ಸಿದ್ದರಾಮಯ್ಯ ವಿರುದ್ಧ ಪ್ರತಾಪಸಿಂಹ ಟೀಕೆಗೆ ಕಾಂಗ್ರೆಸ್ ಖಂಡನೆ
ಮೈಸೂರು

ಸಿದ್ದರಾಮಯ್ಯ ವಿರುದ್ಧ ಪ್ರತಾಪಸಿಂಹ ಟೀಕೆಗೆ ಕಾಂಗ್ರೆಸ್ ಖಂಡನೆ

April 12, 2019

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಸಂಸದ ಪ್ರತಾಪಸಿಂಹ ಮಾಡಿರುವ ಆರೋಪವನ್ನು ಮೈಸೂರಿನ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ರಾಜೇಶ್ ಖಂಡಿಸಿದರು. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮೈಸೂರು-ಕೊಡಗು ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿರುವ ಪ್ರತಾಪಸಿಂಹ, ಅನಗತ್ಯವಾಗಿ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹುಣಸೂರು ಮತ್ತು ಮಡಿಕೇರಿಯಲ್ಲಿ ಕೋಮುವಾದಕ್ಕೆ ಬೆಂಬಲ ನೀಡಿ, ಸಾಮಾಜಿಕ ಸಾಮರಸ್ಯ ಕೆಡಲು ಕಾರಣರಾಗಿದ್ದಾರೆ. 5 ವರ್ಷದ ತಮ್ಮ ಅವಧಿಯಲ್ಲಿ ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ ಹಾಗೂ ಹಿಂದುಳಿದ ವರ್ಗಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಈ ವರ್ಗದ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ಆರೋಪಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹತ್ತಾರು ಕಾರ್ಯಕ್ರಮಗಳ ಮೂಲಕ ಬಡಜನರಿಗೆ, ರೈತರಿಗೆ ಬೆಳಕಾಗಿದ್ದಾರೆ. ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದ ಯುಪಿಎ ಸರ್ಕಾರ ಸಹ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಈ ಕಾರ್ಯ ಕ್ರಮಗಳಿಗೆ ಬೇರೆ ಹೆಸರು ನೀಡಿ, ಇವೆಲ್ಲವನ್ನೂ ತಾವೇ ಮಾಡಿದ್ದು ಎಂದು ನರೇಂದ್ರ ಮೋದಿ, ಸಂಸದ ಪ್ರತಾಪಸಿಂಹ ಹೇಳುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ಕಮಲಾ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Translate »