ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಯುವರಾಜ್‍ಸಿಂಗ್ ವಿದಾಯ
ಮೈಸೂರು

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಯುವರಾಜ್‍ಸಿಂಗ್ ವಿದಾಯ

June 11, 2019

ಮುಂಬೈ: ಭಾರತೀಯ ಕ್ರಿಕೆಟ್‍ನ `ಸಿಕ್ಸರ್ ಕಿಂಗ್’ ಎಂದೇ ಹೆಸರಾಗಿದ್ದ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಸೋಮವಾರ ವಿದಾಯ ಹೇಳಿದ್ದಾರೆ. ಭಾರತ ತಂಡದಲ್ಲಿ ಖಾಯಂ ಸದಸ್ಯ ನಾಗಿ, ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದ 37 ವರ್ಷದ ಎಡಗೈ ಆಟಗಾರ ಯುವರಾಜ್ ಸಿಂಗ್‍ಗೆ ಯುವಿಯೇ ಸಾಟಿ. 2000ರಲ್ಲಿ ಕೀನ್ಯಾ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಸುಮಾರು 19 ವರ್ಷಗಳಲ್ಲಿ (2000-2019) ದೇಶ-ವಿದೇಶಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಅವರು 304 ಏಕದಿನ ಪಂದ್ಯಗಳಲ್ಲಿ 36.55 ಸರಾಸರಿಯಲ್ಲಿ 8701 ರನ್, 14 ಶತಕ, 52 ಅರ್ಧಶತಕ, ಕ್ಯಾಚ್ 94 ಹಾಗೂ 111 ವಿಕೆಟ್ ಕಬಳಿಸಿದ್ದಾರೆ. ಅಲ್ಲದೇ 150 ರನ್ ಅವರ ಗರಿಷ್ಠ ಮೊತ್ತ. ಇನ್ನು 40 ಟೆಸ್ಟ್ ಪಂದ್ಯವಾಡಿರುವ ಅವರು 33.92 ಸರಾಸರಿಯಲ್ಲಿ 1900 ರನ್, 3 ಶತಕ, 11 ಅರ್ಧ ಶತಕ, ಕ್ಯಾಚ್ 31 ಹಾಗೂ 9 ವಿಕೆಟ್ ಪಡೆದಿದ್ದು, 169 ರನ್ ಗರಿಷ್ಠ ಮೊತ್ತ. ಟಿ20ಯಲ್ಲಿ 59 ಪಂದ್ಯ ವಾಡಿ ರುವ ಅವರು, 28.02 ಸರಾಸರಿಯಲ್ಲಿ 1177 ರನ್, 8 ಅರ್ಧಶತಕ, ಕ್ಯಾಚ್ 12, 28 ವಿಕೆಟ್ ಪಡೆ ದಿದ್ದು, ಗರಿಷ್ಠ ಮೊತ್ತ 77 ರನ್ ದಾಖಲಿಸಿದ್ದಾರೆ.

ಮಹಾಮಾರಿ ಕ್ಯಾನ್ಸ್‍ರ್ ಮೆಟ್ಟಿನಿಂತು ಅಚ್ಚರಿ ಮೂಡಿಸಿದ್ದ ಯುವರಾಜ್ ಸಿಂಗ್ ಹಲವು ಸ್ಮರಣೀಯ ಇನ್ನಿಂಗ್ಸ್ ಹಾಗೂ ದಾಖಲೆಗಳನ್ನು ಮಾಡಿದ್ದಾರೆ. ಅದರಲ್ಲೂ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿ ಕೊಡಬಲ್ಲ ಶಕ್ತಿ ಹೊಂದಿದ್ದ ಯುವರಾಜ್ ಸಿಂಗ್ ಭಾರತ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ 2007 ರ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್‍ಗೆ 6 ಬಾಲ್‍ಗೆ ಆರು ಸಿಕ್ಸರ್ ಸಿಡಿಸಿದ್ದನ್ನು ಯಾರೊಬ್ಬರೂ ಮರೆ ಯಲು ಸಾಧ್ಯವಿಲ್ಲ. ಅಲ್ಲದೇ ಆ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚಿದ್ದರು. ಇನ್ನೂ 2011ರ ವಿಶ್ವಕಪ್‍ಗೂ ಮುನ್ನಾ ಕ್ಯಾನ್ಸರ್ ಇರುವುದು ಗೊತ್ತಾದರೂ, ಛಲಬಿಡದ ತ್ರಿವಿಕ್ರಮನಂತೆ ಭಾರತದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಬ್ಬರಿಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‍ಗೆ ವಿಶ್ವಕಪ್ ಅನ್ನು ಕಾಣಿಕೆಯಾಗಿ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಳಪೆ ಫಾರ್ಮ್‍ನಿಂದ ಬಳಲುತ್ತಿದ್ದ ಯುವರಾಜ್ ಸಿಂಗ್ ಭಾರತ ತಂಡಕ್ಕೆ ಮತ್ತೊಮ್ಮೆ ಆಯ್ಕೆಯಾಗುವ ಭರವಸೆಯಲ್ಲಿದ್ದರು. ಆದರೆ ಕೊನೆಗೂ ಅವರ ಆಸೆ ಆಸೆಯಾಗಿಯೇ ಉಳಿಯಿತ್ತಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರುವ ಯುವರಾಜ್ ಸಿಂಗ್‍ಗೆ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಗಂಗೂಲಿ, ಗಂಭೀರ್, ಸ್ಟುವರ್ಟ್ ಬ್ರಾಡ್, ಸೇರಿದಂತೆ ದೇಶ ಹಾಗೂ ವಿದೇಶದ ಮಾಜಿ ಆಟಗಾರರು ಶುಭ ಕೋರಿದ್ದಾರೆ.

Translate »