`ಕಿಶೋರ 7 ಪಾಸ್ 8’ ಚಿತ್ರತಂಡದಿಂದ ಗಿರೀಶ್ ಕಾರ್ನಾಡ್‍ಗೆ ನಮನ
ಮೈಸೂರು

`ಕಿಶೋರ 7 ಪಾಸ್ 8’ ಚಿತ್ರತಂಡದಿಂದ ಗಿರೀಶ್ ಕಾರ್ನಾಡ್‍ಗೆ ನಮನ

June 11, 2019

ಮೈಸೂರು: ರಂಗಕರ್ಮಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ `ಕಿಶೋರ 7 ಪಾಸ್ 8’ ಚಿತ್ರತಂಡ ಚಿತ್ರೀಕರಣ ವನ್ನು ಸ್ಥಗಿತಗೊಳಿಸಿ, ಸಂತಾಪ ವ್ಯಕ್ತಪಡಿಸಿತು.

ಮೈಸೂರಿನ ಕುವೆಂಪುನಗರದ ಪ್ರಮತಿ ಶಿಕ್ಷಣ ಸಂಸ್ಥೆಯ ಹಿಂಭಾಗ ಸೋಮವಾರ ಚಿತ್ರೀಕರಣ ನಡೆಯುತ್ತಿತ್ತು. ಗಿರೀಶ್ ಕಾರ್ನಾಡ್ ಅವರ ನಿಧನದ ಸುದ್ದಿ ತಿಳಿ ಯುತ್ತಿದ್ದಂತೆ ಚಿತ್ರೀಕರಣ ಸ್ಥಗಿತಗೊಳಿಸ ಲಾಯಿತು. ಅಲ್ಲದೆ ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರತಂಡದ ಸದಸ್ಯರು ಕಾರ್ನಾಡರ ಭಾವಚಿತ್ರವಿಡಿದು ಕೆಲ ಕಾಲ ಮೌನ ಆಚರಿಸಿ, ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಕಲಾವಿದ ತಬಲಾ ನಾಣಿ ಮಾತನಾಡಿ, ಗಿರೀಶ್ ಕಾರ್ನಾಡರ `ತುಘಲಕ್’ ಕರ್ನಾಟಕವಷ್ಟೇ ಅಲ್ಲ ಭಾರತದ ಸಾಂಸ್ಕೃತಿಕ ಲೋಕವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ಕೃತಿ. ಅವರ ಸಾಂಸ್ಕೃತಿಕ, ಪ್ರಜಾಸತ್ತಾತ್ಮಕ ಕೊಡುಗೆ ಮಹತ್ತಾಗಿದೆ. ತುಘಲಕ್‍ನ ಚರಿತ್ರೆಯನ್ನು ಇತಿಹಾಸ ಕಾರರೇ ಕೋಮುವಾದೀಕರಣಗೊಳಿಸಿ ಆತನನ್ನು ಐಲು ದೊರೆ, ತೊಘಲಕ್ ದರ್ಬಾರ್ ಎಂದೆಲ್ಲಾ ಹೀಗಳೆಯುತ್ತಿದ್ದಾಗ ಕಾರ್ನಾಡ್ ಅವರು ಆಳವಾದ ಅಧ್ಯಯನ ದೊಂದಿಗೆ ಸೆಕ್ಯುಲರ್‍ಗೊಳಿಸಿದರು. ಅವರ `ಹಯವದನ’ವೂ ಕೂಡಾ ಪುರಾಣ ಗಳಿಂದ ಮನುಷ್ಯನ ಮೂಲಭೂತ ಹೊಯ್ದಾಟಗಳನ್ನು ಚಿತ್ರಿಸಿದ ರೀತಿಯೂ ಅಂದಿಗೆ ಹೊಸತಾಗಿತ್ತು. ಅವರು ರಚಿಸಿದ ಹಲವು ನಾಟಕಗಳು ಭಾರತದ ಅಗ್ರಗಣ್ಯ ನಾಟಕಕಾರರನ್ನಾಗಿ ಬೆಳಗಿಸಿದವು. ಅಲ್ಲದೆ ಹೊಸ ಅಲೆಯ ಚಿತ್ರಗಳಲ್ಲಿ ನಟಿಸಿ, ಕೆಲ ಚಿತ್ರಗಳನ್ನು ನಿರ್ದೇಶಿಸಿ ಚಿತ್ರರಂಗಕ್ಕೂ ಸ್ಮರಣೀಯ ಕೊಡುಗೆ ನೀಡಿದ್ದಾರೆ. ಕೇವಲ ಸಾಹಿತ್ಯ ಕೃತಿ, ಟಿವಿ ಬೈಟ್‍ಗಳಿಗೆ ಸೀಮಿತ ರಾಗದೆ ಪುರಭವನ ಕಟ್ಟೆಗೆ ಹಾಗೂ ಹಲವು ರೀತಿಯ ಪ್ರತಿಭಟನೆಗಳಲ್ಲಿ ಅವರು ಭಾಗಿಯಾಗುವ ಮೂಲಕ ಸಾಹಿತಿಗಳಿಗೆ ಮಾದರಿಯಾಗಿದ್ದರು. ಅವರೊಂದಿಗೆ ಅನೇಕ ಬಾರಿ ವೇದಿಕೆ ಹಂಚಿಕೊಂಡಿರು ವುದು ನನ್ನ ಜೀವನದಲ್ಲಿ ಮರೆಯಲಾಗದು ಎಂದು ಸ್ಮರಿಸಿಕೊಂಡರು.

ಈ ಸಂಧರ್ಭದಲ್ಲಿ ಕಲಾವಿದರಾದ ಸಂಗೀತಾ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಮಹೇಂದ್ರ, ಸಾಯಿಕೃಷ್ಣ, ಶಶಿ, ಮಿಥಲಿ, ಪಾತಿ ಫೌಂಡೇಷನ್ ಅದ್ಯಕ್ಷ ಎಂ.ಡಿ. ಪಾರ್ಥಸಾರಥಿ, ನಿರ್ದೇಶಕರಾದ ಭಾರತಿ ಶಂಕರ್, ನಟನ ಆನಂದ್, ಜೋಗಿ ಮಂಜು, ಹರೀಶ್ ನಾಯ್ಡು, ಮಂಜು ಕವಿ ಮತ್ತಿತರರಿದ್ದರು.

Translate »