ಮಳೆ ನಿಂತರೂ ನಿಂತಿಲ್ಲ ಕೊಡಗಿನ ಬವಣೆ: ವ್ಯಾಪಾರ-ವ್ಯವಹಾರ ಸ್ಥಗಿತ… ಕಾರ್ಮಿಕರಿಗೂ ಕೆಲಸವಿಲ್ಲ
ಕೊಡಗು

ಮಳೆ ನಿಂತರೂ ನಿಂತಿಲ್ಲ ಕೊಡಗಿನ ಬವಣೆ: ವ್ಯಾಪಾರ-ವ್ಯವಹಾರ ಸ್ಥಗಿತ… ಕಾರ್ಮಿಕರಿಗೂ ಕೆಲಸವಿಲ್ಲ

September 5, 2018

ಮಡಿಕೇರಿ: ಮಹಾಮಳೆಯ ರಣಕೇಕೆಯಿಂದ ಜಿಲ್ಲೆಯ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬಿದ್ದಿದೆ. ಅಂಗಡಿ, ಮಳಿಗೆಗಳು, ಶಾಪಿಂಗ್ ಸೆಂಟರ್‍ಗಳೆಲ್ಲವೂ ಬಣಗುಡುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಇಂದಿಗೂ ಆರ್ಥಿಕತೆ ಚೇತರಿಕೆ ಕಂಡಿಲ್ಲ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಸ್ತೆ ಧ್ವಂಸಗೊಂಡಿರುವುದು, ಭೂ ಕುಸಿತ ಮತ್ತಿತರ ಕಾರಣಗಳಿಂದ ಜನರು ಕೂಡ ನಗರ ಪಟ್ಟಣಗಳ ಕಡೆ ಮುಖ ಮಾಡು ತ್ತಿಲ್ಲ. ಭತ್ತ, ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳು ಕೂಡ ಭಾರಿ ಪ್ರಮಾಣದಲ್ಲಿ ನಾಶಗೊಂಡಿದ್ದು, ವ್ಯಾಪಾರ ವಹಿವಾಟು ಕ್ಷೀಣಗೊಳ್ಳಲು ಕಾರಣವಾಗಿದೆ. ಮಡಿ ಕೇರಿಯ ಸುತ್ತಮುತ್ತಲ ಗ್ರಾಮಗಳ ರಸ್ತೆ ಗಳು ಭಾರಿ ಹಾನಿಗೆ ತುತ್ತಾಗಿರುವುದರಿಂದ ಖಾಸಗಿ ಬಸ್‍ಗಳ ಸಂಚಾರ ಕೂಡ ದುಸ್ಥರ ವಾಗಿ ಪರಿಣಮಿಸಿದ್ದು, ಇರುವ ರಸ್ತೆಗಳಲ್ಲಿ ನಷ್ಟದಿಂದಲೇ ಬಸ್‍ಗಳು ಸಂಚರಿಸಬೇ ಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯಲ್ಲಿ 3500 ಮಂದಿ ಕಾರ್ಮ ಕರು ಖಾಸಗಿ ಬಸ್ ಉದ್ಯಮವನ್ನೇ ನಂಬಿ ಕೊಂಡು ಬದುಕು ಕಟ್ಟಿಕೊಂಡಿದ್ದು, ಅವರ ಭವಿಷ್ಯ ಕೂಡ ಅತಂತ್ರವಾಗಿದೆ. ಚಾಲಕರು, ನಿರ್ವಾಹಕರು, ಕ್ಲೀನರ್‍ಗಳ ಸಂಬಳ ಕೂಡ ಕಡಿತ ಮಾಡಲಾಗುತ್ತಿದ್ದು, ಸಂಸಾರ ನಿರ್ವ ಹಣೆ ಹೇಗೆಂಬ ಚಿಂತೆ ಅವರನ್ನು ಕಾಡುತ್ತಿದೆ. ಟ್ಯಾಕ್ಸಿಗಳು, ಆಟೋರಿಕ್ಷಾಗಳು ಕೂಡ ಬಾಡಿಗೆ ಇಲ್ಲದೆ ದಿನ ದೂಡುವಂತಾಗಿದೆ.

ಕಳೆದ 2 ದಿನಗಳಿಂದ ಮಳೆ ಸಂಪೂರ್ಣ ವಿರಾಮ ನೀಡಿದ್ದು, ಬಿಸಿಲಿನ ದರ್ಶನ ವಾಗುತ್ತಿದೆ. ಭಾರಿ ಮಳೆಯಿಂದ ಕಂಗೆಟ್ಟಿದ್ದ ಜನರಿಗೆ ಇದರಿಂದ ನೆಮ್ಮದಿ ದೊರೆ ತಂತಾಗಿದೆ.

ಪ್ರವಾಸೋದ್ಯಮ ಕ್ಷೇತ್ರ ಕೂಡ ಕುಗ್ಗಿ ಹೋಗಿದ್ದು ಹೋಂ ಸ್ಟೆ, ಲಾಡ್ಜ್‍ಗಳು ನಷ್ಟ ಅನುಭವಿಸುತ್ತಿವೆ. ಒಟ್ಟಿನಲ್ಲಿ ಮಹಾ ಮಳೆ ಪ್ರವಾಹ ಮತ್ತು ಭೂ ಕುಸಿತ ದೊಂದಿಗೆ ಜಿಲ್ಲೆಯ ಆರ್ಥಿಕತೆಯ ಮೇಲೂ ಮುನಿ ಸನ್ನು ಮುಂದುವರಿಸಿದಂತಿದೆ.

Translate »