ಇಂದಿನಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ
ಮೈಸೂರು

ಇಂದಿನಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ

February 6, 2019
  • ಇಂದು ರಾಜ್ಯಪಾಲರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ
  • ಶಾಸಕರ ಹಿಡಿದಿಡಲು ಪಕ್ಷಗಳ ಹರಸಾಹಸ, ಔತಣಕೂಟ, ಸರಣಿ ಸಭೆಗಳು

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸಲು ಪ್ರತಿಪಕ್ಷ ಬಿಜೆಪಿ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ನಾಳೆಯಿಂದ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ.

ಸರ್ಕಾರವನ್ನು ಶತಾಯ-ಗತಾಯ ಕೆಡವಲೇ ಬೇಕೆಂದು ಅಖಾಡಕ್ಕಿಳಿದಿರುವ ಬಿಜೆಪಿ, ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದೆ. ಇದಕ್ಕೆ ಪ್ರತಿತಂತ್ರ ರೂಪಿಸಿರುವ ಕೈಪಡೆ ಆಪರೇಷನ್‍ಗೆ ಪ್ರತಿ ಯಾಗಿ ಭೋಜನ ಮತ್ತು ಔತಣಕೂಟ ಏರ್ಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ನಡೆಸಿತು. ಈ ಬೆಳವಣಿಗೆಗಳ ನಡುವೆಯೇ ನಾಳೆ ರಾಜ್ಯಪಾಲ ವಜೂಬಾಯ್‍ವಾಲಾ ಅವರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡ ಲಿದ್ದಾರೆ. ಸಮ್ಮಿಶ್ರ ಸರ್ಕಾರದ ಯೋಜ ನೆಗಳು ಹಾಗೂ ಈ ವರ್ಷದ ದೂರದೃಷ್ಟಿ ಏನೆಂಬುದನ್ನು ರಾಜ್ಯ ಪಾಲರು ತಮ್ಮ ಭಾಷಣದಲ್ಲಿ ಬಿಂಬಿಸಲಿದ್ದಾರೆ.

ರಾಜ್ಯಪಾಲರ ಭಾಷಣ ಮಂಡನೆ ನಂತರ ಹಣ ಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಫೆಬ್ರವರಿ 8 ರಂದು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಇದಾಗಿರುವುದರಿಂದ ರೈತರು, ಕಾರ್ಮಿಕರು, ಮಹಿಳೆಯರು, ಹಿರಿಯ ನಾಗರಿಕರು, ಹಿಂದುಳಿದವರು ಸೇರಿ ದಂತೆ ಎಲ್ಲ ವರ್ಗದವ ರನ್ನೂ ಓಲೈಸಿಕೊಳ್ಳಲು ಭರಪೂರ ಮತಾಕರ್ಷಣೆ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಕಳೆದ 15 ದಿನಗಳಿಂದ ಕುಮಾರ ಸ್ವಾಮಿಯವರು ಇಲಾಖಾ ವಾರು ಮತ್ತು ಅಧಿಕಾರಿ ಗಳ ಸಭೆ ನಡೆಸಿ ಬಜೆಟ್‍ನಲ್ಲಿ ಕೈಗೊಳ್ಳಬೇಕಾದ ಯೋಜ ನೆಗಳ ಬಗ್ಗೆಯೂ ಚರ್ಚೆ ನಡೆಸಿದ್ದರು. ಇನ್ನು ಜಂಟಿ ಅಧಿವೇಶನದಲ್ಲಿ ಈ ಬಾರಿ ಭಿನ್ನಮತೀಯ ಶಾಸಕರ ಅತೃಪ್ತಿ, ಆಪರೇಷನ್ ಕಮಲ ಸಾಕಷ್ಟು ಪ್ರತಿಧ್ವನಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಕಳೆದ 20 ದಿನಗಳಿಂದ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳದಲ್ಲಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ನಡೆ ಈಗಲೂ ನಿಗೂಢವಾಗಿದೆ. ಇದರ ಜತೆಗೆ ಶಾಸಕರಾದ ಪ್ರತಾಪ್‍ಗೌಡ ಪಾಟೀಲ್, ಜೆ.ಗಣೇಶ್ ಸೇರಿದಂತೆ ಕೆಲವು ಶಾಸಕರ ಬಗ್ಗೆಯೇ ಕಾಂಗ್ರೆಸ್ ಚಿಂತಾಕ್ರಾಂತವಾಗಿದೆ.

ಹೇಗಾದರೂ ಮಾಡಿ ಈ ಶಾಸಕರನ್ನು ಸೆಳೆದು ರಾಜೀನಾಮೆ ನೀಡುವ ಮೂಲಕ ಸರ್ಕಾರದಲ್ಲಿ ಅಸ್ಥಿರತೆ ಉಂಟು ಮಾಡಬೇಕೆಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಕಲಾಪದ ಸಂದರ್ಭದಲ್ಲಿ ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರು ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದು, ಸರ್ಕಾರ ಬರಗಾಲವನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ತರಾಟೆಗೆ ತೆಗೆದುಕೊಳ್ಳಲು ತೀರ್ಮಾನಿಸಿದೆ.
ಈಗಾಗಲೇ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ಬರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

ಇದರ ಜತೆಗೆ ಆಪರೇಷನ್ ಕಮಲ ಪ್ರತಿಧ್ವನಿಸುವ ಸಾಧ್ಯತೆ ಇದ್ದು, ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವಾಕ್ಸಮರದ ವೇದಿಕೆಯಾಗಬಹುದು.

ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆಗೆ ಅಡ್ಡಿಪಡಿಸಲ್ಲ
ಬೆಂಗಳೂರು: ರಾಜ್ಯಪಾಲರ ಭಾಷಣಕ್ಕಾಗಲೀ ಇಲ್ಲವೆ ಬಜೆಟ್ ಮಂಡನೆಗೆ ಯಾವುದೇ ರೀತಿಯ ಅಡ್ಡಿ ಪಡಿಸುವ ಪ್ರಯತ್ನವನ್ನು ನಾವು ಮಾಡು ವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಮುಖಂಡರ ಜೊತೆ ತಮ್ಮ ನಿವಾಸದಲ್ಲಿ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ವೇಳೆ ಬಿಜೆಪಿ ಅಡ್ಡಿಪಡಿಸುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ.

ಬಜೆಟ್ ಮಂಡನೆಗೂ ನಮ್ಮದೇನೂ ತಕರಾರಿಲ್ಲ. ಪ್ರತಿಪಕ್ಷವಾಗಿ ನಾವು ನಮ್ಮ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ ಎಂದು ಹೇಳಿದರು. ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಪ್ರತಿಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆ. ವಿಧಾನಸೌಧದ ಒಳಗೂ ಮತ್ತು ಹೊರಗೂ ನಾವು ಸರ್ಕಾರದ ತಪ್ಪುಗಳನ್ನು ಹುಡುಕಿ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಅತೃಪ್ತ ಶಾಸಕರಿಗೂ ನಮಗೂ ಯಾವುದೇ ರೀತಿಯ ಸಂಬಂಧ ವಿಲ್ಲ ಎಂದು ಪುನರುಚ್ಚರಿಸಿದರು. ಬಜೆಟ್ ಮಂಡನೆಗೆ ನಾವು ಅಡ್ಡಿಪಡಿಸುತ್ತೇವೆ ಎನ್ನುವುದಾಗಲಿ, ಇಲ್ಲವೇ ಇದರ ವಿರುದ್ಧ ಮಾತನಾಡದಂತೆ ಎಲ್ಲ ಶಾಸಕರಿಗೂ ಸೂಚನೆ ಕೊಡಲಾಗಿದೆ. ಈ ಬಗ್ಗೆ ಶಾಸಕಾಂಗ ಸಭೆಯಲ್ಲೂ ಸಲಹೆ ನೀಡುವುದಾಗಿ ಹೇಳಿದರು.

ಆಪರೇಷನ್ ಕಮಲದ ರೂವಾರಿ ಯಡಿಯೂರಪ್ಪ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಪಕ್ಕೆ ಪ್ರತಿಯಾಗಿ ಬಿಎಸ್‍ವೈ ಮೊದಲು ತಮ್ಮ ಪಕ್ಷದ ಶಾಸಕರನ್ನು ಸರಿಯಾಗಿಟ್ಟುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು.
ದೇವೇಗೌಡರು ದೇಶದ ಪ್ರಧಾನಿಯಾದವರು. ಈ ರೀತಿ ಆಧಾರ ರಹಿತವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ಅವರ ಪಕ್ಷದ ಶಾಸಕರೇ ಅವರನ್ನು ನಂಬುತ್ತಿಲ್ಲ. ಇನ್ನು ಕಾಂಗ್ರೆಸ್ ಬಗ್ಗೆ ಮಾತನಾಡದಿರುವುದೇ ಲೇಸು. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದಕ್ಕೆ ಏನು ಹೇಳುವುದು ಎಂದು ಪ್ರಶ್ನಿಸಿದರು. ನಾವು ಯಾವ ಆಪರೇಷನ್ ಕಮಲವನ್ನೂ ನಡೆಸುತ್ತಿಲ್ಲ. ಸರ್ಕಾ ರದ ಬಗ್ಗೆ ನಂಬಿಕೆ ಇಲ್ಲದವರು ಅಸಮಾಧಾನಗೊಂಡು ಹೊರಹೋಗಿರಬಹುದು. ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಪುನರುಚ್ಚರಿಸಿದರು.

Translate »