ಬೆಂಗಳೂರಲ್ಲಿ ಮತ್ತೊಂದು ಸಾವಿರಾರು ಕೋಟಿ ವಂಚನೆ ಪ್ರಕರಣ
ಮೈಸೂರು

ಬೆಂಗಳೂರಲ್ಲಿ ಮತ್ತೊಂದು ಸಾವಿರಾರು ಕೋಟಿ ವಂಚನೆ ಪ್ರಕರಣ

June 11, 2019

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಾವಿರಾರು ಕೋಟಿ ವಂಚನೆ ಪ್ರಕರಣ ಬಯಲಾಗಿದ್ದು, ಗ್ರಾಹಕ ರಿಂದ ಕೋಟ್ಯಾಂತರ ರೂ. ಠೇವಣಿ ಸಂಗ್ರಹಿಸಿದ್ದ ಶಿವಾಜಿನಗರದ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮನ್ಸೂರ್ ಅಲಿಖಾನ್, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೊಲೀಸ್ ಆಯುಕ್ತರಿಗೆ ಆಡಿಯೋ ರವಾನಿಸಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ.

ಮನ್ಸೂರ್ ಅಲಿಖಾನ್‍ನ ಆಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಬಳಿ ಹೂಡಿಕೆ ಮಾಡಿದ್ದ ಸಾವಿರಾರು ಗ್ರಾಹಕರು ಐಎಂಎ ಜ್ಯುವೆಲ್ಲರ್ಸ್ ಮುಂದೆ ಜಮಾಯಿಸಿ ಪ್ರತಿಭಟನೆಗಿಳಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ವಂಚನೆ ಗೊಳಗಾಗಿರುವ ಗ್ರಾಹಕರಿಂದ ದೂರು ಪಡೆಯಲು ಆರಂಭಿಸಿದರು. ಗ್ರಾಹಕರ ಸಂಖ್ಯೆಯನ್ನು ಗಮನಿಸಿದ ಪೊಲೀಸರು ಮೊದಲಿಗೆ 2 ಸಾವಿರ ದೂರಿನ ಪ್ರತಿಗಳನ್ನು ತಂದಿದ್ದರಾದರೂ ದೂರುದಾರರ ಸಂಖ್ಯೆ ಹೆಚ್ಚಾದ್ದರಿಂದ ಮತ್ತಷ್ಟು ಪ್ರತಿಗಳನ್ನು ತಂದರು. ಸಂಜೆ ವೇಳೆಗೆ ಸುಮಾರು 4 ಸಾವಿರ ಮಂದಿ ದೂರು ನೀಡಿದ್ದಾರೆ ಎಂದು ಹೇಳಲಾಗಿದ್ದು, ನಾಳೆಯೂ ಸಹ ಪೊಲೀಸರು ದೂರುಗಳನ್ನು ಸ್ವೀಕರಿಸಲಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿವರ: ಕಳೆದ ಸುಮಾರು 14 ವರ್ಷಗಳಿಂದ ಬೆಂಗಳೂರಿನ ಶಿವಾಜಿನಗರದಲ್ಲಿ ಐಎಂಎ ಜ್ಯುವೆಲ್ಲರ್ಸ್ ಹೆಸರಲ್ಲಿ ಮನ್ಸೂರ್ ಅಲಿಖಾನ್ ಎಂಬಾತ ವಹಿವಾಟು ನಡೆಸುತ್ತಿದ್ದ. ಈತ ಗ್ರಾಹಕ ರಿಂದ ತನ್ನ ಜ್ಯುವೆಲ್ಲರ್ಸ್‍ಗೆ ಠೇವಣಿ ಸಂಗ್ರಹಿಸುತ್ತಿದ್ದ. ಆತ ಹೆಚ್ಚಿನ ಬಡ್ಡಿ ನೀಡುತ್ತಿದ್ದ ಕಾರಣದಿಂದ ಸಾವಿರಾರು ಮಂದಿ ಆತನ ಬಳಿ ಠೇವಣಿ ಇಟ್ಟಿದ್ದರು ಎಂದು ಹೇಳಲಾಗಿದೆ. ಇತ್ತೀಚೆಗೆ ಈತ ಬಡ್ಡಿಯಾಗಲೀ ಅಥವಾ ಅವಧಿ ಮುಗಿದ ಠೇವಣಿಗಳ ಹಣವನ್ನು ಹಿಂತಿರುಗಿಸುವುದಾಗಲೀ ಸಮರ್ಪಕ ವಾಗಿ ಮಾಡದ ಕಾರಣ ಹೂಡಿಕೆದಾರರು ಒತ್ತಡ ಹೇರುತ್ತಿದ್ದರು. ಕಳೆದ ನಾಲ್ಕು ದಿನಗಳಿಂದ ಐಎಂಎ ಜ್ಯುವೆಲ್ಲರ್ಸ್‍ಗೆ ಬೀಗ ಜಡಿದಿದ್ದು, ಆತನನ್ನು ಸಂಪರ್ಕಿಸಿದ್ದ ಹೂಡಿಕೆದಾರರಿಗೆ ಸೋಮ ವಾರದಂದು ತಾನು ಹಣ ಹಿಂತಿರುಗಿಸುವುದಾಗಿ ಮನ್ಸೂರ್ ಅಲಿಖಾನ್ ತಿಳಿಸಿದ್ದ ನಂತೆ. ಆದರೆ ಆತ ಹೇಳಿದ ಇಂದು ತಾನೂ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ಹೇಳಿರುವ ಮನ್ಸೂರ್ ಅಲಿಖಾನ್‍ನ ಆಡಿಯೋ ವೈರಲ್ ಆಗಿದ್ದು, ಹೂಡಿಕೆದಾರರು ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನು ಕಳೆದ 12-13 ವರ್ಷಗಳಲ್ಲಿ ಸಂಸ್ಥೆಯನ್ನು ಕಟ್ಟಲು ಬಹಳಷ್ಟು ಶ್ರಮಪಟ್ಟಿದ್ದು, ಅಧಿಕಾರಿಗಳು ಹಾಗೂ ರಾಜಕಾರಣಿ ಗಳಿಗೆ ಲಂಚ ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ. ತಾನು ಶಿವಾಜಿನಗರ ಶಾಸಕ ರೋಷನ್‍ಬೇಗ್ ಅವರಿಗೆ 400 ಕೋಟಿ, ಬಿಡಿಎ ಕುಮಾರ್ ಎಂಬುವವರಿಗೆ 500 ಕೋಟಿ ನೀಡಿದ್ದೇನೆ. ಅವರಿಂದ ಹಣವನ್ನು ಪಡೆಯುವುದರ ಜೊತೆಗೆ ನನ್ನ 500 ಕೋಟಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳನ್ನು ಮಾರಾಟ ಮಾಡಿ ಹೂಡಿಕೆದಾರ ರಿಗೆ ಹಣವನ್ನು ಹಂಚಿಕೆ ಮಾಡಿ ಎಂದು ಮನ್ಸೂರ್‍ಅಲಿಖಾನ್ ನಗರ ಪೊಲೀಸ್ ಆಯುಕ್ತರಿಗೆ ಆಡಿಯೋ ರವಾನಿಸಿದ್ದಾನೆ. ಅಲ್ಲದೇ ತನಗೆ ಹಾಗೂ ಕುಟುಂಬದವರಿಗೆ ಜೀವ ಭಯವಿರುವ ಕಾರಣ ಕುಟುಂಬದವರನ್ನು ಹಳ್ಳಿವೊಂದರಲ್ಲಿ ಬಿಟ್ಟಿರುವುದಾಗಿ ಹೇಳಿರುವ ಆತ ಕುಟುಂಬದವರು ಯಾವ ಹಳ್ಳಿಯಲ್ಲಿದ್ದಾರೆ ಎಂಬುದರ ಬಗ್ಗೆ ಏನನ್ನೂ ಹೇಳಿಲ್ಲ. ಮನ್ಸೂರ್‍ಅಲಿಖಾನ್ ಆಡಿಯೋದಲ್ಲಿ ಹೇಳಿರುವಂತೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಹೂಡಿಕೆದಾರರನ್ನು ವಂಚಿಸಲು ನಾಟಕವಾಡಿದ್ದಾನೆಯೇ ಎಂಬ ಸಂಶಯ ಉಂಟಾಗಿದೆ.

ಆಪ್ತ ಸ್ನೇಹಿತನದೇ ಮೊದಲ ದೂರು: ಮನ್ಸೂರ್‍ಅಲಿಖಾನ್‍ನ ಆಡಿಯೋ ವೈರಲ್ ಆಗಿ ಹೂಡಿಕೆದಾರರು ಆತನ ಕಚೇರಿ ಮುಂದೆ ಜಮಾಯಿಸಿ ಪೊಲೀಸರಿಗೆ ದೂರು ನೀಡುವ ಒಂದು ದಿನ ಮುಂಚಿತವಾಗಿಯೇ ಆತನ ಆಪ್ತ ಸ್ನೇಹಿತ ಖಾಲೀದ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಮನ್ಸೂರ್ ಅಲಿಖಾನ್ ವಿರುದ್ಧ ದೂರು ನೀಡಿದ್ದಾರೆ. ಖಾಲೀದ್ 1.35 ಕೋಟಿ ರೂ.ಗಳನ್ನು ಮನ್ಸೂರ್‍ಅಲಿಖಾನ್, ಹೂಡಿಕೆ ಮಾಡಿದ್ದರು ಎಂದು ಹೇಳಲಾಗಿದ್ದು, ಕಳೆದ 2 ದಿನಗಳ ಹಿಂದೆ ಅವರು ಮನ್ಸೂರ್ ಅಲಿಖಾನ್ ನಿವಾಸಕ್ಕೆ ತೆರಳಿದಾಗ ಮನೆ ಬೀಗ ಹಾಕಿತ್ತು. ಆತನ ಕುಟುಂಬದ ಯಾರೊಬ್ಬರು ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೇ ಮನ್ಸೂರ್‍ನ ಮೊಬೈಲ್ ಕೂಡಾ ಸ್ವೀಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಾನು ವಂಚನೆಗೊಳಗಾಗಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಂಡ ಖಾಲೀದ್ ಶನಿವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಮನ್ಸೂರ್ ಅಲಿಖಾನ್ ವಿರುದ್ಧ ದೂರು ಸಲ್ಲಿಸಿದ್ದರು.

Translate »