಿತಂತೆ ವೀಡಿಯೋ ಒಂದು ಹರಿದಾಡುತ್ತಿದೆ. ಇದರಿಂದಲೇ ಇವರ ನೈಜ ಬಣ್ಣ ಬಯಲಾಗಿದೆ. ಇಷ್ಟಾದರೂ ತಿರುಚಿದ ವಿಡಿಯೋ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರು. ಪಕ್ಷದ ಮುಖಂಡರಾದ ಗೋಪಾಲಗೌಡ, ಬೋರೇಗೌಡ ಗೋಷ್ಠಿಯಲ್ಲಿದ್ದರು.

Translate »