ವಿಶ್ವಾಸ ಮತಯಾಚನೆ ಪರಿಸ್ಥಿತಿ ಎದುರಾಗಿಲ್ಲ
ಮೈಸೂರು

ವಿಶ್ವಾಸ ಮತಯಾಚನೆ ಪರಿಸ್ಥಿತಿ ಎದುರಾಗಿಲ್ಲ

February 6, 2019

ಬೆಂಗಳೂರು: ವಿಧಾನ ಮಂಡಲದಲ್ಲಿ ವಿಶ್ವಾಸಮತ ಯಾಚನೆ ಮಾಡುವ ಪರಿಸ್ಥಿತಿ ಎದುರಾಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ತಮಗೆ ಪೂರ್ಣ ಬಹುಮತವಿದೆ. ಅಷ್ಟೇ ಅಲ್ಲ ಆಡಳಿತ ಮತ್ತು ಮೈತ್ರಿ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಇಂತಹ ಸನ್ನಿವೇಶದಲ್ಲಿ ನಾನಾಗಿಯೇ ಏತಕ್ಕೆ ವಿಶ್ವಾಸಮತ ಮಂಡಿಸಲಿ ಎಂದು ಪ್ರಶ್ನಿಸಿದ್ದಾರೆ. ಆರು ತಿಂಗಳ ಮುಂಚೆ ವಿಶ್ವಾಸಮತಯಾಚನೆ ಮಾಡಿ, ಏಳು ತಿಂಗಳ ಕಾಲ ಸುಭದ್ರ ಸರ್ಕಾರ ನೀಡಿದ್ದೇನೆ. ಒಂದು ವೇಳೆ ಪ್ರತಿಪಕ್ಷ ಬಿಜೆಪಿ ಅವಿಶ್ವಾಸ ತಂದಲ್ಲಿ ಅದನ್ನು ಎದುರಿಸಲು ಸಿದ್ಧ ಎಂದರು.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಿಜೆಪಿಯವರು ಒಳ್ಳೆಯ ಕೆಲಸಕ್ಕೆ ಅಡ್ಡಿಪಡಿಸುವ ಪ್ರಯತ್ನ ಇದಾಗಿದೆ. ಉತ್ತಮ ಬಜೆಟ್ ಮಂಡನೆ ಮಾಡಿ ಒಳ್ಳೆಯ ಆಡಳಿತ ನೀಡಬೇಕೆಂದು ನಾನು ಪ್ರಯತ್ನಿಸುತ್ತಿದ್ದೇನೆ. ರಥ ಎಳೆಯುವಾಗ ಯಡೆ ಮಟ್ಟೆಯನ್ನು ಕೊಟ್ಟು ಅಡ್ಡಹಾಕುವಂತೆ ಬಿಜೆಪಿಯವರು ಒಳ್ಳೆ ಕೆಲಸ ಮಾಡಲು ಹೊರಟಿರುವ ನಮಗೆ ಅಡ್ಡಿ ಪಡಿಸುವ ಪ್ರಯತ್ನ ಮಾಡು ತ್ತಿದ್ದಾರೆ ಎಂದು ತಿಳಿಸಿದರು. ಕೆಲವು ಬಿಜೆಪಿ ನಾಯಕರ ಹೇಳಿಕೆಗಳು ಅದಕ್ಕೆ ಪೂರಕ ವಾಗಿವೆ. ಆದರೆ, ಯಾವುದೂ ಫಲ ನೀಡುವುದಿಲ್ಲ. ಬಿಜೆಪಿಯವರ ಅಸಂಬಂಧಿತ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿ ಸುವುದಿಲ್ಲ.
ಅವರು ಯಾವುದೋ ಲೋಕದಲ್ಲಿದ್ದಾರೆ. ಆ ಲೋಕದಲ್ಲಿಯೇ ಅವರು ವಿಹರಿಸಿಕೊಂಡಿರಲಿ. ನಾನು ನನ್ನ ಪಾಡಿಗೆ ಕೆಲಸ ಮಾಡುತ್ತೇನೆ ಎಂದರು.

ನಿಮ್ಮ ಮುಂದೆಯೇ ನಾಳೆ ಪರದೆ ತೆರೆಯಲಿದೆ. ಅಲ್ಲಿಯೇ ನಿಮಗೆ ಉತ್ತರ ದೊರೆಯಲಿದ್ದು, ಮುಂದಾದರೂ, ಗಾಳಿ ಸುದ್ದಿಗಳನ್ನು ಬಿತ್ತರಿಸಲು ಕೊನೆ ಮಾಡಿ.

ವಿಧಾನಸಭಾ ಅಧಿವೇಶನಕ್ಕೆ ಕಾಂಗ್ರೆಸ್ ಶಾಸಕರು ಹಾಜರಾಗುತ್ತಾರೋ, ಇಲ್ಲವೋ, ಅತೃಪ್ತರು ಬರುತ್ತಾರೋ, ಇಲ್ಲವೋ ಎಂಬೆಲ್ಲಾ ಗೊಂದಲಗಳು ನಾಳೆಯೇ ನಿವಾರಣೆಯಾಗುತ್ತದೆ ಎಂದರು. ಕಳೆದ ಎರಡು ತಿಂಗಳಿನಿಂದ ಬಿಜೆಪಿಯ ಕೆಲವು ನಾಯಕರು ಸರ್ಕಾರ ಉರುಳಿಸಲು ನೂರಾರು ಕೋಟಿ ರೂ. ವೆಚ್ಚ ಮಾಡಿದರೂ, ಅಲುಗಾಡಿಸಲು ಸಾಧ್ಯವಾಗಲಿಲ್ಲ. ಮೂರು ನಾಲ್ಕು ಮಂದಿಯನ್ನು ಪಂಚತಾರಾ ಹೋಟೆಲ್‍ನಲ್ಲಿ ಉಳಿಸಿ, ಅದನ್ನೇ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಿ, ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಪರೇಷನ್ ಕಮಲ ಮಾಡಿ ಯಶಸ್ವಿಯಾದರು. ಆದರೆ ಎಲ್ಲಾ ಕಾಲದಲ್ಲೂ ಸಂಡೆಯೇ ಆಗಿರುವುದಿಲ್ಲ. ಈಗ ಅವರಿಗೆ ಅಧಿಕಾರವಿಲ್ಲ. ಅಧಿಕಾರ ಇದ್ದಾಗ ಮಾಡಿದ್ದನ್ನೇ ಈಗಲೂ ಮಾಡಬಹುದೆಂದು ಪ್ರಯತ್ನಿಸಿ ನೋಡಿದರು.

ಆದರೆ ನಾನು ಅವರ ನರವನ್ನೇ ತೆಗೆದಿದ್ದೇನೆ. ಇದರ ಸುಳಿವು ದೊರೆಯುತ್ತಿದ್ದಂತೆ ತಮ್ಮವರನ್ನು ಗಟ್ಟಿ ಮಾಡಿಕೊಳ್ಳಲು ಬೆಳಿಗ್ಗೆಯಿಂದ ತಮ್ಮ ಪಕ್ಷದ ಮುಖಂಡರೊಟ್ಟಿಗೆ ನಿರಂತರ ಸಭೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಿನ್ನೆಯವರೆಗೂ ಆಪರೇಷನ್ ಕಮಲದ ಮೂಲಕ ಸರ್ಕಾರ ಉರುಳಿಸಲು ಎಲ್ಲಾ ತರಹದ ಕಸರತ್ತು ವಿಫಲವಾದ ನಂತರ ಬಿಜೆಪಿ ನಾಯಕರು ಕೈ ಚೆಲ್ಲಿ ಕುಳಿತಿ ದ್ದಾರೆ. ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಇಂದು ಇಡೀ ದಿನ ನಿರಂತರ ಸಭೆ ನಡೆಸಿದರು. ಡಾಲ್ಸರ್ ಕಾಲೋನಿಯ ತಮ್ಮ ನಿವಾಸದಲ್ಲಿ ಎರಡು ಹಂತದಲ್ಲಿ ಪಕ್ಷದ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಿದರೆ, ಸಂಜೆ ಶಾಸಕಾಂಗ ಸಭೆ ನಡೆಸಿ, ತಮ್ಮ ಶಾಸಕರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿನ್ನೆ ನೀಡಿದ ಫ್ಯೂಸ್ ಹೇಳಿಕೆ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ ತಮ್ಮ ಶಾಸಕರು ಆಡಳಿತ ಪಕ್ಷದ ಕಡೆ ವಾಲದಂತೆ ನೋಡಿಕೊಳ್ಳಲು, ಇಂದಿನ ಸಭೆಯನ್ನೇ ಪ್ರಮುಖವಾಗಿ ಯಡಿ ಯೂರಪ್ಪ ಬಳಸಿಕೊಂಡರು. ಸರ್ಕಾರ ಉರುಳಿಸಲು ಸಂಖ್ಯೆಯ ಗುರಿ ಮುಟ್ಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಹಿಂದೆ ಆಲೋಚಿಸಿದಂತೆ ವಿಧಾನಸಭಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕೆಂಬ ಯೋಜನೆಯನ್ನು ಇಂದಿನ ಸಭೆಯಲ್ಲೇ ಕೈಬಿಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಹರಿಹಾಯಲು ಇಂದಿನ ಸಭೆ ತೀರ್ಮಾನಿಸಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲಾಗದೇ, ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ನಿಲ್ಲಲಿ. ಮೊದಲು ಜನರಿಗೆ ಒಳ್ಳೆಯ ಆಡಳಿತ ನೀಡಿ ಎಂದು ಕಿವಿ ಹಿಂಡುವ ಕೆಲಸ ಮಾಡಲಿದ್ದಾರೆ.

Translate »