ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ; ಸಿಹೆಚ್‍ವಿ
ಕೊಡಗು

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ; ಸಿಹೆಚ್‍ವಿ

April 24, 2018

ವಿರಾಜಪೇಟೆ: ಕಾಂಗ್ರೆಸ್ ಸರಕಾರ ಐದು ವರ್ಷದ ಅವಧಿಯಲ್ಲಿ ರಾಜ್ಯದ ಜನತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಂಸದ ವಿಜಯಶಂಕರ್ ಹೇಳಿದರು.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕ್ಷೇತ್ರದ ಅಭ್ಯರ್ಥಿ ಚಪ್ಪುಡಿರ ಅರುಣ್ ಮಾಚಯ್ಯ ಅವರು ನಾಮಪತ್ರ ಸಲ್ಲಿಸುವ ಮುನ್ನ ಪಟ್ಟಣದ ಸೆರಿನಿಟಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು-ಮುಖಂಡರುಗಳ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯಶಂಕರ್, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕ್ಷಣದಲ್ಲಿ ನೀಡಿದ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರಲ್ಲದೆ, ಕೇಂದ್ರದ ನರೇಂದ್ರ ಮೋದಿ ಮಾತಿನಲ್ಲೇ ಜನರನ್ನು ಮೋಡಿಮಾಡಿ ಅಧಿಕಾರಕ್ಕೆ ಬಂದಿದ್ದು, ಅವರ ಭರವಸೆಗಳು ಜನರಿಗೆ ತಲುಪಿಲ್ಲ ಎಂದರು.

ರಾಜ್ಯ ರೇಷ್ಮೆ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು-ಮತದಾರರು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ ಅವರನ್ನು ಗೆಲ್ಲಿಸಲು ಪಣ ತೊಡಬೇಕಾಗಿದೆ. ಕಾಂಗ್ರೆಸ್ ಸರಕಾರ ಜನರ ಮನೆಮಾತಾಗಿದೆ ಎಂದರು. ಹಿರಿಯ ವಕೀಲರಾದ ಚಂದ್ರಮೌಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಕಾರ್ಯಪ್ರವೃತ್ತರಾಗಬೇಕು. ನಾನುಕೂಡ ಸದಾ ನಿಮ್ಮೊಂದಿಗೆ ಇದ್ದು ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸಮಾಡಿ ಪಕ್ಷದ ಅಭ್ಯಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಪಕ್ಷದ ಮುಖಂಡರು ನನ್ನ ಮೇಲೆ ವಿಶ್ವಸವನ್ನಿಟ್ಟು ಆಯ್ಕೆ ಮಾಡಿದ್ದಾರೆ. ಅದನ್ನು ನಾನು ಉಳಿಸಿಕೊಳ್ಳಲು ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಸಹಕಾರ ನೀಡುವಂತೆ ಮನವಿ ಮಾಡಿದರಲ್ಲದೆ, ನನ್ನಿಂದ ಲೋಪದೋಷಗಳಿದ್ದಲ್ಲಿ ಚರ್ಚೆನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಶಿವುಮಾದಪ್ಪ ಅಧ್ಯಕ್ಷತೆ ವಹಿಸಿ ಪಕ್ಷದ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸಲು ಮುಂದಾಗಬೇಕು ಎಂದರು. ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮಾತನಾಡಿ, ಈ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಕಾರ್ಯಕರ್ತರ ಕರ್ತವ್ಯವಾಗಿದೆ ಎಂದರು. ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಪಕ್ಷದ ಮುಖಂಡರಾದ ಜೆ.ಎ.ಕರುಂಬಯ್ಯ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ ಇತರರು ಸಭೆಯಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಧರ್ಮಜ್ ಉತ್ತಪ್ಪ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್, ಸೇವಾದಳದ ಚಿಲ್ಲವಂಡ ಕಾವೇರಪ್ಪ, ಮುಖಂಡರುಗಳಾದ ವಿ.ಕೆ.ಸತೀಶ್, ಪಿ.ಎ.ಹನೀಫ್, ಅಬ್ದುಲ್ ರೆಹಮಾನ್ ಸೇರಿದಂತೆ ತಾಲೂಕು-ಹೋಬಳಿ ಮಟ್ಟದ ಬೂತ್ ಮಟ್ಟದ ಸದಸ್ಯರುಗಳು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಪಟ್ಟಣದ ಮುಖ್ಯ ಬೀದಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಾದ್ಯಗೋಷ್ಠಿಯೊಂದಿಗೆ ಸೆರಿನಿಟಿ ಸಭಾಂಗಣದ ವರೆಗೆ ಮೆರವಣ ಗೆ ನಡೆಸಿದರು.

Translate »