ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ 10 ಸಾವಿರ ಕೋಟಿ ಅನುದಾನ ಕಟ್
ಮೈಸೂರು

ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ 10 ಸಾವಿರ ಕೋಟಿ ಅನುದಾನ ಕಟ್

September 10, 2019

ಬೆಂಗಳೂರು,ಸೆ.9(ಕೆಎಂಶಿ)- ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿ ಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ ಸುಮಾರು 10 ಸಾವಿರ ಕೋಟಿ ರೂ.ಗಳ ಅನುದಾನವನ್ನು ಹಿಂಪಡೆಯಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ, ಅದರಲ್ಲೂ ಕೆಲವು ಕ್ಷೇತ್ರಗಳ ಮೇಲೆ ತೋರಿದ್ದ ವಿಶೇಷ ಪ್ರೀತಿಗೆ ಕತ್ತರಿ ಹಾಕಲು ಯಡಿಯೂರಪ್ಪ ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ, ಅಭಿವೃದ್ಧಿ ಕಾರ್ಯಗಳಿಗೆ ಹಣಬೇಕಿದೆ ಎಂಬ ಅಂಶವನ್ನು ಮುಂದಿಟ್ಟು ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ವಿವರವನ್ನು ತರಿಸಿಕೊಂಡಿದ್ದಾರೆ.

ಹೀಗೆ ಅನುದಾನ ಮಂಜೂರಾದ ಕ್ಷೇತ್ರಗಳ ಪೈಕಿ ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ಮಂಜೂರಾಗಿದೆ ಎಂಬ ಅಂಶವನ್ನು ವಿಶೇಷವಾಗಿ ಗಮನಿಸುತ್ತಿರುವ ಸಿಎಂ ಯಡಿಯೂರಪ್ಪ,ಮೊದಲು ಈ ರೀತಿ ಹೆಚ್ಚುವರಿ ಅನುದಾನ ಪಡೆದ ಕ್ಷೇತ್ರಗಳಿಗೆ ಹಣ ಕಟ್ ಮಾಡಲಿದ್ದಾರೆ. ಮೂಲಗಳ ಪ್ರಕಾರ ಕೆಲ ಶಾಸಕರ ಕ್ಷೇತ್ರಗಳಿಗೆ ಮೂರು, ನಾಲ್ಕು ಪಟ್ಟು ಹೆಚ್ಚುವರಿ ಅನುದಾನ ನೀಡಲಾಗಿದ್ದು, ಈ ಹೆಚ್ಚುವರಿ ಅನುದಾನದ ಬಾಬ್ತನ್ನು ಕಟ್ ಮಾಡಲು ನಿರ್ಧರಿಸಲಾಗಿದೆ. ಹೀಗೆ ಯಾವ್ಯಾವ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆಯೋ ಅದನ್ನು ಕಟ್ ಮಾಡಬೇಕು ಎಂಬ ಕುರಿತು ಅವರು ಲೆಕ್ಕ ಹಾಕುತ್ತಿರುವುದರಿಂದ ಉಭಯ ಪಕ್ಷಗಳ ಹಲವು ಶಾಸಕರು ಬಿಜೆಪಿಯೆಡೆ ದೌಡಾಯಿಸಲು ಯೋಚನೆ ಮಾಡುತ್ತಿದ್ದಾರೆ. ಹೆಚ್ಚುವರಿ ಅನುದಾನ ಸಿಕ್ಕಿರುವುದರಿಂದ ಅಗತ್ಯದ ಕೆಲಸ ಮಾಡಿಸಬಹುದು. ಆ ಮೂಲಕ ಕ್ಷೇತ್ರದಲ್ಲಿ ಕೆಲಸಗಳಾಗಿವೆ ಎಂದು ಜನರಿಗೆ ತೋರಿಸಬಹುದು.ಪರಿಣಾಮವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಅದು ತಮಗೆ ಅನುಕೂಲ ಮಾಡಿಕೊಡಲಿದೆ ಎಂಬುದು ಸದರಿ ಶಾಸಕರ ಯೋಚನೆಯಾಗಿತ್ತು. ಆದರೆ ಹೀಗೆ ಲಭ್ಯವಾದ ಹೆಚ್ಚುವರಿ ಅನುದಾನ ಕಟ್ ಆಗುವುದಷ್ಟೇ ಅಲ್ಲದೆ, ಉಳಿದ ಅನುದಾನದ ಹಣದಲ್ಲೂ ಕಡಿತವಾದರೆ ಮುಂದಿನ ದಿನಗಳು ಕಷ್ಟವಾಗು ತ್ತವೆ ಎಂಬ ಲೆಕ್ಕಾಚಾರಕ್ಕೆ ಬಂದಿರುವ ಉಭಯ ಪಕ್ಷಗಳ ಡಜನ್‍ಗೂ ಹೆಚ್ಚು ಶಾಸಕರು ಸಿಎಂ ಯಡಿಯೂರಪ್ಪ ಅವರ ದುಂಬಾಲು ಬಿದ್ದಿದ್ದಾರೆ ಎಂಬುದು ಮೂಲಗಳ ಮಾಹಿತಿ.

Translate »