ಪಕ್ಷೇತರರ ಸಹಕಾರದಿಂದ ಕಾಂಗ್ರೆಸ್‍ಗೆ ಅಧಿಕಾರ: ತಿ.ನರಸೀಪುರದಲ್ಲಿ ಸಂಸದ ಧ್ರುವನಾರಾಯಣ್ ವಿಶ್ವಾಸ
ಮೈಸೂರು

ಪಕ್ಷೇತರರ ಸಹಕಾರದಿಂದ ಕಾಂಗ್ರೆಸ್‍ಗೆ ಅಧಿಕಾರ: ತಿ.ನರಸೀಪುರದಲ್ಲಿ ಸಂಸದ ಧ್ರುವನಾರಾಯಣ್ ವಿಶ್ವಾಸ

September 5, 2018

ತಿ.ನರಸೀಪುರ: ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಅಲ್ಪಮಟ್ಟದ ಹಿನ್ನೆಡೆಯಾಗಿರುವುದರಿಂದ ಪಕ್ಷೇತರರ ಬೆಂಬಲ ಪಡೆದು ಪುರಸಭೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವುದಾಗಿ ಸಂಸದ ಆರ್.ಧ್ರುವನಾರಾಯಣ ಹೇಳಿದರು.
ಪಟ್ಟಣದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಪುರಸಭಾ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪರಿವರ್ತಿತ ಪುರಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ. 23 ವಾರ್ಡುಗಳಲ್ಲಿ 10ರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಅಧಿಕಾರ ಹಿಡಿಯಲು ಮೂವರು ಸದಸ್ಯರ ಬೆಂಬಲ ಬೇಕಿರುವುದರಿಂದ ಪಕ್ಷೇತರರ ಸಹಕಾರ ಪಡೆದುಕೊಳ್ಳಲಾಗುವುದು ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಹಾಗೂ ಸಚಿವರಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪ ಅವರು ಪಟ್ಟಣದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು. ಈಗಿನ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಜನರ ಸಮಸ್ಯೆಯನ್ನು ನೇರವಾಗಿ ಆಲಿಸಿ, ಬಡಾವಣೆಗಳ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ. ಪಕ್ಷದ ಆಕಾಂಕ್ಷಿಗಳಾಗಿದ್ದ ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಅವರ ಬೆಂಬಲದಿಂದ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ಆರ್.ಧ್ರುವನಾರಾಯಣ ತಿಳಿಸಿದರು.

ಚುನಾವಣೆ ಉಸ್ತುವಾರಿ ಹಾಗೂ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಸೇರಿದಂತೆ ಮುಖಂಡರು ಹಾಗೂ ಆಯಾಯ ಅಭ್ಯರ್ಥಿಗಳ ಬೆಂಬಲಿಗರು ನಿಷ್ಠೆಯಿಂದ ದುಡಿದ್ದರಿಂದ 10 ವಾರ್ಡುಗಳಲ್ಲಿ ಕೈ ಸದಸ್ಯರು ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲ್ಲಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಾರ್ಡ್ 1ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪಕ್ಷಕ್ಕೆ ಆಯ್ಕೆಯಾಗಿರುವ ರೂಪ ಅವರ ಪತಿ ಮಾಜಿ ಅಧ್ಯಕ್ಷ ಕರಿಯಪ್ಪ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿ ಸೇರ್ಪಡೆಗೊಂಡರು. ನೂತನ ಸದಸ್ಯರಾದ ಪ್ರೇಮ ಮರಯ್ಯ, ಬಿ.ಬೇಬಿ ಹೇಮಂತಕುಮಾರ್, ಮೆಡಿಕಲ್ ಆರ್.ನಾಗರಾಜು, ಮಹದೇವಮ್ಮ, ಟಿ.ಎಂ.ನಂಜುಂಡಸ್ವಾಮಿ, ಎನ್.ಸೋಮಣ್ಣ, ಎಸ್.ಮದನ್ ರಾಜ್, ರಾಜೇಶ್ವರಿ ರಾಘವೇಂದ್ರ, ನಾಗರತ್ನ ಮಾದೇಶ ಹಾಗೂ ಬಾದಾಮಿ ಮಂಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಮಾಜಿ ಶಾಸಕ ಎಸ್.ಜಯಣ್ಣ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಮಾಜಿ ಸದಸ್ಯ ಕೆ.ಮಹದೇವ, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವಣ್ಣ, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಗ್ರಾ.ಪಂ ಮಾಜಿ ಅಧ್ಯಕ್ಷ ಬಿಎಂಕೆ ಹುಂಡಿ ಮಹದೇವು, ಮುಖಂಡರಾದ ಎಂ.ವೆಂಕಟೇಶ್(ವೆಂಕಿ), ಬಿ.ಮಂಟೇಲಿಂಗಪ್ಪ, ಮಹದೇವಮ್ಮ, ಶಾಂತಮ್ಮ ಹಾಗೂ ಇನ್ನಿತರರು ಹಾಜರಿದ್ದರು.

Translate »