ಪಿರಿಯಾಪಟ್ಟಣ: ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮಿ ಗಳ ಅಗಲಿಕೆಗೆ ಶಾಸಕ ಕೆ.ಮಹದೇವ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶ್ರೀಗಳ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಕ್ತಾದಿಗಳಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಕೆ.ಮಹದೇವ್ ಸಂತಾಪ ಸೂಚಿಸಿ ಸಮಾಜ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟುಕೊಂಡು ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆಶ್ರಯ ಹಾಗೂ ದಾಸೋಹ ನೆರವೇರಿಸುತ್ತಿದ್ದ ಶ್ರೀಗಳ ಸಾಧನೆ ವಿಶ್ವಕ್ಕೇ ಮಾದರಿ. ಅವರ ಅಗಲಿಕೆ ಅತೀವ ದುಃಖ ತಂದಿದೆ ಎಂದರು. ಮಾಜಿ ಶಾಸಕ ಬಸವರಾಜ್ ಮಾತ ನಾಡಿ, ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ನೋವಿನ ನುಡಿಗಳನ್ನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಆಶಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಮಾಜದವರು ಹಾಗೂ ವಿವಿಧ ಮುಖಂಡರಾದ ಪಿ.ಆರ್.ಸದಾಶಿವಪ್ಪ, ಹೆಚ್.ಡಿ ರಾಜೇಂದ್ರ, ಪಿ.ವಿ.ಬಸವರಾಜಪ್ಪ, ಮೈಮುಲ್ ನಿರ್ದೇಶಕ ಕೆ.ಎಂ.ಪ್ರಸನ್ನ, ಪಿ.ಟಿ.ಮಲ್ಲಿಕಾರ್ಜುನ್, ಅಪೂರ್ವ ಮೋಹನ್. ಚಿಟ್ಟೇನಹಳ್ಳಿ ಮಂಜುನಾಥ್, ಪೆಪ್ಸಿ ಕುಮಾರ್, ಮೆಡಿಕಲ್ ಮಂಜು. ಪಿ.ಎಂ.ವಿನೋದ್ ಕುಮಾರ್, ಕಂದೇಗಾಲ ಹರೀಶ್, ಮತ್ತು ಜನಪ್ರತಿನಿಧಿಗಳು, ಸಾರ್ವಜನಿಕರು ಮೌನ ಆಚರಿಸಿ ಸಂತಾಪ ಸೂಚಿಸಿದರು.