ಕಾರ್ಯಕ್ರಮದ ಆರಂಭದಲ್ಲಿ ಗೊಂದಲ-ಗದ್ದಲ
ಚಾಮರಾಜನಗರ

ಕಾರ್ಯಕ್ರಮದ ಆರಂಭದಲ್ಲಿ ಗೊಂದಲ-ಗದ್ದಲ

July 27, 2018

ಚಾಮರಾಜನಗರ:  ಇಂದಿಲ್ಲಿ ನಡೆದ ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶದ ಕಾರ್ಯಕ್ರಮ ಆರಂಭದಲ್ಲಿಯೇ ಗೊಂದಲದ ಗೂಡಾಯಿತು.

ಕಾರ್ಯಕ್ರಮ ಆರಂಭಗೊಂಡು ಸ್ವಾಗತ ಆರಂಭವಾಯಿತು. ಈ ವೇಳೆ ವೇದಿಕೆಯ ಮುಂಭಾಗದಲ್ಲಿಯೇ ಕುಳಿತಿದ್ದ ವೀರ ಶೈವ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ಕೆಲವರು ಕಾರ್ಯಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಲೂ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮ ರೂಪಿಸಿದ್ದ ಸಂಘಟಕರೂ ಸಹ ಘೋಷಣೆಗಳನ್ನು ಕೂಗತೊಡಗಿದರು. ಈ ವೇಳೆ ಗದ್ದಲ-ಗೊಂದಲ ಉಂಟಾಯಿತು. ಸ್ಥಳದಲ್ಲಿದ್ದ ಪೊಲೀಸರು ಇಬ್ಬರನ್ನೂ ಎಷ್ಟೇ ಸಮಾಧಾನಿಸಿದರೂ ಸಹ ಪ್ರಯೋಜನಕ್ಕೆ ಬರಲಿಲ್ಲ. ಗೊಂದಲ-ಗದ್ದಲ ಮುಂದುವರೆಯಿತು.

ಈ ಗೊಂದಲದ ನಡುವೆಯೇ ಮಾತನಾಡಿದ ವೀರಶೈವ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಕೋಡಸೋಗೆ ಶಿವಬಸಪ್ಪ, ಜಿಲ್ಲೆಯಲ್ಲಿ ವೀರಶೈವ ಮಹಾಸಭಾ ಪ್ರಬಲವಾಗಿದೆ. ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತರು ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಒಡಕು ಇಲ್ಲ. ಈಗ ಜಾಗತಿಕ ಲಿಂಗಾಯಿತ ಮಹಾಸಭಾದ ಹೆಸರಿನಲ್ಲಿ ವೀರಶೈವ ಲಿಂಗಾಯಿತರನ್ನು ಬೇರೆ ಬೇರೆ ಮಾಡುವುದು ಸರಿಯಲ್ಲ. ಈ ಸಂಘಟನೆ ಉದ್ಘಾಟನೆಗೆ ನಮ್ಮೆಲ್ಲರ ವಿರೋಧ ಇದೆ ಎಂದರು. ಈ ವೇಳೆ ವೀರಶೈವ ಮಹಾಸಭಾದ ಪದಾಧಿಕಾರಿಗಳು ಜೈಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಜಾಗತಿಕ ಲಿಂಗಾಯಿತ ಮಹಾಸಭಾದ ಸಂಘಟಕರು ಸಹ ತಮ್ಮದೇ ಆದ ಘೋಷಣೆ ಗಳನ್ನು ಕೂಗಲು ಆರಂಭಿಸಿದರು. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣ ಆಯಿತು. ಯಾರು ಏನು ಹೇಳುತ್ತಿದ್ದಾರೆ ಎಂದು ತಿಳಿ ಯದ ವಾತಾವರಣ ನಿರ್ಮಾಣ ಆಯಿತು. ಪರಿಸ್ಥಿತಿ ‘ಕೈ’ ಮೀರು ತ್ತಿದೆ ಎಂಬುದನ್ನು ಅರಿತ ಪೊಲೀಸರು, ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದವರನ್ನು ಬಲವಂತವಾಗಿ ಭವನದ ಹೊರಕ್ಕೆ ಕರೆ ತಂದರು.

ಮುಖಂಡರಾದ ಕೊಡಸೋಗೆ ಶಿವಬಸಪ್ಪ, ಮೂಡ್ಲುಪುರ ನಂದೀಶ್, ಸೈಟ್ ಮಂಜು, ಬಸಪ್ಪ, ಆರ್.ವಿ.ಮಹದೇವ ಸ್ವಾಮಿ, ಆರ್.ಪುಟ್ಟಮಲ್ಲಪ್ಪ, ಕೋಟಂಬಳ್ಳಿ ಗುರುಸ್ವಾಮಿ, ಸೋಮವಾರಪೇಟೆ ವಿಶ್ವನಾಥ್, ನಾಗಣ್ಣ, ಬಸವನಪುರ ಬಸವರಾಜು, ಸುರೇಶ್, ಕಾವುದವಾಡಿ ಗುರು ಇತರರು ಕಾರ್ಯ ಕ್ರಮವನ್ನು ಬಹಿಷ್ಕರಿಸಿ ಹೊರ ನಡೆದವರಲ್ಲಿ ಪ್ರಮುಖರು.

Translate »