ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್‍ನ ನಾನಾ ಪಟೋಲೆ ಅವಿರೋಧ ಆಯ್ಕೆ 
ಮೈಸೂರು

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್‍ನ ನಾನಾ ಪಟೋಲೆ ಅವಿರೋಧ ಆಯ್ಕೆ 

December 2, 2019

ಮುಂಬೈ: ಮಹಾರಾಷ್ಟ್ರ ವಿಧಾನ ಸಭೆಯ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಜೊತೆಗೆ ಬಿಜೆಪಿ ಶಾಸಕ ಕಿಷನ್ ಎಸ್ ಕಥೋರೆ ಕೂಡ ಸ್ಪೀಕರ್ ಹುದ್ದೆಯ ಆಕಾಂಕ್ಷಿಯಾಗಿದ್ದರು.

ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟೋಲೆ ವಿದರ್ಭ ಜಿಲ್ಲೆಯ ಸಕೋಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಪಕ್ಷದ ಹಿರಿಯ ಧುರೀಣ ರಾಗಿದ್ದಾರೆ. ಸ್ಪೀಕರ್‍ನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸರ್ವಪಕ್ಷ ಸಭೆ ಹಾಗೂ ಇತರ ಪಕ್ಷಗಳ ಕೋರಿಕೆ ಹಿನ್ನೆಲೆಯಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸದನದಲ್ಲಿ ಹೇಳಿದರು. ನಾನಾ ಪಟೋಲೆ ಕೃಷಿಕ ಕುಟುಂಬ ದಿಂದ ಬಂದವರಾಗಿದ್ದು, ಅವರು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ಹೊಂದಿರುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಭಿನಂದನಾ ಭಾಷಣ ಮಾಡಿದರು. 56 ವರ್ಷದ ನಾನಾ ಪಟೋಲೆ ಓಬಿಸಿ ಕುಣಬಿ ಸಮುದಾಯಕ್ಕೆ ಸೇರಿದ್ದು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

 

Translate »